Header Ads
Breaking News

ಅರಣ್ಯಾಧಿಕಾರಿಗಳು ರಾತ್ರೋ ರಾತ್ರಿ ಮನೆಗೆ ನುಗ್ಗಿ ದಾಂಧಲೆ ವಿಚಾರ : 12 ಮಂದಿಯ ವಿರುದ್ಧ ಪ್ರಕರಣ ದಾಖಲು

ಕಡಬ: ಐತೂರು ಗ್ರಾಮದ ಮೂಜೂರು ನಿವಾಸಿ ಪದ್ಮಯ್ಯ ಗೌಡರ ಪತ್ನಿ ಸೀತಮ್ಮ ಎಂಬವರ ಮನೆಗೆ ಮಾ.3ರಂದು ರಾತ್ರಿ ಸುಮಾರು 1.30ರ ವೇಳೆಗೆ ಅರಣ್ಯಾಧಿಕಾರಿಗಳು ಹಾಗೂ ಇತರರು ದಾಳಿಯ ನೆಪದಲ್ಲಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆಗೆ ಸಂಬಂಧಿಸಿ ಕಡಬ ಠಾಣೆಯಲ್ಲಿ 9 ಮಂದಿ ಹಾಗೂ ಇತರ 12 ಮಂದಿಯ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ಮಂಗಳೂರು ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಸಂಧ್ಯಾ, ಸುಬ್ರಹ್ಮಣ್ಯ ವಲಯಾಣ್ಯಾಧಿಕಾರಿ ರಾಘವೇಂದ್ರ, ಫಾರೆಸ್ಟರ್ ಸಂತೋಷ್, ಪ್ರಕಾಶ್, ಬೀಟ್ ಫಾರೆಸ್ಟರ್ ರವಿಚಂದ್ರ, ಬೀಟ್ ಗಾರ್ಡ್ ಅಶೋಕ್, ಐತ್ತೂರು ಬೀಟ್ ಗಾರ್ಡ್ ಪ್ರಕಾಶ್, ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಶಿವಪ್ರಸಾದ್, ಐತ್ತೂರು ಶಿವಾಜಿನಗರದ ನಿವಾಸಿ ಅಬ್ಬಾಸ್ ಹಾಗೂ ಇತರ ಹನ್ನೆರಡು ಮಂದಿಯ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐತ್ತೂರು ಗ್ರಾಮದ ಮೂಜೂರು ಪದ್ಮಯ್ಯ ಗೌಡ ಎಂಬವರ ಪತ್ನಿ ಸೀತಮ್ಮ ಎಂಬವರು ಪುತ್ತೂರು ನ್ಯಾಯಾಲಯಕ್ಕೆ ಖಾಸಗಿ ದೂರು ಸ ಲ್ಲಸಿ, ಮಾ.3ರಂದು ರಾತ್ರಿ ಸುಮಾರು 1.30ರ ವೇಳೆಗೆ ಆರೋಪಿಗಳು ಬೊಲೇರೋ ವಾಹನ ಹಾಗೂ ಜೀಪಿನಲ್ಲಿ ಬಂದು ಬಲವಂತವಾಗಿ ಮನೆಯ ಮುಂಬಾಗಿಲನ್ನು ಒಡೆದು ಮನೆಯೊಳಗಡೆ ಅಕ್ರಮ ಪ್ರವೇಶ ಮಾಡಿದ್ದಾರೆ, ಈ ಸಂದರ್ಭದಲ್ಲಿ ಮಲಗಿ ನಿದ್ರಿಸುತ್ತಿದ್ದ ನಾನು ಎಚ್ಚರಗೊಂಡು ನೋಡಿದಾಗ ಆರೋಪಿಗಳು ನನ್ನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಮಗ ಪ್ರಸಾದ್ ಕುಮಾರ್ ಎಲ್ಲಿ ಅಡಗಿಸಿಟ್ಟಿದ್ದಿಯಾ ಎಂದು ಹಾಗೂ ಮರದ ಹಲಗೆಯನ್ನು ಎಲ್ಲಿ ಇಟ್ಟಿದ್ದಿರಾ ಎಂದು ಹೇಳುತ್ತಾ ಮನೆಯೊಳಗಡೆ ಹುಡುಕಾಡಿದ್ದಾರೆ, ಈ ಸಂದರ್ಭದಲ್ಲಿ ಪ್ರಸಾದ್ ಕುಮಾರ್ ಮನೆಯಲ್ಲಿ ಇರಲಿಲ್ಲ, ಈ ವೇಳೆ ನಾನು ಮನೆಯಲ್ಲಿ ಹೆಣ್ಣು ಮಕ್ಕಳಿರುವುದು ಈ ರೀತಿ ಅಕ್ರಮ ಪ್ರವೇಶ ಮಾಡಿರುವುದು ಸರಿಯಲ್ಲ ಎಂದು ಹೇಳಿದಾಗ ನನಗೆ ಹೊಡೆದು ದೂಡಿ ಹಾಕಿರುತ್ತಾರೆ, ಅಲ್ಲದೆ ನನ್ನ ಸೊಸೆಯ ತಲೆಕೂದಲನ್ನು ಹಿಡಿದು ಅವಳಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಅಲ್ಲದೆ ಪ್ರಸಾದ್ ವಿರುದ್ದ ಕೇಸು ಹಾಕುತ್ತೇವೆ ಎಂದು ಬೆದರಿಕೆ ಕೂಡ ಹಾಕಿದ್ದಾರೆ, ಮತ್ತು ಮನೆಯೊಳಗಿದ್ದ ಕಪಾಟನ್ನು ಹೊಡೆದು ಹಾಕಿ ಅದರಲ್ಲಿದ್ದ ರೂ.25 ಸಾವಿರವನ್ನು ದೋಚಿದ್ದಾರೆ, ಬಳಿಕ ನಾನು ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿದ್ದು ಇದರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನಲೆಯಲ್ಲಿ ದೂರುದಾರರು ಕಡಬ ತಹಸೀಲ್ದಾರ್ ಕಛೇರಿಯ ಎದುರು 6 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದ್ದು, ಇವರೊಂದಿಗೆ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್.ಟಿ ಪಾಲ್ಗೊಂಡಿದ್ದರು, ಪ್ರತಿಭಟನೆಗೆ ಯಾರು ಜಗ್ಗದಿದ್ದಾಗ ಸೀತಮ್ಮ ಅವರು ಪುತ್ತೂರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

Related posts

Leave a Reply

Your email address will not be published. Required fields are marked *