Header Ads
Header Ads
Breaking News

ಅಪಾಯಕಾರಿ ನೀರಿನ ಟ್ಯಾಂಕಿಗೆ ಕೊನೆಗೂ ಸಿಕ್ತು ಮುಕ್ತಿ..!ವಿ4 ವಾಹಿನಿಗೆ ಕೃತಜ್ಙತೆ ಸಲ್ಲಿಸಿದ ದಲಿತ ನಿವಾಸಿಗಳು

ಕಳೆದ ಐದು ವರ್ಷಗಳಿಂದ ಶಿಥಿಲಗೊಂಡ ಓವರ್ ಹೆಡ್ ನೀರಿನ ಟ್ಯಾಂಕ್ ತೆರವು ಮಾಡಿಕೊಡುವಂತೆ ದಲಿತರು ನಡೆಸಿದ ಸತತ ಹೋರಾಟಕ್ಕೆ ಕೊನೆಗೂ ಫಲಸಿಕ್ಕಿದೆ. ಉಡುಪಿ ಜಿಲ್ಲಾಧಿಕಾರಿ ಜಗದೀಶ್ ನೀರಿನ ಟ್ಯಾಂಕ್ ತೆರವು ಮಾಡಲು ಆದೇಶ ನೀಡಿದ್ದು, ದಲಿತರು ನಿಟ್ಟುಸಿರು ಬಿಟ್ಟಿದ್ದಾರೆ.

ಗೋಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಹಾಗೂ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸನಿಹವಿರುವ ಅತ್ಯಂತ ಶಿಠಿಲಾವಸ್ಥೆಯಲ್ಲಿದ್ದ ನೀರಿನ ಟ್ಯಾಂಕ್ ಕೆಳಭಾಗದಲ್ಲಿ ವಾಸ ಮಾಡುತ್ತಿರುವ ದಲಿತ ಕುಟುಂಬಗಳು ಕಳೆದ ಐದು ವರ್ಷಗಳಿಂದ ನೆಮ್ಮದಿಯ ನಿದ್ದೆ ಮಾಡಿಲ್ಲ. ರಾತ್ರಿ ಮಲಗಿದರೂ ಎಲ್ಲಿ ನೀರಿನ ಟ್ಯಾಂಕ್ ಬೀಳುತ್ತದೋ ಎಂಬ ಕನವರಿಕೆಯಲ್ಲಿ ಎದ್ದು ಕೂರುತ್ತಿದ್ದು, ಪ್ರತೀದಿನ ಮಾನಸಿಕ ನೆಮ್ಮದಿ ಕಳೆದುಕೊಂಡು ಅಂಗೈಯಲ್ಲಿ ಜೀವ ಹಿಡಿದು ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಐದು ವರ್ಷಗಳಿಂದ ನೀರಿನ ಟ್ಯಾಂಕ್ ಡೆಮಾಲಿಶ್ ಮಾಡುವಂತೆ ದಲಿತ ಸಂಘರ್ಷ ಸಮಿತಿ ನಡೆಸುತ್ತಾ ಬಂದ ಹೋರಾಟಕ್ಕೆ ಇದೀಗ ಜಿಲ್ಲಾಡಳಿತ ಬೆಲೆ ಕೊಟ್ಟಿದೆ.

