Breaking News

ಅರಂಬೂರು ಸೇತುವೆ ನಿರ್ಮಾಣ, ಮುಗಿಯುವ ನಿರೀಕ್ಷೆಯಲ್ಲಿ ಜನರು

ಸುಳ್ಯದ ಆಲೆಟ್ಟಿ ಗ್ರಾಮದ ಅರಂಬೂರು ಭಾಗದ ಜನರ ಶತಮಾನದ ಬೇಡಿಕೆಯೊಂದು ಪರಿಹಾರ ಕಾಣುವ ನಿರೀಕ್ಷೆಯಲ್ಲಿದೆ. ಹಲವು ವರ್ಷಗಳ ಹಿಂದೆ ದೋಣಿ ಮತ್ತು ತೆಪ್ಪದ ಮೂಲಕ ಪಯಸ್ವಿನಿ ನದಿ ದಾಟುತ್ತಿದ್ದ ಗ್ರಾಮಸ್ಥರಿಗೆ ತೂಗು ಸೇತುವೆ ವರದಾನವಾದರೂ ಜನರ ಸಮಸ್ಯೆ ಇನ್ನೂ ಪೂರ್ಣವಾಗಿ ಬಗೆಹರಿದಿಲ್ಲ.
ಅರಂಬೂರು ಜನತೆಯ ಸೇತುವೆ ನಿರ್ಮಾಣದ ಭರವಸೆ ಈಡೇರುವ ನಿರಿಕ್ಷೇಯಲ್ಲಿದ್ದಾರೆ. ಸ್ಥಳದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದ್ದು ಮಳೆಗಾಲವಾದರೂ ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿರುವುದು ಸ್ಥಳೀಯ ಜನರಿಗೆ ಸಂತೋಷವನ್ನುಂಟುಮಾಡಿದೆ. ಸುಳ್ಯದ ಜೀವನದಿ ಎಂದು ಕರೆಯಲಾಗುವ ಪಯಸ್ವಿನಿ ಹೊಳೆಗೆ ಅರಂಬೂರು ಎಂಬಲ್ಲಿ ತೂಗು ಸೇತುವೆಯ ಪಕ್ಕದಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅರಂಬೂರು ಕೂಟೇಲು ಮಧ್ಯೆ ಪಯಸ್ವಿನಿ ನದಿ ಹರಿಯುತ್ತದೆ. ಈ ನದಿ ದಾಟಲು, ಸರಕು ಸಾಮಾಗ್ರಿಗಳನ್ನು ಸಾಗಿಸಲು ಶತಮಾನಗಳಿಂದ ಜನರು ದೋಣಿ, ತೆಪ್ಪಗಳನ್ನೇ ಆಶ್ರಯಿಸುತ್ತಿದ್ದರು. ಇದರ ಅಪಾಯವನ್ನು ಅರಿತ ತೂಗು ಸೇತುವೆಗಳ ಸರದಾರ ಸುಳ್ಯದ ಪದ್ಮಶ್ರೀ ಪಶಸ್ತಿ ಪರಸ್ಕೃತರಾದ ಗಿರೀಶ್ ಭಾರಧ್ವಾಜ್ ಅವರು ತಮ್ಮ ಗ್ರಾಮದಲ್ಲೇ ಮೊತ್ತ ಮೊದಲು ತೂಗು ಸೇತುವೆ ನಿರ್ಮಾಣ ಮಾಡಿ ಜನರ ಪ್ರೀತಿಗೆ ಪಾತ್ರರಾದರು.
ತೂಗು ಸೇತುವೆಯಲ್ಲಿ ವಾಹನ ಸಂಚಾರ ಇಲ್ಲದ ಕಾರಣ ಜನರು ಆಲೆಟ್ಟಿ ಪೆರಾಜೆ ಮೂಲಕ ವಾಹನದಲ್ಲಿ ಸುತ್ತು ಬಳಸಿ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಅರಂಬೂರು ಬೈಲು, ನೆಡ್ಚಿಲುಭಾಗ, ಮಜಿಗುಂಡಿ, ಪಾಲಡ್ಕ ಬೈಲು, ಕೂಟೇಲು ಮಧ್ಯೆ ಸುಮಾರು ೩೦೦ ಕುಟುಂಬಗಳು ವಾಸ್ತವ್ಯ ಹೊಂದಿವೆ. ಅನೇಕ ಸಮಯಗಳಿಂದ ಪಯಸ್ವಿನಿ ಹೊಳೆಗೆ ಸೇತುವೆ ನಿರ್ಮಾಣವಾಗದ ಕಾರಣ ಗ್ರಾಮಸ್ಥರು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಭಾಗಕ್ಕೆ ಸೇತುವೆ ನಿರ್ಮಾಣಗೊಂಡರೆ ಸಾವಿರಾರು ಜನರಿಗೆ ಉಪಯೋಗ ಆಗಲಿದೆ. ಅರಂಬೂರಿನಿಂದ ಮುಂದೆ ಹೋದರೆ ಕೇರಳಕ್ಕೆ ಅಂತಾರಾಜ್ಯ ಸಂರ್ಪಕ ಸಾಧ್ಯ ಆಗಲಿದ್ದು ದೋಣಿಮೂಲೆ, ಬಡ್ಡಡ್ಕ ಮೂಲಕ ಕೇರಳಕ್ಕೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ಕಳೆದ ಜನವರಿ ತಿಂಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾರ್ಚ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು ಮುಂದಿನ ಎಪ್ರಿಲ್ ತಿಂಗಳಲ್ಲಿ ಕಾಮಗಾರಿ ಪೂರ್ಣಳ್ಳಲಿದೆ.

Related posts

Leave a Reply