Header Ads
Breaking News

ಅತಂತ್ರ ಬದುಕಿನ ವೃದ್ಧೆಯ ಗೋಳು : ಹೆತ್ತ ಮಕ್ಕಳಿಗೂ ಬೇಡವಾದ ತಾಯಿ

ಪುತ್ತೂರು : ಕಷ್ಟಪಟ್ಟು ತನ್ನ ಮಕ್ಕಳನ್ನು ಸಾಕಿ ಬೆಳೆಸಿದ 80ರ ಹರೆಯದ ವೃದ್ಧೆಯೊಬ್ಬರಿಗೆ ಇದೀಗ ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧೆ ತನ್ನ ಮಕ್ಕಳ ಹಿಂಸೆ ತಾಳಲಾರದೆ ಪುತ್ತೂರಿನಲ್ಲಿರುವ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಬಂದು ತನ್ನ ಅಳಲು ತೋಡಿಕೊಂಡಿದ್ದಾರೆ. ಅವರನ್ನು ಮಹಿಳಾ ಸಾಂತ್ವಾನ ಕೇಂದ್ರÀದ ಸಿಬ್ಬಂದಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಪಾರ್ವತಿ ಅವರು ಇದೀಗ ಮಕ್ಕಳಿಗೆ ಬೇಡವಾದ ತಾಯಿ. ಪಾರ್ವತಿ ಅವರ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಲ್ಲಿ ಕಿರಿಯ ಪುತ್ರಿಯೊಬ್ಬರು ನಿಧನರಾಗಿದ್ದಾರೆ. ಹಿರಿಯ ಪುತ್ರಿ ಅನಾರೋಗ್ಯದಿಂದ ಬಳಲುತ್ತಿದ್ದು,ಆಕೆ ತನ್ನ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಮಕ್ಕಳ ಮನೋಸ್ಥಿತಿಯಿಂದಾಗಿ ಪಾರ್ವತಿ ಅವರ ಬದುಕು ಅತಂತ್ರವಾಗಿದೆ. ತನ್ನನ್ನು ಮಕ್ಕಳು ಸಾಕುತ್ತಿಲ್ಲ, ಹಿಂಸೆ ನೀಡುತ್ತಿದ್ದಾರೆ ಎಂದು ಪಾರ್ವತಿ ಅವರು ಒಂದು ವರ್ಷದ ಹಿಂದೆಯೇ ಪುತ್ತೂರಿನ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ದೂರಿತ್ತಿದ್ದರು. ಆ ಸಂದರ್ಭದಲ್ಲಿ ಮಹಿಳಾ ಸಾಂತ್ವಾನ ಕೇಂದ್ರದ ಸಿಬ್ಬಂದಿ ಆಕೆಯ ಮೂವರು ಪುತ್ರರನ್ನು ಹಾಗೂ ಪುತ್ರಿಯನ್ನು ಕರೆಸಿ ಮಾತುಕತೆ ನಡೆಸಿ ತಾಯಿಯನ್ನು ಸಾಕುವಂತೆ ಅವರಿಗೆ ಬುದ್ಧಿವಾದ ಹೇಳಿದ್ದರು. ಆ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ಆಕೆಯ ಮೂವರು ಪುತ್ರರು ತಲಾ 4 ತಿಂಗಳ ಕಾಲ ತಾಯಿಯನ್ನು ಸಾಕುವುದಾಗಿ ಒಪ್ಪಿಕೊಂಡಿದ್ದರು.

