Header Ads
Breaking News

ಅಪಾಯ ಎದುರಿಸುತ್ತಿರುವ ತುಂಬೆ ವೆಂಟೆಡ್ ಡ್ಯಾಂ

ಬಂಟ್ವಾಳ: ಮಂಗಳೂರು ಮಹಾನಗರಕ್ಕೆ ನೀರೊದಗಿಸಲು ಕೋಟ್ಯಾಂತರ ರುಪಾಯಿ ವ್ಯಯಿಸಿ ನಿರ್ಮಾಣಗೊಂಡಿರುವ ತುಂಬೆಯ ವೆಂಟೆಡ್ ಡ್ಯಾಂ ಅಪಾಯ ಎದುರಿಸುತ್ತಿದೆಯೇ? ಡ್ಯಾಂ ಸನಿಹವೇ ತಡೆಗೋಡೆ ಕುಸಿದು ಬಿದ್ದು ವರ್ಷ ಕಳೆದರೂ ಇನ್ನೂ ಪುನರ್ ನಿರ್ಮಾಣ ಕಾಮಾಗಾರಿ ನಡೆಯದೇ ಇರುವುದರಿಂದ ಈ ಬಾರಿ ಮತ್ತಷ್ಟು ಭೂ ಕುಸಿತ ಉಂಟಾಗುವ ಆತಂಕ ಎದುರಾಗಿದೆ. ಡ್ಯಾಂನಿಂದ ನೀರು ಹರಿದು ಹೋಗುವ ಜಾಗದಲ್ಲಿ ಕಾಂಕ್ರೀಟ್ ಕರಗಿದ್ದು ಕಬ್ಬಿಣದ ಸರಳುಗಳು ಕಾಣಿಸಲಾರಂಭಿಸಿದೆ. ನಿರ್ವಹಣೆಯ ಕೊರತೆಯಿಂದಾಗಿ ಡ್ಯಾಂಗೆ ಈ ಸಂಕಷ್ಟ ಎದುರಾಗಿದೆ.  ಮಂಗಳೂರಿಗೆ ನೀರು ಪೂರೈಕೆ ಮಾಡಲು ತುಂಬೆಯಲ್ಲಿ ನಿರ್ಮಾಣಗೊಂಡಿರುವ ಹೊಸ ಡ್ಯಾಂನ ಒಂದು ಪಾರ್ಶ್ವದಲ್ಲಿ ನದಿ ಬದಿಯ ಮಣ್ಣಿನ ಗೋಡೆ ಕುಸಿಯಂದಂತೆ ಕಪ್ಪು ಕಲ್ಲಿನಲ್ಲಿ ತಡೆಗೋಡೆಯನ್ನು ಈ ಹಿಂದೆ ನಿರ್ಮಿಸಲಾಗಿತ್ತು. ಆದರೆ ಕಳೆದ ಮಳೆಗಾಲದಲ್ಲಿ ಹಳೆ ಡ್ಯಾಂ ಮತ್ತು ಹೊಸ ಡ್ಯಾಂನ ಮಧ್ಯೆ ಹಾಗೂ ನೀರು ಪೂರೈಸುವ ಪಂಪ್‌ನ ಸ್ಟ್ರೈನರ್ ಇರುವ ಭಾಗದ ತಡಗೋಡೆಯೇ ಕುಸಿದು ಬಿದ್ದಿದೆ. ಅರ್ಧಭಾಗದವರೆಗೆ ಮರಳು ತುಂಬಿದ ಗೋಣಿ ಚೀಲಗಳನ್ನು ಇಟ್ಟು ಮಣ್ಣು ಕುಸಿಯಂತೆ ತಾತ್ಕಲಿಕ ವ್ಯವಸ್ಥೆ ಕಲ್ಪಿಸಿ ಬೇಸಿಗೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸುವುದಾಗಿ ಮಹಾನಗರ ಪಾಲಿಕೆ ಹೇಳಿಕೊಂಡಿತ್ತು. ಆದರೆ ಇದೀಗ ಗೋಡೆ ಕುಸಿದು ಬಿದ್ದು ಒಂದು ವರ್ಷ ಕಳೆದರೂ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆದಿಲ್ಲ. ಬೇಸಿಗೆಯಲ್ಲಿ ಕಾಮಗಾರಿ ನಡೆಸದೇ ನಿರ್ಲಕ್ಷ ತೋರಿರುವುದರಿಂದ ಈ ಮಳೆಗಾಲದಲ್ಲಿ ಉಳಿದ ಭಾಗದ ತಡೆಗೋಡೆ ಹಾಗೂ ಭೂ ಕುಸಿತ ಉಂಟಾಗುವ ಲಕ್ಷಣ ಗೋಚರಿಸಿದೆ. ಮುಂದಿನ ದಿನಗಳಲ್ಲಿ ನೀರು ಸಂಗ್ರಹಣೆಯ ವೇಳೆಯೂ ಮಣ್ಣು ಮೆದುಗೊಂಡು ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆಯೂ ಇದೆ. ಒಂದು ವೇಳೆ ಇಲ್ಲಿ ಭೂ ಕುಸಿತ ಉಂಟಾದರೆ ಹೊಸ ಡ್ಯಾಂನ ಜೊತೆಗೆ ಜನರೇಟರ್ ಕೊಠಡಿ, ಟ್ರಾನ್ಸ್‌ಫಾರ್ಮರ್, ಪಂಪ್‌ಹೌಸ್‌ಗೂ ಅಪಾಯ ಎದುರಾಗುವ ಭೀತಿ ಇದೆ.
ಕಳೆಪೆ ಕಾಮಗಾರಿ ಅನಾವರಣ
ವರ್ಷ ಪೂರ್ತಿ ನೀರು ಹರಿಯುವ ಡ್ಯಾಂನ ಕಾಂಕ್ರೀಟ್ ಬೆಡ್‌ಗಳು ಅತ್ಯಂತ ಉತ್ಕೃಷ್ಟವಾಗಿರುತ್ತದೆ ಎನ್ನುವ ನಂಬಿಕೆ ಜನ ಸಾಮಾನ್ಯರಲ್ಲಿದೆ. ಆದರೆ ಡ್ಯಾಂನ ಅಸಲಿತನ ಕೆಲವೇ ವರ್ಷದಲ್ಲಿ ಬಯಲಾಗಿದೆ. ಹೊಸ ಡ್ಯಾಂನಲ್ಲಿ ಕೆಲವೆಡೆ ನೀರು ಹರಿದು ಹೋಗುವ ಇಳಿಜಾರು ಜಾಗದ ಕಾಂಕ್ರೀಟ್ ಈಗಾಗಲೇ ಕರಗಿ ಹೋಗಿದ್ದು ಒಳಭಾಗದ ಕಬ್ಬಿಣದ ಸರಳುಗಳು ಕಾಣಿಸಲಾರಂಭಿಸಿದೆ. ನಿರ್ವಹಣೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೇ ರೀತಿ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಉಳಿದ ಭಾಗದ ಕಾಂಕ್ರೀಟ್ ಕರಗಿ ಹೋಗಬಹುದು. ಇದು ಡ್ಯಾಂನ ಆಧಾರಸ್ತಂಭಗಳಿಗೂ ತೊಂದರೆ ಜೊತೆಗೆ ಸಂಗ್ರಹಿಸಿದ ನೀರು ಸೋರಿಕೆಯಾಗಿ ಹೋಗುವ ಅಪಾಯವೂ ಇದೆ. ಆದ್ದರಿಂದ ಬೇಸಿಗೆಯಲ್ಲಿ ನೀರಿಲ್ಲ ಎಂದು ಕೊರಗುವ ಮಂಗಳೂರು ಮಹಾನಗರ ಪಾಲಿಕೆ ಡ್ಯಾಂನ ನಿರ್ವಹಣೆಯತ್ತವೂ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *