
ಆಡಿಯೋ ಟೇಪ್ ಸಂಭಾಷಣೆ ಒಪ್ಪಿಕೊಂಡ ಬಿ.ಎಸ್.ಯಡಿಯೂರಪ್ಪ ಶಾಸಕ ಮತ್ತು ವಿರೋಧ ಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸ ಪಡೆದುಕೊಳ್ಳಲು ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ವಿರೋಧ ಪಕ್ಷದ ನಾಯಕನಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಯಡಿಯೂರಪ್ಪ ಸಂವಿಧಾನಬದ್ಧ ಸರಕಾರವನ್ನು ಅಸ್ಥಿರಗೊಳಿಸಲು ಮಾಡಿದ ತಂತ್ರ ಮತ್ತು ಸ್ಪೀಕರ್ಗೆ 50 ಕೋಟಿ ರೂ. ಆಮಿಷ ನೀಡಿದಂತಹ ಹೇಳಿಕೆಗಳು ಸಾಬೀತಾಗಿದ್ದು, ತಾನು ಹೇಳಿದಂತೆಯೇ ರಾಜಕೀಯ ನಿವೃತ್ತಿಯಾಗಿ ರಾಜ್ಯ ಜನತೆಯ ದೃಷ್ಟಿಯಿಂದ ಹಾಗೂ ಪ್ರಜಾಪ್ರಭುತ್ವದ ದೃಷ್ಟಿಯಿಂದ ಕೂಡಲೇ ರಾಜೀನಾಮೆ ನೀಡಬೇಕೆಂದು ಐವನ್ ಡಿಸೋಜ ಒತ್ತಾಯಿಸಿದರು.
ಆಡಿಯೋ ಟೇಪ್ ಹಗರಣದ ಮುಖಾಂತರ ರಾಜ್ಯ, ದೇಶದ ಮುಂದೆ ಬಟ್ಟೆಬಿಚ್ಚಿ ನಿಂತಂತಾಗಿದೆ. ಇಂಥ ಮಟ್ಟಕ್ಕೆ ಇಳಿದಿರುವುದು ದೇಶದ ರಾಜಕಾರಣಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಪ್ರಚಾರವಾಗಿದೆ. ಕೂಡಲೇ ರಾಜೀನಾಮೆ ನೀಡಿ ಪ್ರಜಾಪ್ರಭುತ್ವದ ಹಾಗೂ ವಿರೋಧ ಪಕ್ಷದ ಗೌರವ ಉಳಿಸಬೇಕು ಎಂದು ಹೇಳಿದರು.