Breaking News

ಆಡು ಸಾಕಣೆಯಲ್ಲಿ ಸ್ವಾವಲಂಬನೆಯ ಬದುಕು,  ಮನೆಯವರ ವಿರೋಧದ ನಡುವೆಯೂ ಕುಸುಮಕ್ಕನ ಬಲುಹು


ಮನಸೊಂದಿದ್ದರೆ ಯಾವುದನ್ನು ಬೇಕಾದರೂ ಸಾಧಿಸಬಹುದು. ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಆದರೆ ಸಾಧಿಸುವ ಛಲ ಬೇಕು ಎಂದು ಹಿರಿಯರು ಹೇಳುವ ಮಾತು ತುಂಬಾ ಅರ್ಥಗರ್ಭಿತವಾದ ವಿಷಯ. ಆಡು ಸಾಕಣೆಯಲ್ಲಿ ಸ್ವಾವಲಂಭಿ ಬದುಕು ಕಟ್ಟಿಕೊಂಡಿರುವ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಐವರ್ನಾಡು ಗ್ರಾಮದ ಕುಸುಮಾವತಿ ಮಡ್ತಿಲ ಇದಕ್ಕೆ ಉದಾಹರಣೆ.
ಕುಸುಮಕ್ಕ ಸ್ಥಳೀಯವಾಗಿ ಸ್ವಸಹಾಯ ಸಂಘದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಸಂಘದ ಸದಸ್ಯರ ಮನೆಯೊಂದರಿಂದ ೨ ದೇಶಿ ತಳಿ ಆಡುಗಳನ್ನು ಖರೀದಿ ಮಾಡಿ ತನ್ನ ಮನೆಗೆ ತಂದರು. ಮೊದಲಿಗೆ ಪತಿ ಕೃಷಿ ಚಟುವಟಿಕೆಗೆ ಆಡು ಸಾಕಣೆಯಿಂದ ಸಮಸ್ಯೆ ಆಗಬಹುದೆಂದು ಮನೆಯಲ್ಲಿ ವಿರೋಧ ಮಾಡಿದರು. ಮನೆಯವರ ವಿರೋಧದ ನಡುವೆ ಆಡು ಸಾಕಾಣಿಕೆ ಮುಂದುವರಿಸಿದರು. ಅನಂತರದ ದಿನಗಳಲ್ಲಿ ಮನೆಮಂದಿಯೂ ಸಹಕಾರ ನೀಡಿದರು. ಮಲಬಾರಿ, ಜಮುನಪರಿ ತಳಿಗಳನ್ನು ಆಯ್ಕೆ ಮಾಡಿಕೊಂಡು ಸಾಕಾಣಿಕೆ ನಡೆಸುತ್ತಿದ್ದು ಇಂದು ೫೦ರಷ್ಟು ಆಡುಗಳಿವೆ. ಮುಂದಿನ ದಿನಗಳಲ್ಲಿ ೧೦೦ ಆಡು ಸಾಕುವ ಗುರಿ ಹೊಂದಿದ್ದಾರೆ.
ಪ್ರಥಮ ವರ್ಷ ಆಡಿನ ಮಾರಾಟದಿಂದ ೮೦ ಸಾವಿರ ರೂಪಾಯಿಗಳ ಸಂಪಾದನೆಯಾಗಿದೆ ಎಂದು ಕುಸುಮಾವತಿಯವರು ಸಂತೋಷದಿಂದಲೇ ಹೇಳುತ್ತಾರೆ. ಅವರು ಹೆಚ್ಚೇನು ಓದಿಲ್ಲ.ಪ್ರೌಢ ಶಿಕ್ಷಣವನ್ನು ಮಾತ್ರ ಪಡೆದಿರುವುದು. ಆಡು ಸಾಕಾಣಿಕೆ ತರಬೇತಿಯನ್ನು ಪಡೆದುಕೊಂಡಿಲ್ಲ. ಆದರೂ ಹೆಚ್ಚು ಪರಿಶ್ರಮವಿಲ್ಲದ ಆಡು ಸಾಕಾಣಿಕೆ ಇಂದು ಅವರನ್ನು ಅರ್ಥಿಕವಾಗಿ ಚೇತರಿಸಿಕೊಳ್ಳುವುದರ ಜತೆಗೆ ಆಡುಳೊಂದಿಗೆ ಆಡವಾಡುತ್ತ ಮಾನಸಿಕವಾಗಿ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ. ವರ್ಷಕ್ಕೆ ಎರಡು ಬಾರಿ ಮರಿ ಹಾಕುತ್ತವೆ. ಸಾಮಾನ್ಯವಾಗಿ ಆಡುಗಳು ಎರಡು ಮರಿಗಳನ್ನು ಹಾಕಿದರೆ ಕೆಲವೊಂದು ಆಡುಗಳು ೩ ಮರಿಗಳನ್ನು ಹಾಕುವುದುಂಟು. ೨ ತಿಂಗಳಲ್ಲಿ ೫ ಕೆ.ಜಿ. ತೂಕ ಬರುತ್ತದೆ. ಈ ಸಂದರ್ಭ ಸಾಕಾಣಿಕೆ ಬಯಸಿ ಮರಿಗಳನ್ನು ಕೊಂಡು ಹೋಗುವವರಿಗೆ ಮರಿಯೊಂದನ್ನು ೧,೫೦೦ ರೂ.ಗಳಿಗೆ ಮಾರಾಟ ಮಾಡುತ್ತಾರೆ. ಇಲ್ಲವಾದಲ್ಲಿ ಒಂದೂವರೆ ವರ್ಷದಿಂದ ೨ ವರ್ಷಗಳವರೆಗೆ ಸಾಕಬೇಕು.
ಆಡುಗಳು ಒಂದೂವರೆ ವರ್ಷಗಳಿಂದ ೨ ವರ್ಷದೊಳಗಾಗಿ ಶೀಘ್ರ ಬೆಳವಣಿಗೆಯಾಗುತ್ತವೆ. ಈ ಹಂತದಲ್ಲಿ ಗಂಡು ಆಡುಗಳು ೪೦ರಿಂದ ೫೦ ಕೆ.ಜಿ.ವರೆಗೆ ತೂಗುತ್ತವೆ. ಮತ್ತೆ ಬೆಳವಣಿಗೆ ಕುಂಟಿತವಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಮಾರಾಟ ಮಾಡಿದರೆ ಹೆಚ್ಚು ಲಾಭ ಬರಬಹುದು ಎಂದು ನಿರೀಕ್ಷೆ. ಬಕ್ರೀದ್ ಹಬ್ಬದ ಸಂದರ್ಭ ಬೇಡಿಕೆ ಹೆಚ್ಚು. ಈ ಸಮಯದಲ್ಲಿ ