Header Ads
Header Ads
Breaking News

ಅಳಪ್ಪುಳದ ಕುಟ್ಟೆಂಪೆರೂರು ನದಿ, ಊರವರ ಶ್ರಮದಿಂದ ಪಡೆಯಿತು ಮರು ಜೀವ

ಇದು ಕೈಗಾರಿಕೆ, ಮರಳು ಮಾಫಿಯಾದ ಕೈಗೆ ಸಿಲುಕಿ ಬತ್ತಿ ಹೋಗಿದ್ದ ಕೇರಳದ ಆಲಪ್ಪುಳ ಜಿಲ್ಲೆಯ ಕುಟ್ಟೆಂಪೆರೂರ್ ನದಿ. ಒಂದು ಕಾಲದಲ್ಲಿ ಮೈದುಂಬಿ ಹರಿಯುತ್ತಿದ್ದ ನದಿ, ೨ ದಶಕದಿಂದ ಹತ್ತಿರ ಸುಳಿಯಲೂ ಸಾಧ್ಯವಾಗದ ಪರಿಸ್ಥಿತಿಗೆ ಬಂದಿತ್ತು. ಒಂದೆಡೆ ಅಕ್ರಮ ಮರಳು ಗಣಿಗಾರಿಕೆಯು ನದಿಯ ಒಡಲನ್ನು ಬರಿದಾಗಿಸಿದರೆ, ನಿರ್ಮಾಣ ಕಾಮಗಾರಿಗಳ ಟನ್ಗಟ್ಟಲೆ ತ್ಯಾಜ್ಯಗಳು, ನದಿಯೊಳಗಣ ಜಲಚರಗಳನ್ನು ನಾಶ ಮಾಡಿತ್ತು.
೧೨೦ ಅಡಿ ಅಗಲವಿದ್ದ ನದಿಯು ೨೦ ಅಡಿಗೆ ಸಂಕುಚಿತಗೊಂಡು, ರೋಗ ಹರಡುವ ತಾಣವಾಗಿ ಮಾರ್ಪಾಟಾಯಿತು. ತುಂಬಿ ತುಳುಕುತ್ತಿದ್ದ ನದಿಯಲ್ಲಿ ಈಜಾಡುತ್ತಾ, ಅದರ ದಡದಲ್ಲಿ ಆಡುತ್ತಾ ಬೆಳೆದಿದ್ದ ಗ್ರಾಮಸ್ಥರಿಗೆ ಅದರ ಸ್ಥಿತಿ ನೋಡಲಾಗಲಿಲ್ಲ. ನೀರಿನ ಕೊರತೆಯೂ ತೀವ್ರವಾಗತೊಡಗಿತು. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕು ಎಂಬ ದೃಢ ನಿರ್ಧಾರಕ್ಕೆ ಬಂದು, ೭೦೦ರಷ್ಟು ಗ್ರಾಮಸ್ಥರು ಅದರಲ್ಲೂ ಹೆಚ್ಚಿನವರು ಮಹಿಳೆಯರು ನದಿಗೆ ಇಳಿದೇ ಬಿಟ್ಟರು. ಪ್ರಾಣವನ್ನೇ ಪಣಕ್ಕಿಟ್ಟು, ಕುಟ್ಟೆಂಪೆರೂರ್ ನದಿಯ ಒಡಲಲ್ಲಿ ತುಂಬಿದ್ದ ಅಪಾಯಕಾರಿ ತ್ಯಾಜ್ಯಗಳು, ಪ್ಲಾಸ್ಟಿಕ್ಗಳು, ಆಲ್ಗೆಗಳನ್ನು ಹೊರತೆಗೆಯಲಾರಂಭಿಸಿದರು. ಒಂದೆರಡಲ್ಲ, ಬರೋಬ್ಬರಿ ೭೦ ದಿನಗಳ ಕಾಲ ಈ ಕೆಲಸ ನಡೆಯಿತು. ಡೆಂಗ್ಯೂಯಂಥ ರೋಗಗಳು ಜತೆಯಾದರೂ ಅವರು ಎದೆಗುಂದಲಿಲ್ಲ. ಒಂದೆರಡು ದಿನ ವಿರಮಿಸಿ, ಮತ್ತೆ ಕೆಲಸ ಆರಂಭಿಸಿದರು. ಉದ್ಯೋಗ ಖಾತ್ರಿ ಯೋಜನೆಯನ್ನೂ ಇದಕ್ಕಾಗಿ ಬಳಸಿದರು.
೪೫ ದಿನಗಳ ಬಳಿಕ ಇವರ ಸತತ ಪರಿಶ್ರಮದ ಫಲ ಕಾಣಲಾರಂಭಿಸಿತು. ನಿಧಾನವಾಗಿ ನೀರಿನ ಹರಿವು ಹೆಚ್ಚತೊಡಗಿತು. ೭೦ ದಿನ ತುಂಬುತ್ತಿದ್ದಂತೆ ಜೀವಜಲ ಮೊದಲಿನಂತೆ ಉಕ್ಕತೊಡಗಿತು. ಜೀವನಾಡಿಗೆ ಪುನಶ್ಚೇತನ ನೀಡಿದ ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ಈಗ ಕುಟ್ಟೆಂಪೆರೂರ್ ನದಿಗೆ ಮರುಜೀವ ಸಿಕ್ಕಿದೆ.

Related posts

Leave a Reply