Header Ads
Header Ads
Breaking News

ಅಡಿಕೆ ತೋಟಕ್ಕೆ ಬಾಧಿಸಿದ ’ಸ್ಪಿಂಡ್‌ಲ್ ಬಗ್ ಇನ್‌ಫೆಕ್ಷನ್’ ರೋಗ

ಮೂಡುಬಿದಿರೆ : ಮೂಡುಬಿದಿರೆ ಪುತ್ತಿಗೆ ಹಾಗೂ ದರೆಗುಡ್ಡೆ ಗ್ರಾಮಗಳಲ್ಲಿ ವಿಚಿತ್ರ ರೋಗಗಳಿಂದ ಬಳಲುತ್ತಿರುವ ಅಡಕೆಗಿಡಗಳ ತೋಟಗಳಿಗೆ ಸಿಪಿಸಿಆರ್‌ಐ ವಿಜ್ಞಾನಿ, ತಾಂತ್ರಿಕ ಸಹಾಯಕರು ಹಾಗೂ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿದರು. ಕೃಷಿಕರ ಜೊತೆ ಸಮಾಲೋಚಿಸಿ ಅಡಕೆ ಸಸಿಗಳಿಗೆ ‘ಸ್ಪಿಂಡ್‌ಲ್ ಬಗ್ ಇನ್‌ಫೆಕ್ಷನ್’ ರೋಗ ಬಾಧಿಸಿದ್ದು, ಅದಕ್ಕೆ ಬೇಕಾದ ಪರಿಹಾರ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು. ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಕೊಡ್ಯಡ್ಕ ಮಿತ್ತಬಲ್‌ನ ಆಗಸ್ಟಿನ್ ಪಿಂಟೋ ಹಾಗೂ ಪರಿಸರದ ಗೋವರ್ಧನ ನಾಯಕ್ ಅವರ ರೋಗ ಬಾಧಿತ ಅಡಕೆ ತೋಟಕ್ಕೆ ಭೇಟಿ ನೀಡಿ ಗಿಡಗಳನ್ನು ಪರೀಕ್ಷಿಸಿದರು. ಸಿಪಿಸಿಆರ್‌ಐ ಪ್ಲಾಂಟ್ ಪೆಥೋಲಜಿ ವಿಜ್ಞಾನಿ ಡಾ.ಥಾವಾ ಪ್ರಕಾಶನ್ ಪಾಂಡಿಯನ್ ರೈತರ ಜೊತೆ ಮಾತನಾಡಿ, ಈ ರೋಗವು ಸ್ಪಿಂಡ್‌ಲ್ ಬಗ್ ಇನ್‌ಫೆಕ್ಷನ್‌ನಿಂದಾಗಿದೆ.

ಸುಳಿಯ ಭಾಗದಲ್ಲಿ ಕೀಟವು ರಸ ಹೀರಿ, ಕೆರೆದು ಹಾಕಿದಂತಾಗುತ್ತದೆ. ಮಳೆಗಾಲ ಕಳೆಯುತ್ತಿದ್ದಂತೆ ಈ ಸಿರಿಯ ಭಾಗ ಮೇಲೆ ಬರುವಾಗ ಆ ಭಾಗ ಬಲಹೀನವಾಗಿ, ಒಣಗಿ, ಸುಟ್ಟು ಹೋದಂತೆ ಹೊರಹೊಮ್ಮುತ್ತದೆ. ‘ಥಿಮೆಟ್’ ಸ್ಯಾಚೆಟ್‌ಗಳನ್ನು ಈ ಭಾಗದಲ್ಲಿಡಬೇಕು. ಇದರೊಂದಿಗೆ ಥಿಯಾಮೆಥಾಕ್ಸೊಂ ಎಂಬ ಕೀಟ ನಾಶಕವನ್ನು ಸ್ಪ್ರೇ ಮಾಡಬೇಕು ಎಂದು ಪರಿಹಾರ ಮಾರ್ಗದ ಬಗ್ಗೆ ತಿಳಿಸಿದರು. ಮೂಡಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ನಿಕಟಪೂರ್ವ ಅಧ್ಯಕ್ಷ, ಮಂಗಳೂರು ಕೆವಿಕೆ ಗೌರವ ಸಲಹೆಗಾರ ರಾಜವರ್ಮ ಬೈಲಂಗಡಿ, ಆನೆಗುಡ್ಡೆಯ ಪಾರ್ಶ್ವನಾಥ ಜೈನ್, ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ, ಕಡಂದಲೆ ಪೌಲ್ ಡಿ’ಸೋಜ ಉಪಸ್ಥಿತರಿದ್ದರು.

Related posts

Leave a Reply