Breaking News

ಅಪಘಾತದಿಂದ ಸತ್ತ ಒಂದೇ ಕುಟುಂಬದ ೭ ಮಂದಿ, ಕಯ್ಯಾರು ಚರ್ಚ್‌ನಲ್ಲಿ ಅಂತ್ಯಸಂಸ್ಕಾರ


ತಮಿಳುನಾಡಿನ ತಿರುಚ್ಚಿ ಕರೂರಿನಲ್ಲಿ ನಡೆದ ಅಪಘಾತದಲ್ಲಿ ಮೃತರಾದ ಪೈವಳಿಕೆ ಸಮೀಪದ ಮಂಡೆಕಾಪು ನಿವಾಸಿಗಳಾದ ಒಂದೇ ಕುಟುಂಬದ ಏಳು ಮಂದಿಗಳ ಮೃತದೇಹಗಳನ್ನು ಸೋಮವಾರ ಅಪರಾಹ್ನ ಊರಿಗೆ ತಂದು ಸಾರ್ವಜನಿಕ ವೀಕ್ಷಣೆಯ ಬಳಿಕ ಕಯ್ಯಾರು ಚರ್ಚಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ವಾಹನ ಅಪಘಾತದಲ್ಲಿ ಮೃತರಾದ ಹೆರಾಲ್ಡ್ ಮೊಂತೇರೋ, ಪತ್ನಿ ಪ್ರೆಸಿಲ, ಪುತ್ರ ರೋಹಿತ್, ಹೆರಾಲ್ಡ್ ಮೊಂತೇರೋರ ಸಹೋದರ ಸತೋರಿನ್ ಮೊಂತೇರೋ, ಪುತ್ರಿ ಶರೋನಾ, ಹೆರಾಲ್ಡ್‌ರ ಇನ್ನೋರ್ವ ಸಹೋದರ ಅಲ್ವಿನ್ ಮೊಂತೇರೋ, ಸಹೋದರ ಡೆನ್ಸಿಲ್ ಮೊಂತೇರೋರ ಪತ್ನಿ ರೀಮಾ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ಭಾನುವಾರ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಸೋಮವಾರ ಮಹಜರು ನಡೆಸಿ ಸಂಜೆ ವೇಳೆ ಊರಿಗೆ ತರಲಾಯಿತು.
ಮೃತದೇಹಗಳ ಅಂತಿಮ ದರ್ಶನಕ್ಕೆ ಕಯ್ಯಾರು ಚರ್ಚ್ ಪರಿಸರದಲ್ಲಿ ಬೃಹತ್ ಸಂಖ್ಯೆಯ ಜನನಾಯಕರು, ಸಾರ್ವಜನಿಕರು ಸೇರಿದ್ದು ಕಂಡುಬಂತು. ಜಿಲ್ಲಾಧಿಕಾರಿ ಜೀವನ್ ಬಾಬು ಕೆ, ಶಾಸಕ ಪಿ. ಬಿ. ಅಬ್ದುಲ್ ರಸಾಕ್, ಮಾಜಿ ಶಾಸಕ ನ್ಯಾಯವಾದಿ ಸಿ. ಎಚ್. ಕುಂಞಿಂಬು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್, ಜಿಲ್ಲಾ ಪಂಚಾಯತು ಸದಸ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್, ಜಿಲ್ಲಾ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಸಿಪಿ‌ಎಂ ಜಿಲ್ಲಾ ಕಾರ್ಯದರ್ಶಿ ಕೆ. ಪಿ. ಸತೀಶ್ಚಂದ್ರನ್, ಮಂಜೇಶ್ವರ ತಹಶೀಲ್ದಾರ್ ಶಶಿಧರ ಶೆಟ್ಟಿ, ಮಂಜೇಶ್ವರ ಬ್ಲಾಕ್ ಪಮಚಾಯತು ಅಧ್ಯಕ್ಷ ಎಕೆ‌ಎಂ ಅಶ್ರಫ್, ಜಿಲ್ಲಾ ಪಂಚಾಯತು ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಫ್, ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ, ಬ್ಲಾಕ್ ಪಂಚಾಯತು ಸದಸ್ಯ ಪ್ರಸಾದ್ ರೈ ಕಯ್ಯಾರು, ಝಡ್. ಎ. ಕಯ್ಯಾರು ಸಹಿತ ವಿವಿಧ ಪಕ್ಷಗಳ ಗಣ್ಯರು ಅಂತಿಮ ದರ್ಶನ ಪಡೆದರು. ಮೃತದೇಹ ಮಂಗಳೂರಿನ ಕಂಕನಾಡಿಯ ಆಸ್ಪತ್ರೆಗೆ ಆಗಮಿಸಿದಲ್ಲಿಂದ ಸೋಮವಾರ ಊರಿಗೆ ಕರೆತರುವಲ್ಲಿಯ ವರೆಗೆ ಸಂಪೂರ್ಣ ಹೊಣೆಗಾರಿಕೆಯನ್ನು ಕರ್ನಾಟಕ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ ಹಾಗೂ ಶಾಸಕ ಜೆ. ಆರ್. ಲೋಬೋ ಖುದ್ದು ನಿರ್ವಹಿಸಿದರು.
ಸಾರ್ವಜನಿಕ ದರ್ಶನದ ಬಳಿಕ ಕಯ್ಯಾರು ಇಗರ್ಜಿಯ ಧರ್ಮಗುರು ವಿಕ್ಟರ್ ಡಿಸೋಜಾರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಏಳು ಶವಗಳ ದಫನ ಅಂತಿಮ ವಿಧಿಗಳು ನೆರವೇರಿದವು. ಅಪಘಾತದಲ್ಲಿ ಗಾಯಗೊಂಡು ಬದುಕುಳಿದಿರುವ ಮೃತ ಸತೋರಿನ್ ಮೊಂತೇರೋರ ಪತ್ನಿ ಜೇಶ್ಮ, ಪುತ್ರಿ ಶಾನ್ವಿ, ಅಲ್ವಿನ್‌ರ ಪತ್ನಿ ಪ್ರೀಮಾ ತಿರುಚ್ಚಿಯ ಆಸ್ಪತ್ರೆಯಲ್ಲಿ ನಿಧಾನವಾಗಿ ಚೇತರಿಸುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿರುವರು.

Related posts

Leave a Reply