Header Ads
Header Ads
Breaking News

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ : ರಾಜ್ಯದ ಕರಾವಳಿಯಲ್ಲಿ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ

ಅರಬ್ಬಿ ಸಮುದ್ರ, ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯ ಕರಾವಳಿಯಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಅಪೂರ್ವ, ಅಮರ್ತ್ಯ, ರಾಜಧೂತ್ ಮತ್ತು ಸಾವಿತ್ರಿಫುಲೆ ನೌಕೆಗಳು ಮಂಗಳೂರು ಬಂದರಿನಲ್ಲಿ ಸಿದ್ಧವಾಗಿ ನಿಂತಿವೆ. ಹವಾಮಾನ ಇಲಾಖೆಯು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಕರಾವಳಿಯಲ್ಲಿ ಬುಧವಾರ ಉತ್ತಮ ಮಳೆಯಾಗಿತ್ತು. ಮಂಗಳೂರು ನಗರದಲ್ಲಿ ದಿನವಿಡೀ ಬಿಟ್ಟು ಬಿಟ್ಟು ಮಳೆಯಾಗಿದ್ದು, ಸಂಜೆ, ರಾತ್ರಿ ವೇಳೆಗೆ ಮಳೆ ಬಿರುಸು ಪಡೆದಿತ್ತು. ಪುತ್ತೂರು, ಬಂಟ್ವಾಳ, ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆಯಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಅ. 31 ಮತ್ತು ನ. 1ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಎಲ್ಲೋ ಅಲೆರ್ಟ್ ಘೋಷಿಸಲಾಗಿದೆ ಎಂದು ತಿರುವನಂತಪುರ ಹವಾಮಾನ ನಿಗಾ ಕೇಂದ್ರ ತಿಳಿಸಿದೆ. ಸಮುದ್ರ ಅಬ್ಬರಿಸುತ್ತಿರುವುದರಿಂದ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ತೆರಳಬಾರದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ತಿಳಿಸಿದ್ದಾರೆ. ಮುಂದಿನ ಆದೇಶ ಬರುವ ತನಕ ಪ್ರವಾಸಿಗಳು ಬೀಚ್‌ಗಳಿಗೆ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ. ಕರಾವಳಿ ಪ್ರದೇಶದಲ್ಲಿ ವಾಸಿಸುವವರು ಜಾಗ್ರತೆ ಪಾಲಿಸಬೇಕೆಂದೂ, ಕಡಲ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾದ ಸಂದರ್ಭ ಬಂದಲ್ಲಿ ಶಿಬಿರಗಳನ್ನು ಆರಂಭಿಸಲು ಅಗತ್ಯದ ಕ್ರಮ ತೆಗೆದುಕೊಳ್ಳುವಂತೆ ಗ್ರಾಮಾಧಿಕಾರಿಗಳಿಗೆ ಸೂಚಿಸಿದ್ದಾರೆ.

 

Related posts

Leave a Reply

Your email address will not be published. Required fields are marked *