Header Ads
Breaking News

ಅಡಿಕೆ ಮರಗಳಿಗೆ ಹಬ್ಬಿದ ಕೊಳೆರೋಗ .ಕೃಷಿಕರ ಮೇಲೆ ಭಾರೀ ಹೊಡೆತ.

ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆ ಈ ಭಾಗದ ಕೃಷಿಕರ ಮೇಲೆ ಹಲವು ರೀತಿಯ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳನ್ನು ಬೀರಿದೆ. ಒಂದೆಡೆ ಭಾರೀ ಮಳೆಯಿಂದಾಗಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಬೋಡೋ ದ್ರಾವಣವನ್ನೂ ಸಿಂಪಡಿಸಲಾಗದ ಸ್ಥಿತಿಯಲ್ಲಿದ್ದ ಕೃಷಿಕನ ತೋಟಗಳಲ್ಲಿ ಅಡಿಕೆ ಕೊಳೆರೋಗ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಕೇವಲ ಅಡಿಕೆಗೆ ಕೊಳೆರೋಗವಾದರೆ ಸಹಿಸಿಕೊಳ್ಳುತ್ತಿದ್ದ ಕೃಷಿಕನಿಗೆ ಇದೀಗ ಭಾರೀ ಹೊಡೆತವೊಂದು ಬಿದ್ದಿದೆ. ಅಡಿಕೆ ಕೊಳೆರೋಗ ಅಡಿಕೆ ಮರಗಳಿಗೂ ಹಬ್ಬಿದ್ದು, ಮರಗಳು ಬುಡ ಸಮೇತ ಒಣಗಲಾರಂಭಿಸಿದೆ.ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರ ಪ್ರಮುಖ ಜೀವನಾಧಾರವಾದ ಅಡಿಕೆ ಕೊಳೆರೋಗದಿಂದ ಸಂಪೂರ್ಣ ನಾಶವಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಸುರಿದ ಮಳೆ ಅಡಿಕೆ ತೋಟಗಳನ್ನು ಸಂಪೂರ್ಣ ನಾಶ ಮಾಡಿದೆ.

ಜಿಲ್ಲೆಯಲ್ಲಿ ಸುಮಾರು 34,977 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು ಇದರಲ್ಲಿ ಸುಮಾರು 17 ಸಾವಿರ ಹೆಕ್ಟೇರ್ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಸರಕಾರ ಈ ಬಗ್ಗೆ ವರದಿಯನ್ನು ತರಿಸಿಕೊಂಡಿದ್ದು, ಸೂಕ್ತ ಪರಿಹಾರ ನೀಡುವ ಭರವಸೆಯನ್ನೂ ನೀಡಿದೆ. ಈ ನಡುವೆ ಅಡಿಕೆಯ ಜೊತೆಗೆ ಇದೀಗ ಅಡಿಕೆ ಮರಗಳಿಗೂ ಕೊಳೆರೋಗ ಆವರಿಸಿಕೊಂಡಿದೆ. ಈ ರೋಗಕ್ಕೆ ತುತ್ತಾದ ಅಡಿಕೆ ಮರಗಳ ಕೊಂಬೆಗಳು ಹಳದಿ ಬಣ್ಣಕ್ಕೆ ತಿರುಗಿ ಬಳಿಕ ಒಣಗಿ ನಾಶವಾಗಲಾರಂಭಿಸಿದೆ.ಅಡಿಕೆ ಮರಗಳಿಗೆ ಕೊಳೆರೋಗವಿರುವ ಲಕ್ಷಣಗಳು ಪುತ್ತೂರು ತಾಲೂಕಿನ ಹಲವು ತೋಟಗಳಲ್ಲಿ ಈಗಾಗಲೇ ಕಾಣಿಸಿಕೊಳ್ಳಲಾರಂಭಿಸಿದೆ. ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ಈ ರೀತಿಯ ಬೆಳವಣಿಗೆ ಕೃಷಿಕರನ್ನು ಕಂಗೆಡಿಸಿದೆ.ಅಡಿಕೆಗೆ ಕೊಳೆರೋಗ ಬಾಧಿಸಿದರೆ ಅದು ಕೇವಲ ಒಂದು ವರ್ಷದ ಸಮಸ್ಯೆಯಾದರೆ, ಅಡಿಕೆ ಮರಗಳಿಗೆ ಈ ರೋಗ ಕಾಣಿಸಿಕೊಂಡ ಕಾರಣ ಹತ್ತಿಪ್ಪತ್ತು ವರ್ಷ ಸಾಕಿದ ಮರಗಳು ನಾಶವಾಗುತ್ತಿರುವುದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ.ತೋಟಗಾರಿಕಾ ಇಲಾಖೆ ಅಡಿಕೆ ಕೃಷಿಕರ ಬಗ್ಗೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎನ್ನುವ ನೋವೂ ಕೃಷಿಕರಲ್ಲಿದೆ.ಅಡಿಕೆಯನ್ನೆ ತನ್ನ ಜೀವನಾಧಾರವನ್ನಾಗಿ ಆಯ್ದು ಕೊಂಡಿರುವ ಕೃಷಿಕರು ಇದೀಗ ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಒಂದೊಂದು ತೋಟದಲ್ಲಿ ನೂರಕ್ಕೂ ಮಿಕ್ಕಿದ ಅಡಿಕೆ ಮರಗಳು ನಾಶವಾಗಲಾರಂಭಿಸಿದ್ದು, ಸರಕಾರ ಇತ್ತ ಗಮನ ಹರಿಸಬೇಕಿದೆ.

 

Related posts

Leave a Reply