ಸದ್ಯ ಅಪಾಯಕಾರಿ ಸ್ಥಿತಿಯಲ್ಲಿರುವ ವಾಟರ್ ಟ್ಯಾಂಕ್ ಅನ್ನು ಉಡುಪಿ ಜಿಲ್ಲಾಡಳಿತ ಗೋಪಾಡಿ ಗ್ರಾಮ ಪಂಚಾಯಿತಿ ಜೊತೆ ಸೇರಿ ತೆರವುಗೊಳಿಸಲು ಮುಂದಾಗಿದೆ. ಟ್ಯಾಂಕ್ ಅಪಾಯದ ಸ್ಥಿತಿಯಲ್ಲಿರುವ ಬಗ್ಗೆ ದಲಿತ ಸಂಘಟನೆಗಳು ಸೇರಿದಂತೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಗ್ರಾ.ಪಂ ಹಾಗೂ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದರು. ಗ್ರಾಪಂ ಟ್ಯಾಂಕ್ ತೆರವುಗೊಳಿಸಲು ಇಂಜಿನಿಯರಿಂಗ್ ಇಲಾಖೆಯ ಅಂದಾಜು ಪಟ್ಟಿಯಂತೆ ಸುಮಾರು 2 ಲಕ್ಷ ಹಣಕಾಸಿನ ಅಗತ್ಯವಿದ್ದು, ಅನುದಾನಕ್ಕಾಗಿ ಗ್ರಾ.ಪಂ ಜಿಲ್ಲಾಡಳಿತದ ಮೊರೆಹೋಗಿತ್ತು. ಈ ಬಗ್ಗೆ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಗಮನಕ್ಕೂ ತರಲಾಗಿತ್ತು. ಇದೀಗ ಟ್ಯಾಂಕ್ ತೆರವಿಗೆ ಪ್ರಕೃತಿ ವಿಕೋಪ ನಿಧಿಯಲ್ಲಿ 1.5 ಲಕ್ಷ ಬಿಡುಗಡೆಗೊಳಿಸಿ, ಉಳಿದ 50 ಸಾವಿರ ಗ್ರಾಪಂ ಅನುದಾನದಲ್ಲಿ ಭರಿಸುವ ಮೂಲಕ ಹಲವು ಸಭೆಗಳಲ್ಲಿ ಸದ್ದು ಮಾಡುತ್ತಿದ್ದ ಅಪಾಯಕಾರಿ ನೀರಿನ ಟ್ಯಾಂಕ್‍ಗೆ ಜಿಲ್ಲಾಡಳಿತ ಮುಕ್ತಿ ನೀಡಿದೆ.

ಈ ನೀರಿನ ಟ್ಯಾಂಕಿ 1983-84ರಲ್ಲಿ ಗ್ರಾಮೀಣ ನೀರು ಪೂರೈಕೆ ಯೋಜನೆ ಮೂಲಕ ಗೋಪಾಡಿ ಬೀಜಾಡಿ ಗ್ರಾಮದ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಲಾಗಿದ್ದು, ಟ್ಯಾಂಕಿ ಶಿಥಿಲಾವಸ್ಥೆಯಲ್ಲಿದ್ದ ಪರಿಣಾಮ ಕಳೆದ ಐದಾರು ವರ್ಷಗಳಿಂದ ನೀರು ತುಂಬಿಸದೆ ಟ್ಯಾಂಕಿಯನ್ನು ಹಾಗೆಯೇ ಬಿಡಲಾಗಿತ್ತು. ಈ ಬಗ್ಗೆದಲಿತ ಕುಂದು ಕೊರೆತೆ ಸಭೆಯಲ್ಲಿ ಶಿಥಿಲಗೊಂಡ ನೀರಿನ ಟ್ಯಾಂಕ್ ಬಗ್ಗೆ ಸಂಬಂಧಪಟ್ಟ ಅಧೀಕಾರಿಗಳು ಗಮನ ಸೆಳೆದರೂ ಎಲ್ಲಾ ಅಧಿಕಾರಿಗಳು ಟ್ಯಾಂಕ್ ತೆರವು ಮಾಡುವ ಭರವಸೆ ನೀಡಿದ್ದರು. ಹಿಂದಿನ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಸೇರಿದಂತೆ ಸರ್ಕಾರಿ ಅಧಿಕಾರಿಗಳೆಲ್ಲರೂ ಸ್ಥಳಕ್ಕೆ ಬಂದು ಟ್ಯಾಂಕ್ ಸ್ಥಿತಿಯನ್ನು ಪರಿಶೀಲನೆ ನಡೆಸಿ ಹೋಗಿದ್ದರಾದರೂ ಟ್ಯಾಂಕ್ ತೆರವುಗೊಳಸುವ ಯಾವುದೇ ಗೋಜಿಗೆ ಹೋಗಿರಲಿಲ್ಲ. ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ-66 ನಡುವೆ ನಾಲ್ಕು ಮನೆ ಸೇರಿ ಐದು ಕುಟುಂಬ ವಾಸಮಾಡುತ್ತಿದ್ದು, ಮಕ್ಕಳು ಹಾಗೂ ದೊಡ್ಡವರು ಸೇರಿ ಇಪ್ಪತ್ತರಷ್ಟು ಜನಸಂಖ್ಯೆ ಇದೆ. ಟ್ಯಾಂಕ್ ಶಿಥಿಲಾವಸ್ಥೆಗೊಂಡಿರುವುದರಿಂದ ದಲಿತ ಕುಟುಂಬಕ್ಕೆ ಅಷ್ಟೇ ಅಲ್ಲದೇ ರಸ್ತೆಯಲ್ಲಿ ಪ್ರಯಾಣಿಸುವ ವಾಹನಗಳಿಗೂ ಅಪಾಯವಿತ್ತು. ದಿನಂಪ್ರತಿ ಟ್ಯಾಂಕ್ ಬಳಿ ನೂರಾರು ಜನ ಸಂಚಾರವಿದ್ದು, ಶಾಲೆಗೆ ಹೋಗುವ ಮಕ್ಕಳು ಕೂಡಾ ಇದೇ ಮಾರ್ಗದಲ್ಲಿ ಸಂಚರಿಸಬೇಕಿತ್ತು. ವಾಟರ್ ಟ್ಯಾಂಕ್ ದೊಡ್ಡ ಗಾಳಿ ಬಂದರೆ ಸಾಕು ಗಾಳಿಬಂದ ಕಡೆ ವಾಲುತ್ತಿದ್ದು, ಯಾವ ಕ್ಷಣದಲ್ಲಾದರೂ ನೆಲಸಮವಾಗುವ ಎಲ್ಲಾ ಸಾಧ್ಯತೆಗಳಿತ್ತು.

ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಅಪಾಯಕಾರಿ ನೀರಿನ ಟ್ಯಾಂಕ್ ಕುರಿತು ವಿ4 ವಾಹಿನಿ “ಗಾಳಿಗೆ ತೂಗಾಡುವ ವಾಟರ್ ಟ್ಯಾಂಕ್..ದಲಿತರ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದನೆಯಿಲ್ಲ” ಎಂಬ ವಿಶೇಷ ವರದಿ ಭಿತ್ತರಿಸುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ಸುದ್ದಿಗೊಂದು ವಿಶೇಷ ನೇರಪ್ರಸಾರ ಕಾರ್ಯಕ್ರಮದಲ್ಲಿಯೂ ಸ್ಥಳೀಯಾಡಳಿತ ಹಾಗೂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ವೇಳೆಯಲ್ಲಿ ಅಧಿಕಾರಿಗಳು ನೀರಿನ ಟ್ಯಾಂಕ್ ತೆರವು ಮಾಡುವುದಾಗಿ ವಿ4 ವಾಹಿನಿಗೆ ಭರವಸೆ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ನೀರಿನ ಟ್ಯಾಂಕ್ ಜನನಿಬಿಡ ಪ್ರದೇಶದಲ್ಲಿ ಇರುವುದರಿಂದ ಜನ ವಸತಿ, ಅಂಗಡಿ ಮುಂಗಟ್ಟು, ಶಾಲಾ ಮಕ್ಕಳು ತಿರುಗಾಡುವ ಪ್ರದೇಶ ಇರುವುದರಿಂದ ನಾಜೂಕಾಗಿ ತೆರವು ಮಾಡಬೇಕು. ಕುಂದಾಪುರ ಎಸಿ, ತಹಸೀಲ್ದಾರ್, ಆರೋಗ್ಯಾಧಿಕಾರಿ, ಅಗ್ನಿಶಾಮಕ ದಳ, ಪೊಲೀಸ್ ಸೇರಿದಂತೆ ವಿವಿಧ ಅಧಿಕಾರಿಗಳ ಸಮಕ್ಷಮ ಸಭೆ ನಡೆಸಿ, ಎಲ್ಲರ ಒಕ್ಕೂರಲ ಅಭಿಪ್ರಾಯ ಪಡೆದು ಯಾವುದೇ ಆಸ್ತಿಪಾಸ್ತಿ ಇನ್ನಿತರ ಘಟನೆ ನಡೆಯದಂತೆ ಟ್ಯಾಂಕ್ ತೆರವು ಕಾರ್ಯಕ್ಕೆ ಮುಂದಾಗಬೇಕಿದೆ.

Related posts

Leave a Reply

Your email address will not be published. Required fields are marked *