Header Ads
Header Ads
Breaking News

ಅಡಿಕೆ ಕಳವು ಪ್ರಕರಣ: ಓರ್ವ ಆರೋಪಿಯ ಬಂಧನ

ಉಪ್ಪಿನಂಗಡಿ: ಅಡಿಕೆ ಕಳವು ಪ್ರಕರಣವನ್ನು ವಾರದೊಳಗೆ ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, ಬಂಧಿತನಿಂದ ೧ ಕಾರು ಸಮೇತ ಒಟ್ಟು 4.25 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. ಇನ್ನೋರ್ವ ಆರೋಪಿ ಪೊಲೀಸರ ಕಾರ್ಯಾಚರಣೆ ಸಂದರ್ಭ ಓಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

ಕೌಕ್ರಾಡಿ ಗ್ರಾಮದ ನೆಲ್ಯಾಡಿ ಬಳಿಯ ಕುಂಡಡ್ಕ ನಿವಾಸಿ ಸರ್ಫ್‌ರಾಜ್ ಯಾನೆ ಹುಸೈನ್ ಸರ್ಫ್‌ರಾಜ್ (30) ಬಂಧಿತ ಆರೋಪಿ. ಈ ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ಸರ್ಫ್‌ರಾಜ್‌ನ ನೆರೆಮನೆಯವನಾದ ಅಶ್ಫಾಕ್ ಎಂಬಾತ ಪೊಲೀಸರ ಕಾರ್ಯಾಚರಣೆ ಸಂದರ್ಭ ಓಡಿ ತಪ್ಪಿಸಿಕೊಂಡಿದ್ದಾನೆ. ಮಠದ ಕೆರೆಮೂಲೆ ನಿವಾಸಿ ಮುಹಮ್ಮದ್ ಹನೀಫ್ ಎಂಬವರ ನೆಲ್ಯಾಡಿಯಲ್ಲಿರುವ ಎಚ್.ಎನ್. ಸುಪಾರಿ ಟ್ರೇಡರ್‍ಸ್‌ನಿಂದ ಮಾ.25ರಂದು ರಾತ್ರಿ ಅಂಗಡಿಯ ಮಾಡಿನ ಹಂಚು ತೆಗೆದು ಒಳನುಗ್ಗಿದ ಆರೋಪಿಗಳು ಅಂಗಡಿಯಲ್ಲಿದ್ದ 520 ಕೆ.ಜಿ. ಅಡಿಕೆ ಕಳವು ನಡೆಸಿದ್ದರು. ಸೋಮವಾರ ಬೆಳಗ್ಗೆ ಅಂಗಡಿಯ ಬಾಗಿಲು ತೆರೆದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಠಾಣಾ ಉಪನಿರೀಕ್ಷಕ ನಂದ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ತನಿಖೆ ಕೈಗೆತ್ತಿಕೊಂಡಿದ್ದರು

ದ.ಕ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವೀಕಾಂತೇ ಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್ ಕುಮಾರ್, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಎಂ. ಗೋಪಾಲ ನಾಯ್ಕ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕ ನಂದಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಹರೀಶ್ಚಂದ್ರ, ಪ್ರವೀಣ್ ರೈ, ಜಗದೀಶ್, ಇರ್ಷಾದ್, ಶ್ರೀಧರ್, ಚಾಲಕ ನಾರಾಯಣ ಗೌಡ ಮತ್ತು ನೆಲ್ಯಾಡಿ ಹೊರಠಾಣಾ ಎಎಸ್‌ಐ ಚೆನ್ನಪ್ಪ ಗೌಡ ಮತ್ತು ಸಿಬ್ಬಂದಿ ಶೇಖರ ಗೌಡ ಹಾಗೂ ದ.ಕ. ಜಿಲ್ಲಾ ಗಣಕ ಯಂತ್ರ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ್ ಭಾಗವಹಿಸಿದ್ದರು. ಈ ಪ್ರಕರಣವನ್ನು ಶೀಘ್ರವಾಗಿ ಬೇಧಿಸಿದ ತಂಡಕ್ಕೆ ಇಲಾಖಾ ಮೇಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.