Header Ads
Breaking News

ಅಯೋಧ್ಯೆಗೆ ಭೇಟಿ ನೀಡಿದ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಶ್ರೀರಾಮ ಅವತರಿಸಿದ ಅಯೋಧ್ಯೆಗೆ ಭೇಟಿ ನೀಡಿರುವ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಶ್ರೀರಾಮ ಲಲ್ಲಾನ ದರ್ಶನ ಪಡೆದು, ಮಂದಿರ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ್ದಾರೆ.ಕಳೆದ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯಾ ಜನ್ಮಭೂಮಿಯಲ್ಲಿ ಭೂಮಿ ಪೂಜನಾ ನಡೆಸಿದಾಗ, ಪೇಜಾವರ ಶ್ರೀಗಳು ಚಾತುರ್ಮಾಸ್ಯ ವ್ರತದಲ್ಲಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಿರಲಿಲ್ಲ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಅವರು ಅಯೋಧ್ಯೆಗೆ ತೆರಳಿದ್ದು, ಭಾನುವಾರ ಟ್ರಸ್ಟ್ ಸಭೆಯಲ್ಲಿ ಭಾಗವಹಿಸಿದ ನಂತರ ಜನ್ಮಭೂಮಿಗೆ ಭೇಟಿ ಕೊಟ್ಟರು. ಮೂಲ ರಾಮನ ಸ್ಥಳಕ್ಕೆ ಯತಿ ಪ್ರಣಾಮ ಭೂಮಿ ಪೂಜನ ನಡೆಸಿದ, ಶ್ರೀರಾಮನ ಮೂಲ ವಿಗ್ರಹವಿದ್ದ ಜಾಗಕ್ಕೆ ಪೇಜಾವರ ಶ್ರೀಗಳು ನಮಸ್ಕರಿಸಿದರು. ಬಳಿಕ ರಾಮ ದೇವರ ದರ್ಶನ ಮಾಡಿದರು. ನಂತರ ಉತ್ಖನನದ ವೇಳೆ ಸಿಕ್ಕಿದ ಹಳೆಯ ಮಂದಿರದ ಶಿಲೆ, ಶಿಲಾಸ್ತಂಭಗಳನ್ನು, ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ವೀಕ್ಷಿಸಿದರು. ಅಲ್ಲಿನ ಕನಕ ಭವನ ಹಾಗೂ ಹನುಮಾನ್ ಗಡಿ ದರ್ಶನವನ್ನೂ ಪಡೆದ ಪೇಜಾವರ ಶ್ರೀಗಳು, ರಾಮ ದೇವರ ಮಂಗಳಾರತಿ ನೋಡಿ, ದೇವರ ಶಯನೋತ್ಸವ ಮುಗಿಸಿ, ಪೇಜಾವರ ಮಠದ ಮಧ್ವಾಶ್ರಮಕ್ಕೆ ಮರಳಿದರು.ಅಯೋಧ್ಯೆಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ತಿಳಿಸಿದ ಪೇಜಾವರ ಶ್ರೀಗಳು, ಶ್ರೀರಾಮಚಂದ್ರನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದ್ದೇವೆ. ಭೂಮಿಯ ಸಮತಟ್ಟು ಕಾರ್ಯ ಪ್ರಾರಂಭವಾಗಿದೆ. ಅಕ್ಕಪಕ್ಕದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ರಾಮಜನ್ಮಭೂಮಿಯಲ್ಲಿ ಬೃಹತ್ ಮಂದಿರ ನಿರ್ಮಾಣವಾಗಲಿರುವುದರಿಂದ ಭೂಮಿಯ ಧಾರಣಾ ಸಾಮರ್ಥ್ಯವೇನು ಮಣ್ಣಿನ ಗುಣವೇನು ಎಂಬುದನ್ನು ಪರೀಕ್ಷಿಸುವ ಕಾರ್ಯ ನಡೆಯುತ್ತಲೇ ಇದೆ. ಈಗಾಗಲೇ ಕೆತ್ತನೆ ಕಾರ್ಯ ಪೂರ್ಣಗೊಳಿಸಿ, ತಟ್ಟಾಗಿ ಪೇರಿಸಿಡಲಾದ ಶಿಲಾಸ್ತಂಭಗಳನ್ನು ಸ್ಥಳಾಂತರಿಸುವ ಕೆಲಸವೂ ಪ್ರಾರಂಭವಾಗಿದೆ ಎಂದು ತಿಳಿಸಿದರು.ಟ್ರಸ್ಟ್ ನ ಕಾರ್ಯದರ್ಶಿ ಚಂಪತ್‍ರಾಯ್, ದಿನೇಶ್‍ಚಂದ್ರ, ಅನೂಪ್ ಮಿಶ್ರಾ ಅವರು ಪೇಜಾವರ ಶ್ರೀಗಳಿಗೆ ಕಾಮಗಾರಿಗಳ ಮಾಹಿತಿ ನೀಡಿದರು. ಈ ವೇಳೆ ಪೇಜಾವರ ಶ್ರೀಗಳ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಭಟ್, ಕೃಷ್ಣ ಭಟ್ ಜೊತೆಗಿದ್ದರು.

Related posts

Leave a Reply

Your email address will not be published. Required fields are marked *