Header Ads
Breaking News

ಅಲ್ಪಸಂಖ್ಯಾತರು, ದಲಿತರ ಮೇಲಿನ ದೌರ್ಜನ್ಯಕ್ಕೆ ಖಂಡಿಸಿ ಎಸ್‌ಡಿಪಿಐನಿಂದ ಪ್ರತಿಭಟನೆ, ಆಕ್ರೋಶ

ಮಂಗಳೂರು: ದೇಶಾದ್ಯಂತ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯು ದ.ಕ. ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ಮಾದರಿಯ ಆಡಳಿತ ನಡೆಸುತ್ತಿದ್ದರೆ, ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವು ಗೋವು ಮತ್ತು ಶ್ರೀರಾಮನ ಹೆಸರಿನಲ್ಲಿ ನಡೆಸುವ ಹಿಂಸಾಚಾರವನ್ನು ಕಂಡೂ ಕಾಣದಂತೆ ಸುಮ್ಮನಿದೆ. ದ.ಕ.ಜಿಲ್ಲೆಯಲ್ಲಂತೂ ಪೊಲೀಸರು ದ್ವಿಮುಖ ಧೋರಣೆ ತಾಳುತ್ತಿದ್ದಾರೆ. ಅಕ್ರಮ ಗೋಸಾಗಾಟ ಮಾಡುವವರ ಬಂಧನದಲ್ಲೂ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದರು.
ಬೆಳ್ತಂಗಡಿಯಲ್ಲಿ ಬೆಳಕಿಗೆ ಬಂದ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಶಾಸಕರು ಪ್ರಚೋದನಕಾರಿ ಭಾಷಣ ಮಾಡಿ ಜಿಲ್ಲೆಯಲ್ಲಿ ಆಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ. ಹಾಗಾಗಿ ಪೊಲೀಸರು ಅವರ ವಿರುದ್ಧ ತಕ್ಷಣ ಸೆ.153(1) ಅಡಿ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿದರು.
ಪಿಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಕಾಟಿಪಳ್ಳ ಮಾತನಾಡಿ ಶ್ರೀರಾಮ ಭಾರತ ದೇಶದ ಅಸ್ಮಿತೆ. ಆತ ಆದರ್ಶ ಪುರುಷರಲ್ಲೊಬ್ಬ. ಆದರೆ ಮನುಷ್ಯ ವಿರೋಧಿಯೂ ಮನುವಾದಿಯೂ ಆದ ಸಂಘಪರಿವಾರವು ತನ್ನ ನೀಚ ಕೃತ್ಯಕ್ಕೆ ಶ್ರೀರಾಮನನ್ನು ದುರ್ಬಳಕೆ ಮಾಡುತ್ತಿದೆ. ಇದನ್ನು ನೈಜ ಹಿಂದೂಗಳು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ರಾಜ್ಯ ಮುಖಂಡರಾದ ಅಕ್ರಂ ಹಸನ್, ಅಶ್ರಫ್ ಮಾಚಾರ್, ಜಿಲ್ಲಾ ಮುಖಂಡ ಅಶ್ರಫ್ ಮಂಚಿ, ಮಾತನಾಡಿದರು.ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಮುಖಂಡರಾದ ಅಯಾಝ್ ಕೃಷ್ಣಾಪುರ, ಅಬ್ದುಲ್ ಜಲೀಲ್ ಕೃಷ್ಣಾಪುರ, ಆಂಟನಿ ಪಿ.ಡಿ., ಆನಂದ ಮಿತ್ತಬೈಲ್, ರಾಕೇಶ್, ಶಾಹುಲ್ ಎಸ್.ಎಚ್., ನೂರುಲ್ಲಾ ಕುಳಾಯಿ, ಝಾಕಿರ್ ಹುಸೈನ್ ಉಳ್ಳಾಲ್, ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಎಸ್‌ಡಿಪಿಐ ಜಿಲ್ಲಾ ಸಮಿತಿಯ ಸದಸ್ಯ ಝಾಹಿದ್ ಮಲಾರ್ ಮತ್ತಿತರರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *