Header Ads
Header Ads
Breaking News

ಅಳ್ವಾಸ್ ನುಡಿಸಿರಿಗೆ ಅದ್ಧೂರಿಯ ತೆರೆ

ಜೈನಕಾಶಿ ಮೂಡುಬಿದಿರೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕನ್ನಡ ನಾಡು-ನುಡಿಯ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಅದ್ಧೂರಿಯ ತೆರೆ ಬಿದ್ದಿದೆ. ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯ ಸಂತ ಶಿಶುನಾಳ ಷರೀಫ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭಕ್ಕೂ ಮುನ್ನ ಸನ್ಮಾನ್ಯರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಸಮಾಪನ ನುಡಿಗಳನ್ನಾಡಿದರು.

ಬಳಿಕ 12ಮಂದಿ ಗಣ್ಯರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುಂಬೈನ ಡಾ.ಜಿ.ಡಿ.ಜೋಷಿ, ಡಾ.ಎ.ವಿ.ನರಸಿಂಹ ಮೂರ್ತಿ ಮೈಸೂರು, ಪದ್ಮಶ್ರೀ ಡಾ.ಭಾರತೀ ವಿಷ್ಣುವರ್ಧನ್, ಬೆಂಗಳೂರು, ಡಾ.ಅರುಂಧತಿ ನಾಗ್, ಬೆಂಗಳೂರು, ಎಲ್.ಬಂದೇನವಾಝ್ ಖಲೀಫ್ ಆಲ್ದಾಳ, ಕಲಬುರ್ಗಿ, ಡಾ.ಕೆ.ರಮಾನಂದ ಬನಾರಿ, ಕಾಸರಗೋಡು, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಬೆಂಗಳೂರು, ಪ್ರೊ.ಎ.ವಿ.ನಾವಡ, ಮಂಗಳೂರು, ಫಾದರ್ ಪ್ರಶಾಂತ್ ಮಾಡ್ತ, ಬೆಂಗಳೂರು, ಹೊ.ನಾ.ರಾಘವೇಂದ್ರ ಶಿವಮೊಗ್ಗ, ಅರುವ ಕೊರಗಪ್ಪ ಶೆಟ್ಟಿ, ಮಂಗಳೂರು, ಮೈ.ಶ್ರೀ ನಟರಾಜ ವಾಷಿಂಗ್ಟನ್ ರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಎಂ ಮೋಹನ್ ಆಳ್ವರು ಶಾಲುಹೊದಿಸಿ, ಹಾರ ಹಾಕಿ, ಪ್ರಶಸ್ತಿಫಲಕ, ಸ್ಮರಣಿಕೆಗಳ ಜೊತೆಗೆ 25 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷರ ನುಡಿಗಳನ್ನಾಡಿದ ಆಳ್ವಾಸ್ ನುಡಿಸಿರಿ-2018ರ ಸಮ್ಮೇಳನಾಧ್ಯಕ್ಷೆ ಡಾ.ಮಲ್ಲಿಕಾ ಎಸ್. ಘಂಟಿ ಅವರು ನುಡಿಸಿರಿಯ ಅಚ್ಚುಕಟ್ಟುತನ, ಚೊಕ್ಕತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಬಹುತೇಕ ಎಲ್ಲಾ ಸಮ್ಮೇಳನಗಳಿಗೆ ತೆರಳಿದ್ದೇನೆ. ಆದರೆ ಅಲ್ಲೆಲ್ಲಾ ಪೊಲೀಸರ, ರಾಜಕಾರಣಿಗಳ ಹಾವಳಿಯಿರುತ್ತದೆ. ಆದರೆ ನುಡಿಸಿರಿರಾಜಕಾರಣಿಗಳ ಹಾವಳಿಯಿಲ್ಲದ ಸಮಾವೇಶ ಇದಾಗಿದೆ. ಪೊಲೀಸರೇ ಇಲ್ಲದೆ ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆದಿದೆ. ಗೌತಮ ಬುದ್ಧನ ಶಕ್ತಿ ಆಳ್ವರಿಗೆ ಚೈತನ್ಯ ತುಂಬಿದೆ. ಆ ಚೈತನ್ಯವೇ ಇಂತಹ ಕಾರ್ಯಕ್ರಮದ ಯಶಸ್ಸಿನ ಹಿಂದಿದೆ. ಸಮ್ಮೇಳನದಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆಎಲ್ಲರ ಮಾತುಗಳನ್ನು ನಾನು ಬರೆದುಕೊಂಡಿದ್ದೇನೆ. ನನಗೆ ಅದ್ಭುತ ಜ್ಞಾನಭಂಡಾರವನ್ನು ಒದಗಿಸಿದೆ. ಸಮ್ಮೇಳನದ ಶಿಸ್ತು ಎಲ್ಲರಿಗೂ ಅನುಕರಣೀಯ. ಆಳ್ವಾಸ್ ನ ಶಿಸ್ತು ಕರ್ನಾಟಕಕ್ಕೆ ಅನುಕರಣೀಯ ಎಂದು ಹೇಳಿದರು. ಬಳಿಕ ಮಲ್ಲಿಕಾ ಎಸ್.ಘಂಟಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ ಎ.ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಕೆ.ಅಮರನಾಥ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply