Breaking News

ಅಕ್ರಮ ಸಾಗಾಟದ ಮರಳು ವಶ

ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರಳು ಲಾರಿಗಳು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭ ಸ್ಥಳೀಯರ ಮಾಹಿತಿ ಮೇರೆಗೆ ವಿಟ್ಲ ಪೊಲೀಸರ ತಂಡ ದಾಳಿ ನಡೆಸಿ ಮೂರು ಲಾರಿಗಳನ್ನು ವಶಕ್ಕೆ ಪಡೆದ ಘಟನೆ ಮಂಗಳವಾರ ಅಡ್ಯನಡ್ಕ ಸಮೀಪದ ಕೋಡಂದೂರಿನಲ್ಲಿ ನಡೆದಿದ್ದು, ಸಾಗಾಟಗಾರರು ಲಾರಿಯನ್ನು ಠಾಣೆಗೆ ಕೊಂಡೊಯ್ಯುವ ವೇಳೆ ಮರಳುಗಳನ್ನು ರಸ್ತೆಗೆ ಚೆಲ್ಲಿ ಮರಳು ಸಾಗಾಟ ಮಾಡಿಲ್ಲ ಎಂದು ಹೇಳಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಘಟನೆಯೂ ನಡೆದಿದೆ.ಕೇಪು ಆಶ್ರಮ ಶಾಲೆಯ ಸಮೀಪದ ರಸ್ತೆ ಮೂಲಕ ಕೇಪು ಪದವು ಕೊಲ್ಲಪದವು ಮೂಲಕ ಚೆಕ್ ಪೋಸ್ಟ್ ಗಳನ್ನು ತಪ್ಪಿಸಿಕೊಂಡು ಕೇರಳವನ್ನು ಸಾಗುವ ಕಳ್ಳದಾರಿಯ ಮೂಲಕ ಕೆಲವು ದಿನಗಳಿಂದ ಮರಳು ಸಾಗಣೆ ಮಾಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ವಿಟ್ಲ ಠಾಣಿಗೆ ದೂರು ನೀಡಿದ್ದರು.ಮಂಗಳವಾರ ಅಡ್ಯನಡ್ಕ ತೋರಣಕಟ್ಟೆ ರಸ್ತೆಯ ಕೋಡಂದೂರು ಎಂಬಲ್ಲಿ ಮೂರು ಮರಳು ತುಂಬಿದ ಲಾರಿಗಳು ರಸ್ತೆ ಬದಿಯಲ್ಲಿ ನಿಂತು ಚಾಲಕರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಮತ್ತೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ದಾಳಿ ನಡೆಸಿ ಮೂರು ಲಾರಿಗಳನ್ನು ವಶಕ್ಕೆ ಪಡೆದುಕೊಂಡು ಅಡ್ಯನಡ್ಕ ಮೂಲಕ ವಿಟ್ಲಕ್ಕೆ ಕೊಂಡೊಯ್ಯಲು ಹೊರಟಿದ್ದಾರೆ.ಈ ಸಮಯ ಎರಡು ಲಾರಿ ಚಾಲಕರು ಮರಕ್ಕಿಣಿ ಸಮೀಪ ಲಾರಿಯಿಂದ ರಸ್ತೆಯಲ್ಲಿ ಮರಳು ಚೆಲ್ಲಿ ತಮ್ಮ ಲಾರಿಯಲ್ಲಿ ಮರಳು ಸಾಗಾಟ ಆಗಿಲ್ಲ ಎಂಬಂತೆ ಮಾಡಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಒಂದು ಲಾರಿಯನ್ನು ವಿಟ್ಲ ಪೊಲೀಸ್ ಠಾಣೆಗೆ ಕೊಂಡೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ರಸ್ತೆಯ ಬದಿಯಲ್ಲಿ ಎರಡು ಟಿಪ್ಪರ್ ಮರಳು ಚೆಲ್ಲಿ ಹೋದ ಮಾಹಿತಿ ತಿಳಿಯುತ್ತಿದ್ದಂತೆ ಪಿಕಪ್ ಚಾಲಕರು ಹಾರೆ ಬುಟ್ಟಿ ಹಿಡಿದು ಸ್ಥಳಕ್ಕೆ ದಾವಿಸಿ ಒಂದೇ ಸಮನೆ ತಮ್ಮ ವಾಹನದೊಳಗೆ ತುಂಬಿಸಿಕೊಂಡು ತಮ್ಮ ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಕೆಲವು ಸ್ಥಳದಿಂದಲೇ ಅತೀ ಅಗತ್ಯ ಮರಳು ಬೇಕಾದವರಿಗೆ ವ್ಯಾಪಾರವನ್ನೂ ನಡೆಸಿದ್ದಾರೆ.ಅದೇ ರೀತಿ ಕೆಲವು ದಿನಗಳಿಂದ ಒಕ್ಕೆತ್ತೂರು ಹೊಳೆಯ ತಪ್ಪಲಲ್ಲಿ, ಕೆಲವು ವ್ಯಕ್ತಿಗಳು ಆರಂಭಿಸಿದ್ದಾರೆ. ಸ್ಥಳೀಯರು ಈ ಬಗ್ಗೆ ಪಟ್ಟಣ ಪಂಚಾಯಿತಿ, ಗಣಿ ಇಲಾಖೆ, ಪೊಲೀಸ್ ಇಲಾಖೆಗೆ ದೂರು ನೀಡಿದ್ದರು. ಆದರೆ ದಾಳಿ ನಡೆಸುವ ಕಾರ್ಯಕ್ಕೆ ಯಾರೊಬ್ಬರೂ ಮುಂದಾಗಿರಲಿಲ್ಲ. ಬಳಿಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ದಾಳಿ ನಡೆದಿದ್ದು, ಪೊಲೀಸರನ್ನು ಕಂಡ ದಂಧೆ ಕೋರರು ಹೊಳೆಯಲ್ಲೇ ಪಲಾಯನ ಮಾಡಿದ್ದಾರೆ. ಪೊಲೀಸರು ಬರಿಕೈಯಲ್ಲಿ ಠಾಣೆಗೆ ಮರಳಿದ್ದಾರೆ.

Related posts

Leave a Reply