Header Ads
Header Ads
Breaking News

ಅರ್ಜುನ್‌ ಹಾಗೂ ಶ್ರುತಿ ಹರಿಹರನ್‌ ನಡುವಿನ “ಮಿ ಟೂ”ಆರೋಪದ ಕುರಿತಾದ ಸಂಧಾನ ಸಭೆ

ಬೆಂಗಳೂರು: ಸುಮಾರು ಮೂರು ಗಂಟೆಗೆ ಅಧಿಕ ಕಾಲ ನಡೆದ ಸಂಧಾನ ಸಭೆಯಲ್ಲಿ ಅಂಬರೀಶ್‌ ಅವರು, ಅರ್ಜುನ್‌ ಸರ್ಜಾ ಹಾಗೂ ಶ್ರುತಿ ಹರಿಹರನ್‌ ಇಬ್ಬರಲ್ಲೂ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ತಾರ್ಕಿಕ ಅಂತ್ಯವಾಡಲು ಸೂಚಿಸಿದರೂ ಅದು ವಿಫ‌ಲವಾಗಿದ್ದು, ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಅರ್ಜುನ್‌ ಸರ್ಜಾ ಅವರು ಶ್ರುತಿ ಹರಿಹರನ್‌ ವಿರುದ್ಧ 5 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವ ಮೂಲಕ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಸಭೆ ಬಳಿಕ ಮಾತನಾಡಿದ ಅಂಬರೀಶ್‌,ಹೆಣ್ಣು ಮಗಳು ಆರೋಪ ಮಾಡಿದಳು ಎಂಬ ಕಾರಣಕ್ಕೆ ನಾವು ಸಭೆ ಕರೆದು ಚರ್ಚಿಸಿದೆವು. ಆದರೆ ಇಬ್ಬರು ತಮ್ಮ ನೋವು ಹೇಳಿಕೊಂಡಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕೊಡಲು ನಾನೇನು ಸುಪ್ರೀಂಕೋರ್ಟ್‌ ಜಡ್ಜ್ ಅಲ್ಲ. ಆದರೂ ಇಬ್ಬರಿಗೂ ತಮ್ಮ ಅಭಿಪ್ರಾಯವನ್ನು ತಿಳಿಸಲು ಇನ್ನೊಂದಿಷ್ಟು ಕಾಲಾವಕಾಶ ನೀಡಲಾಗಿದೆ’ ಎಂದರು. ಪರ-ವಿರೋಧದ ಬಗ್ಗೆ ಮಾತನಾಡಿದ ಅಂಬರೀಶ್‌, “ನಾನು ಯಾರ ಪರವಾಗಿಯೂ ಇಲ್ಲ. ಯಾರದ್ದು ಸರಿ, ಯಾರದ್ದು ತಪ್ಪು ಎಂದು ಹೇಳಲು ನಾನು ಘಟನೆಯನ್ನು ಕಣ್ಣಾರೆ ಕಂಡಿಲ್ಲ’ ಎಂದು ಉತ್ತರಿಸಿದ ಅಂಬರೀಶ್‌, “ಚಿತ್ರರಂಗದ ಬಹುತೇಕ ಸಮಸ್ಯೆಗಳು ನೇರವಾಗಿ ನಮ್ಮಲ್ಲೇ ಬರುತ್ತಿದ್ದವು. ಹಾಗಾಗಿ ಬಗೆಹರಿಸುತ್ತಿದ್ದೆವು. ಆದರೆ, ಈ ಪ್ರಕರಣ ಕೋರ್ಟ್‌ಗೆ ಹೋಗಿರುವುದರಿಂದ ನಾವು ನಮ್ಮ ಅಭಿಪ್ರಾಯವನ್ನಷ್ಟೇ ತಿಳಿಸಬಹುದು’ ಎಂದರು.

