Breaking News

ಅಡ್ಡ ಬೋರ್‌ವೆಲ್ ಕೊರೆಯುವ ಮೂಲಕ ಸಮರ್ಪಕ ನೀರು, ಅಡ್ಡ ಬೋರ್ ಮಹಮ್ಮದ್‌ರಿಂದ ಕೃಷಿಕರ ಸಮಸ್ಯೆ ನಿವಾರಣೆ


ಬೇಸಿಗೆ ಬಂದರೆ ಸಾಕು. ಕೃಷಿಕರು ಹಾಗೂ ಜನಸಾಮಾನ್ಯರು ನೀರಿಗಾಗಿ ಪರದಾಟ ನಡೆಸುವುದು ಸಾಮಾನ್ಯವಾಗಿದೆ. ಆದ್ರೆ ಇಲ್ಲೊಬ್ಬ ಕೃಷಿಕ ಅಡ್ಡ ಬೋರ್‌ವೆಲ್ ಕೊರೆಯುವ ಮೂಲಕ ಸಮರ್ಪಕ ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಟ್ಲ ಕಸಬಾ ಗ್ರಾಮದ ಸೇರಾಜೆ ಸುಬ್ರಹ್ಮಣ್ಯ ಭಟ್ ಅವರು ತನ್ನ ೨.೫ ಎಕರೆ ತೋಟದಲ್ಲಿ ಸುಮಾರು ಹತ್ತು ಕೊಳವೆಬಾವಿಗಳನ್ನು ಕೊರೆಸಿ ನೀರು ಸಿಗಲಿಲ್ಲ. ತೋಟದ ಕೆರೆಯ ನೀರು ಅಡಿಕೆ ತೋಟಕ್ಕೆ ಸಾಕಾಗುತ್ತಿತ್ತು. ಆದರೆ ಮೇ ತಿಂಗಳಲ್ಲಿ ಮಳೆ ಬರದೇ ಇದ್ದರೆ ಸಂಕಷ್ಟಕ್ಕೊಳಗಾಗುತ್ತಿದ್ದರು. ಕೆರೆ ಸುಮಾರು ೨೫ ಅಡಿ ಆಳವಾಗಿದೆ. ರಿಂಗ್ ಅಳವಡಿಸಿದ್ದಾರೆ. ಈ ಕೆರೆಗೆ ೨೫ ವರ್ಷಗಳ ಹಿಂದೆ ಒಮ್ಮೆ ಅಡ್ಡ ಬೋರ್ ಕೊರೆಸಿದಾಗ ಸುಮಾರು ೧ ಇಂಚು ಲಭ್ಯವಾಗಿತ್ತು. ಅದು ಆ ವರ್ಷದ ಸಮಸ್ಯೆಯನ್ನು ನೀಗಿಸಿತ್ತು. ಈ ವರ್ಷ ಮತ್ತೆ ಅಡ್ಡ ಬೋರ್ ಕೊರೆಸಿದ್ದಾರೆ. ಸುಮಾರು ೫೦ ಅಡಿಯ ಅಡ್ಡ ಬೋರ್‌ನಲ್ಲಿ ಮತ್ತೆ ಒಂದೂಕಾಲು ಇಂಚು ನೀರು ಹರಿದುಬರುತ್ತಿದೆ. ಇದು ಈ ಬೇಸಗೆಯನ್ನು ಪಾರು ಮಾಡುತ್ತದೆ ಎಂಬ ವಿಶ್ವಾಸ ಅವರದ್ದು. ಕೊಳವೆಬಾವಿಯಲ್ಲಿ ನೀರು ಸಿಗುವುದಿಲ್ಲ. ತೋಟದಲ್ಲಿ ಆಳವಾದ ಕೆರೆಗಳಲ್ಲಿ ನೀರು ಇರುತ್ತದೆ. ಮತ್ತು ಬೇಸಗೆಯಲ್ಲಿ ಕಡಿಮೆಯಾಗುತ್ತಲೇ ಹೋಗುತ್ತದೆ. ಆಗ ಕೆರೆಯೊಳಗೆ ಅಡ್ಡಬೋರ್ ಕೊರೆದು, ನೀರು ಪಡೆಯುವುದು ಅತ್ಯಂತ ಸೂಕ್ತ. ಮಾನವ ಕಾಮಗಾರಿಯಲ್ಲೇ ಅಡ್ಡ ಬೋರ್ ಕೊರೆಯಲಾಗುವುದು. ಖರ್ಚು ಕಡಿಮೆ, ಸಿಕ್ಕಿದ ನೀರಿಗೆ ಮತ್ತೆ ನಿರ್ವಹಣೆ ವೆಚ್ಚ ಎಂಬುದಿಲ್ಲ.
ಕೊಳವೆ ಬಾವಿಯನ್ನು ಯಂತ್ರಗಳಿಂದ ಕೊರೆಸಲಾಗುತ್ತದೆ. ಇಲ್ಲಿ ಮಾನವ ರಟ್ಟೆಯ ಬಲದಿಂದ ಈ ಕಾಮಗಾರಿ ನಡೆಯಬೇಕು. ಒಂದು ಜಿಐ ಪೈಪಿನ ತುದಿಗೆ ಚೂಪಾದ ಕೆಲವು ಕಬ್ಬಿಣದ ತುಂಡುಗಳನ್ನು ವೆಲ್ಡ್ ಮಾಡಬೇಕು. ಅಂದರೆ ಅದು ಕೊರೆಯುವ ಪ್ರಬಲ ಅಸ್ತ್ರವಾಗಿ ರೂಪ ಪಡೆಯುತ್ತದೆ. ಆ ಪೈಪ್ ಸುಮಾರು ಹತ್ತು ಅಡಿ ಉದ್ದವಿರುತ್ತದೆ. ಮೂರು ನಾಲ್ಕು ಮಂದಿ ಕೆರೆಯಲ್ಲಿ ನಿಂತು, ಆ ಪೈಪನ್ನು ಹಿಡಿದು ಹಿಂದೆ ಮುಂದೆ ತಳ್ಳುತ್ತಾರೆ. ಆಗ ಅದು ಭೂಮಿಯನ್ನು ಕೊರೆಯುತ್ತಲೇ ಹೋಗುತ್ತದೆ. ಹತ್ತು ಅಡಿ ಕೊರೆದ ಬಳಿಕ ಮತ್ತೊಂದು ಪೈಪನ್ನು ಅಳವಡಿಸಿ, ಹಿಂದಿನಂತೆ ಕಾಮಗಾರಿ ಮುಂದುವರಿಯಬೇಕು. ಇನ್ನೊಂದು ಪೈಪಿನಲ್ಲಿ ಭಾರೀ ಒತ್ತಡದಲ್ಲಿ ನೀರು ಪೂರೈಸುವ ವ್ಯವಸ್ಥೆಯಿದೆ. ಭೂಮಿಯನ್ನು ಕೊರೆದಾಗ ಮಣ್ಣು ಹೊರಬರುವುದಕ್ಕೆ ಇದು ಉಪಯುಕ್ತವಾಗುತ್ತದೆ. ಅತ್ಯಂತ ಹೆಚ್ಚು ಎಂದರೆ ೫೦ರಿಂದ ೭೦ ಅಡಿ ಉದ್ದಕ್ಕೆ ಕೊರೆಯಲು ಸಾಧ್ಯ. ಮಣ್ಣು ಇದ್ದರೆ ಕಾಮಗಾರಿ ಮುಂದುವರೆಸಲಾಗುತ್ತದೆ. ಕಲ್ಲು ಅಡ್ಡ ಸಿಕ್ಕಿದಲ್ಲಿ ಕಾಮಗಾರಿ ಸ್ಥಗಿತಗೊಳಿಸಿ, ಬೇರೆ ಜಾಗವನ್ನು ಆಯ್ಕೆ ಮಾಡಬೇಕಾಗುತ್ತದೆ. ನೀರು ಸಿಕ್ಕಿದ ಬಳಿಕ ಕೆರೆಗೆ ವರತೆಯಾಗಿ ಸೇರ್ಪಡೆಗೊಳ್ಳುವ ನೀರು ಶಾಶ್ವತವಾಗಿ ಲಭ್ಯವಾಗುತ್ತದೆ.
ವಿಟ್ಲ ಸಮೀಪದ ಕೋಡಪದವು ಎಚ್. ಮಹಮ್ಮದ್ ಅವರು ಈ ಕಾಮಗಾರಿಯನ್ನು ಮುಂದುವರಿಸುತ್ತಿದ್ದಾರೆ. ೧೯೮೬ರಲ್ಲಿ ಈ ಕಾಮಗಾರಿ ಆರಂಭಿಸಿದ್ದಾರೆ. ಉಳಿದ ಸಮಯದಲ್ಲಿ ಅವರು ಬಾಡಿಗೆಗೆ ರಿಕ್ಷಾ ಓಡಿಸುತ್ತಾರೆ. ರಿಕ್ಷಾದ ಹೆಸರು ಅಡ್ಡ ಬೋರ್. ಕಳೆದ ೩೦ ವರ್ಷಗಳಿಂದ ಅವರು ಕೊರೆದ ಅಡ್ಡ ಬೋರ್ ೧,೦೦೦ಕ್ಕೂ ಅಧಿಕ. ಸುಳ್ಯ, ಪುತ್ತೂರು, ಧರ್ಮಸ್ಥಳ, ಬಂಟ್ವಾಳಗಳಲ್ಲಿ ಅವರು ಈ ಕಾಮಗಾರಿ ನಡೆಸಿ, ಅಡ್ಡಬೋರ್ ಮಹಮ್ಮದ್ ಎಂದೇ ಜನಪ್ರಿಯರಾಗಿದ್ದಾರೆ. ಅವರು ಈ ರೀತಿ ಅಡ್ಡಬೋರ್ ಕೊರೆದು ೩ ಇಂಚು ತನಕ ನೀರು ಸಿಕ್ಕಿದ್ದಿದೆ ಎನ್ನುತ್ತಾರೆ ಅಡ್ಡ ಬೋರ್ ಮಹಮ್ಮದ್ ಅವರು

Related posts

Leave a Reply