ಆರಂಭದಲ್ಲಿ ವೇಣೂರಿನಲ್ಲಿ ನೆಲೆಸಿರುವ ಹಿರಿಯ ಪುತ್ರ ಗಂಗಾಧರ ನಾಯ್ಕ ಅವರು 4 ತಿಂಗಳ ಕಾಲ ತಾಯಿ ಪಾರ್ವತಿ ಅವರನ್ನು ತನ್ನ ಮನೆಯಲ್ಲಿ ಸಾಕಿದ್ದರು. ಬಳಿಕ ಪಾರ್ವತಿ ಅವರು ಅಲ್ಲಿಂದ ಕುಪ್ಪೇಪದವಿನಲ್ಲಿರುವ ಕೊನೆಯ ಪುತ್ರ ಶಿವರಾಮ ನಾಯ್ಕ ಅವರ ಮನೆ ಸೇರಿಕೊಂಡಿದ್ದರು. ಅಲ್ಲಿ ನಾಲ್ಕು ತಿಂಗಳ ಕಾಲ ಕಳೆದ ಅವರು ಬಳಿಕ ಮೊಟ್ಟೆತ್ತಡ್ಕದಲ್ಲಿರುವ ತನ್ನ ಎರಡನೇ ಪುತ್ರ ಜಯಂತ ನಾಯ್ಕ ಅವರ ಮನೆ ಸೇರಿಕೊಂಡಿದ್ದರು. ಇದೀಗ ಮೊಟ್ಟೆತ್ತಡ್ಕಕ್ಕೆ ಬಂದು 3 ತಿಂಗಳಷ್ಟೇ ಆಗಿದ್ದು, ಈ ಅಲೆಮಾರಿ ಬದುಕಿನ ನಡುವಿನ ಮಾನಸಿಕ ಹಿಂಸೆಯಿಂದಾಗಿ ಆಕೆ ಕಂಗೆಟ್ಟು ಹೋಗಿದ್ದಾರೆ.
ಪುತ್ತೂರಿನ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಮಂಗಳವಾರ ಬಂದು ಗೋಳು ತೋಡಿಕೊಂಡು, ಅನಾರೋಗ್ಯದ ಹಿನ್ನಲೆಯಲ್ಲಿ ಕೇಂದ್ರದಲ್ಲೇ ಮಲಗಿದ ಪಾರ್ವತಿ ಅವರನ್ನು ಉಪಚರಿಸಿದ ಸಾಂತ್ವಾನ ಕೇಂದ್ರ ಸಿಬ್ಬಂದಿ ನಿಶಾಪ್ರಿಯ ಮತ್ತು ರೇಖಾ ಅವರು ಬಳಿಕ ಅಟೋ ರಿಕ್ಷಾವೊಂದರಲ್ಲಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಅಲೆಮಾರಿ ಜೀವನ; ವೃದ್ಧೆಯ ಗೋಳು….
ತಾನು ಮೊಟ್ಟೆತ್ತಡ್ಕದಲ್ಲಿ 5ಸೆಂಟ್ಸ್ ಜಾಗ ಮತ್ತು ಮನೆ ಹೊಂದಿದ್ದು, ಸಾಯುವ ತನಕ ಸಾಕುವ ಶರ್ತದೊಂದಿಗೆ ಆ ಜಾಗ ಮತ್ತು ಮನೆಯನ್ನು ಎರಡನೇ ಮಗ ಜಯಂತ ನಾಯ್ಕನಿಗೆ ಬರೆದು ಕೊಟ್ಟಿದ್ದೆ. ಆದರೂ ಆತ ತನ್ನನ್ನು ಸರಿಯಾಗಿ ನೋಡಿಕೊಂಡಿಲ್ಲ. ಹಾಗಾಗಿ ತಾನು ಕರ್ಕುಂಜದಲ್ಲಿದ್ದ ತನ್ನ ಪುತ್ರಿ ಶಾರದಾಳ ಮನೆಯಲ್ಲಿದ್ದೆ. ಶಾರದಾ ಅನಾರೋಗ್ಯ ಪೀಡಿತಳಾದ ಬಳಿಕ ಮತ್ತೆ ನನ್ನ ಬದುಕಿಗೆ ಸಮಸ್ಯೆಯಾಗಿದೆ. ಕಳೆದ ವರ್ಷ ನಡೆದ ಮಾತುಕತೆಯಂತೆ ಆರಂಭದ 4 ತಿಂಗಳ ಕಾಲ ಗಂಗಾಧರನ ಮನೆಯಲ್ಲಿದ್ದೆ. ಆತ ಚೆನ್ನಾಗಿಯೇ ನನ್ನನ್ನು ನೋಡಿಕೊಂಡಿದ್ದ. ಆ ಬಳಿಕ ಕುಪ್ಪೇಪದವಿನಲ್ಲಿರುವ ಕೊನೆಯ ಪುತ್ರ ಶಿವರಾಮನ ಮನೆಗೆ ಹೋಗಿದ್ದೆ. ಆದರೆ ಆತ ಮತ್ತು ಆತನ ಮನೆಯವರು ಮನೆ ಮತ್ತು ಜಾಗವನ್ನು ಜಯಂತನಿಗೆ ಕೊಟ್ಟಿರುವಾಗ ನಾವ್ಯಾಕೆ ಸಾಕಬೇಕು ಎಂಬ ಪ್ರಶ್ನೆ ಎತ್ತಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಆದರೂ ಸಹಿಸಿಕೊಂಡು 4 ತಿಂಗಳ ಕಾಲ ಅಲ್ಲಿ ಕಳೆದಿದ್ದೆ. ಈದೀಗ ಮೊಟ್ಟೆತ್ತಡ್ಕದಲ್ಲಿರುವ ಮನೆಗೆ ಬಂದು ಮೂರು ತಿಂಗಳಾಯಿತು. ಸಾಯುವ ತನಕ ಸಾಕುತ್ತೇನೆ ಎಂದು ಭರವಸೆ ಕೊಟ್ಟಿದ್ದ ಮಗ ಮತ್ತು ಸೊಸೆ ಸೇರಿಕೊಂಡು ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಊಟ -ತಿಂಡಿ ನೀಡುತ್ತಿಲ್ಲ. ಮಧ್ಯರಾತ್ರಿ ಊಟ ಕೊಡುತ್ತಿದ್ದಾರೆ. ಬಾಯಿಗೆ ಬಂದಂತೆ ಬಯ್ಯುತ್ತಿದ್ದಾರೆ. ಬಟ್ಟೆ ಬರೆಗಳನ್ನು ನಾನೇ ತೊಳೆದಿಕೊಳ್ಳಬೇಕು. ಬಟ್ಟೆ ತೊಳೆಯಲು ನೀರನ್ನೂ ಕೊಡುತ್ತಿಲ್ಲ. ಸ್ನಾನ ಮಾಡದೆ ಒಂದು ವಾರವಾಯಿತು. ಎಂದು ವೃದ್ಧೆ ಪಾರ್ವತಿ ಅವರು ತನ್ನ ಅಲೆಮಾರಿ ಜೀವನವನ್ನು ವಿವರಿಸಿದ್ದಾರೆ.

