Header Ads
Header Ads
Breaking News

ಮಳೆಯ ಎಫೆಕ್ಟ್, ಬೆಲೆಯೇರಿಕೆ ನಡುವೆಯೂ ಜೋರಾಗಿದೆ ಕರಾವಳಿಯಲ್ಲಿ ಅಷ್ಟಮಿಯ ಸಂಭ್ರಮ

ಆಗಸ್ಟ್ ತಿಂಗಳೆಂದರೆ ಹಬ್ಬಗಳ ಮಹಾಪೂರ. ಈ ತಿಂಗಳ ಪ್ರತಿ ಹಬ್ಬಕ್ಕೂ ತರಕಾರಿ ಮೊದಲು ಎನ್ನುವ ಗ್ರಾಹಕರಿಗೆ ಈ ಬಾರಿ ರೇಟು ಸಿಕ್ಕಾಪಟ್ಟೆ ಟೈಟ್ ಆಗಿದೆ. ಒಂದೆಡೆ ಕರಾವಳಿಯಲ್ಲಿ ಬಂದ ಏಕ್‌ದಂ ಮಳೆ ಪೂರ್ತಿಯಾಗಿ ತರಕಾರಿ ಬೆಳೆಗಳ ಇಳುವರಿಗೆ ಹೊಡೆತ ನೀಡಿದೆ. ಇದರ ಪರಿಣಾಮ ಮಾರ್ಕೆಟ್‌ನಲ್ಲಿ ತರಕಾರಿ ಬೇಡಿಕೆಯಷ್ಟು ಪೂರೈಕೆಯಾಗಿಲ್ಲ, ಅದ್ರೂ ಕೂಡ ಗ್ರಾಹಕರ ಖರೀದಿಯ ಭರಾಟೆ ಜೋರಾಗಿತ್ತು.

ಕರಾವಳಿಯಲ್ಲಿ ಅಷ್ಟಮಿ ಹಬ್ಬದ ಸಂಭ್ರಮ ಜೋರಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಶ್ರೀಕೃಷ್ಣ ಹಬ್ಬಕ್ಕೆ ಈಗಾಗಲೇ ಅದ್ಧೂರಿ ಸಿದ್ಧತೆ ನಡೆದಿದೆ. ನಗರದ ಅಲ್ಲಲ್ಲಿ ಮೊಸರು ಕುಡಿಕೆಯ ಉತ್ಸವಕ್ಕೆ ಈಗಾಗ್ಲೇ ಭರದ ತಯಾರಿ ನಡೆಯುತ್ತಿದೆ. ಆದರೆ ಈ ಬಾರಿ ಹಬ್ಬಕ್ಕೆ ಬೆಲೆಯೇರಿಕೆಯ ಬರೆ ಬಿದ್ದಿದೆ. ಈ ಬಾರಿಯ ಮಳೆ ಸ್ಥಳೀಯ ತರಕಾರಿ ಬೆಳೆಯ ಇಳುವರಿಯ ಕುಂಠಿತಕ್ಕೆ ಕಾರಣವಾಗಿದೆ. ಮಳೆ ಜಾಸ್ತಿ ಇದ್ದಾಗ ತರಕಾರಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಸಿಗೋದಿಲ್ಲ. ಇದರಿಂದ ಸರಿಯಾಗಿ ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ. ಪೂರೈಕೆ ಕಡಿಮೆಯಾದಾಗ ತರಕಾರಿಗೆ ರೇಟ್ ಜಾಸ್ತಿಯಾಗುತ್ತದೆ. ಆದರೂ ಹಬ್ಬದ ಸಂಭ್ರಮಕ್ಕೆ ಧಕ್ಕೆಯಾಗಬಾರದು ಎಂದು ಜನತೆ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇನ್ನು ಅಷ್ಟಮಿಯ ವಿಶೇಷ ಖಾದ್ಯವಾದ ಮೂಡೆ ತಯಾರಿ ಹಾಗೂ ಮಾರಾಟ ಭರದಿಂದ ನಡೆಯುತ್ತಿದೆ.

ಇನ್ನು ತರಕಾರಿ ಬೆಲೆ ಏರಿಕೆ ನಡುವೆ ಖರೀದಿಯಲ್ಲಿ ಗ್ರಾಹಕರು ತಲ್ಲೀನರಾಗಿದ್ರು. ಮಾರುಕಟ್ಟೆಯಲ್ಲಿ ಊರಿನ ಮುಳ್ಳು ಸೌತೆ , ಹೀರೆಕಾಯಿ ಹಾಗಲಕಾಯಿ, ಊರಿನ ಬೆಂಡೆಕಾಯಿ, ಹರಿವೆ, ಅಂಬಟೆ, ಇದರ ಜತೆಯಲ್ಲಿ ಟೊಮೆಟೋ ದರ ಸ್ವಲ್ಪ ಇಳಿಕೆಯಾಗಿದೆ. ಉಳಿದಂತೆ ಹಣ್ಣುಹಂಪಲುಗಳ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಕಾಣಿಸಿಕೊಂಡಿಲ್ಲ. ಬಾಳೆಹಣ್ಣಿನ ಸರಿಯಾದ ಪೂರೈಕೆ ಇಲ್ಲದೇ ದರದಲ್ಲಿ ಕೊಂಚ ಏರಿಕೆ ಕಾಣಿಸಿದೆ.

ಅಷ್ಟಮಿಯ ಹೊತ್ತಿಗೆ ಹೂವಿನ ಮಾರ್ಕೆಟ್‌ನಲ್ಲಿ ದರವು ಸ್ವಲ್ಪ ಏರುಪೇರಾಗುತ್ತದೆ. ಆದರೆ ಈ ಬಾರಿ ಅಷ್ಟೊಂದು ದರ ಸಮರ ಹೂವಿನ ಮಾರ್ಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ.ಈ ಹಿಂದೆ ನಾಗರ ಪಂಚಮಿ ಹಾಗೂ ವರಮಹಾಲಕ್ಷ್ಮಿ ಪೂಜೆಗೆ ಇದ್ದ ರೇಟ್ ಅಷ್ಟಮಿಗೆ ಬಂದಿಲ್ಲ. ಆದರೆ ಮಲ್ಲಿಗೆ ಈ ವಿಚಾರದಲ್ಲಿ ಕೊಂಚ ಭಿನ್ನವಾಗಿದೆ. ಉಳಿದಂತೆ ಮುಖ್ಯವಾಗಿ ಸೇವಂತಿ, ಮಲ್ಲಿಗೆ, ಕಾಕಡ ಚಾಂದಿನಿ, ಪೂರ್ಣಿಮಾ, ತಾವರೆ ಹೀಗೆ ವಿವಿಧ ಬಗೆಯ ಹೂವುಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.ಒಟ್ಟಿನಲ್ಲಿ ಅಷ್ಟಮಿಯನ್ನು ಸಂಭ್ರಮದಿಂದ ಆಚರಿಸಲು ಭಕ್ತವರ್ಗ ಸಜ್ಜಾಗಿದೆ. ಎಲ್ಲೆಡೆ ಅಷ್ಟಮಿಯ ಸಂಭ್ರಮ ಎಲ್ಲೆಡೆ ಮನೆಮಾಡಿದೆ.

Related posts

Leave a Reply

Your email address will not be published. Required fields are marked *