
ಅರಣ್ಯಾಧಿಕಾರಿಗಳು ದೌರ್ಜನ್ಯ ಮಾಡಿದಂತಹ ಆರೋಪದ ಹಿನ್ನೆಲೆ ಅವರ ವಿರುದ್ಧ ಕುಟುಂಬವೊಂದು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಇಂದು ಮೂರನೇ ದಿನಕ್ಕೆ ತಲುಪಿದೆ.
ಮಂಗಳೂರು ಸಂಚಾರಿ ದಳದ ಪ್ರಭಾರ ಅರಣ್ಯಾಧಿಕಾರಿ ಸಂಧ್ಯಾ ಅವರ ನೇತೃತ್ವದ ಅಧಿಕಾರಿಗಳ ತಂಡ ಐತ್ತೂರು ಗ್ರಾಮದ ಮೂಜೂರು ನಿವಾಸಿ ಪದ್ಮಯ್ಯ ಗೌಡರ ಮನೆಗೆ ಮಾ.2ರ ಮಧ್ಯರಾತ್ರಿ ದಾಳಿ ನಡೆಸಿದ ಸಂದರ್ಭ ಮನೆಯಲ್ಲಿದ್ದ ವೃದ್ದ ಮಹಿಳೆ, ಸಣ್ಣ ಮಗು ಹಾಗೂ ಮಹಿಳೆಯ ಮೇಲೆ ದರ್ಪ ತೋರಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದರೂ ಪ್ರಕರಣ ದಾಖಲಾಗಿಲ್ಲ. ಹಾಗೂ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪದ್ಮಯ್ಯ ಗೌಡರ ಕುಟುಂಬ ಸದಸ್ಯರು ಹಾಗೂ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್.ಟಿ. ಅವರು ಮಾ.15ರಿಂದ ಕಡಬ ತಹಸೀಲ್ದಾರ್ ಕಛೇರಿಯ ತುಸು ದೂರದಲ್ಲಿ ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.
ನಿನ್ನೆ ಸಂಜೆ ಸತ್ಯಾಗ್ರಹ ಸ್ಥಳದಲ್ಲಿ ನಿರತರಾಗಿದ್ದ ಸಕ್ಕರೆ ಕಾಯಿಲೆ ಇರುವ ಸೀತಮ್ಮ ಸತ್ಯಾಗ್ರಹದ ಮಧ್ಯೆ ವಾಂತಿ ಮಾಡಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. 108 ಅಂಬ್ಯುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಒದಗಿಸಲಾಯಿತು. ಹಾಗೆಯೇ ನೀತಿ ತಂಡದ ರಾಜ್ಯಧ್ಯಕ್ಷ ಜಯನ್. ಟಿ ಅಸ್ವಸ್ಥರಾಗಿದ್ದು ಅವರಿಗೂ ಪ್ರತಿಭಟನಾ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ.
ಇನ್ನು ನಿನ್ನೆ ಸಂಜೆ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಎಸಿ ಯತೀಶ್ ಉಳ್ಳಾಲ ಭೇಟಿ ನೀಡಿ, ಧರಣಿನಿರತರ ಯೋಗ ಕ್ಷೇಮ ವಿಚಾರಿಸಿದಲ್ಲದೆ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿ ಉಪವಾಸ ಸತ್ಯಾಗ್ರಹವನ್ನು ಸ್ಥಗಿತಗೊಳಿಸುವಂತೆ ಮನವೊಲಿಸಿದರು. ಅಲ್ಲದೆ ಮಾ.17 ರ ಸಂಜೆಯ ಒಳಗೆ ದ.ಕ ಎಸ್ಪಿ ಅವರು ಸೂಕ್ತ ರೀತಿಯಲ್ಲಿ ಹಿಂಬರಹ ನೀಡುವ ಬಗ್ಗೆ ತಿಳಿಸಿದರು.ಇದಕ್ಕೆ ಒಪ್ಪದ ಧರಣಿ ನಿರತರು ನ್ಯಾಯ ಸಿಗುವವರೆಗೆ ನಮ್ಮ ಉಪವಾಸ ಸತ್ಯಾಗ್ರಹ ನಿಲ್ಲದು. ನಿಮ್ಮ ಹೇಳಿಕೆಯನ್ನು ಲಿಖಿತವಾಗಿ ಬರೆದುಕೊಡಿ ಎಂದು ಪಟ್ಟು ಹಿಡಿದರು.