ಸಂಧಾನ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರುತಿ ಹರಿಹರನ್‌, “ಮಂಡಳಿಗೆ ಗೌರವ ಕೊಟ್ಟು ಇಷ್ಟು ದಿನ ನಾನು ಯಾವುದೇ ಕಾನೂನು ಹೋರಾಟಕ್ಕೆ ಮುಂದಾಗಿರಲಿಲ್ಲ. ನಾಳೆ(ಶುಕ್ರವಾರ) ಬೆಳಗ್ಗೆವರೆಗೆ ಕಾಯುತ್ತೇನೆ. ಆ ನಂತರ ನನ್ನ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು. “ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ.  ಸಮಸ್ಯೆಯಾಗಿರುವುದು ನನಗೆ, ನಾನ್ಯಾಕೆ ಕ್ಷಮೆ ಕೇಳಲಿ’ ಎಂದ ಶ್ರುತಿ, “ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿರುವ ಸುದ್ದಿ ಗೊತ್ತಾಯಿತು. ನಾನು ಹೋರಾಡಲು ಸಿದ್ಧ’ ಎಂದರು.

 ನಟಿ ಶ್ರುತಿ ಮಾಡಿದ ಆರೋಪದಲ್ಲಿ ರಾಜಿಯಾಗುವ  ಪ್ರಶ್ನೆಯೇ ಇಲ್ಲ ಎಂದು ನಟ ಅರ್ಜುನ್‌ ಸರ್ಜಾ ನೇರವಾಗಿ ಹೇಳುವ ಜೊತೆಗೆ ತಮ್ಮ ನೋವನ್ನು ತೋಡಿಕೊಂಡರು. “ಈ ತರಹದ ಸನ್ನಿವೇಶದಲ್ಲಿ ನಿಂತು ಮಾತನಾಡುತ್ತಿರುವುದು ವಿಷಾದಕರ. ನನಗೆ ಈ ವಿಚಾರದಲ್ಲಿ ಆದ ನೋವನ್ನು ಹೇಳಲಾಗದು. ಕೇವಲ ನನಗೊಬ್ಬನಿಗೆ ನೋವಾಗಿದ್ದರೆ ನಾನು ಸಹಿಸಿಕೊಳ್ಳುತ್ತಿದ್ದೆ. ಆದರೆ, ನನ್ನ ಕುಟುಂಬಕ್ಕೆ, ಅಭಿಮಾನಿಗಳಿಗೆ ಬೇಸರವಾಗಿದೆ. 

“ಮಿ ಟೂ’ ಅಭಿಯಾನದ ಬಗ್ಗೆ ಮಾತನಾಡಿದ ಅರ್ಜುನ್‌ ಸರ್ಜಾ, “ಮಿ ಟೂ’ ವೇದಿಕೆ ಒಳ್ಳೆಯದೇ. ಹೆಣ್ಣು ಮಕ್ಕಳು ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಇದೊಂದು ವೇದಿಕೆ. ಆದರೆ ಈ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಬಾರದು. ಈ ವೇದಿಕೆಯಿಂದ ಅಮಾಯಕರಿಗೆ ಅನ್ಯಾಯವಾಗಬಾರದು. “ಸಿನಿಮಾದಲ್ಲಿ ನನ್ನನ್ನು ಹಿಡಿದ, ಊಟಕ್ಕೆ ಕರೆದ’ ಎನ್ನುತ್ತಾ ಆರೋಪ ಮಾಡಿದರೆ ಈ ವೇದಿಕೆ ದುರ್ಬಳಕೆಯಾದಂತೆ. ನಾವೂ ಕೂಡಾ ಹೆಣ್ಣು ಮಕ್ಕಳ ಪರ ಸಾಕಷ್ಟು ಕೆಲಸ ಮಾಡಿದ್ದೇವೆ. ಆದರೆ, ಅವೆಲ್ಲವನ್ನು ಹೇಳಿಕೊಂಡು ಪ್ರಚಾರ ತೆಗೆದುಕೊಳ್ಳಲು ಇಷ್ಟವಿಲ್ಲ’ ಎಂದು ಹೇಳಿದರು.

 

 

Related posts

Leave a Reply