ಪಾರ್ವತಿ ಅವರು ವರ್ಷದ ಹಿಂದೆಯೇ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಬಂದು ಮಕ್ಕಳು ತನ್ನನ್ನು ಸಾಕುತ್ತಿಲ್ಲ, ಹಿಂಸೆ ಕೊಡುತ್ತಿದ್ದಾರೆ ಎಂದು ದೂರಿತ್ತಿದ್ದರು. ಆ ವೇಳೆ ಆಕೆಯ ಮೂವರು ಪುತ್ರರು ಹಾಗೂ ಪುತ್ರಿಯನ್ನು ಕರೆಸಿ ಮಾತುಕತೆ ಮಾಡಿದ್ದೆವು. ಆ ಸಂದರ್ಭದಲ್ಲಿ ಮೂವರು ಪುತ್ರರು ತಲಾ 4 ತಿಂಗಳ ಕಾಲ ಸಾಕುವುದಾಗಿ ಒಪ್ಪಿಕೊಂಡಿದ್ದರು. ಆದರೆ ಇದೀಗ ಮತ್ತೆ ಪಾರ್ವತಿ ಅವರು ಮಂಗಳವಾರ ಕೇಂದ್ರಕ್ಕೆ ಬಂದು ಅಳಲು ತೋಡಿಕೊಂಡಿದ್ದಾರೆ. ಅನಾರೋಗ್ಯದಲ್ಲಿರುವ ಹಿನ್ನಲೆಯಲ್ಲಿ ಆಕೆಯನ್ನು ನಾವು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದೇವೆ. ಮೊಟ್ಟೆತ್ತಡ್ಕದಲ್ಲಿರುವ ಆಕೆಯ ಪುತ್ರನಿಗೆ ಕರೆ ಮಾಡಿದರೂ ಆತ ಸ್ಪಂದಿಸಿಲ್ಲ. ಈ ಹಿನ್ನಲೆಯಲ್ಲಿ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದ್ದೇವೆ- ನಿಶಾಪ್ರಿಯ ಮತ್ತು ರೇಖಾ, ಮಹಿಳಾ ಸಾಂತ್ವಾನ ಕೇಂದ್ರ ಪುತ್ತೂರು.

Related posts

Leave a Reply

Your email address will not be published. Required fields are marked *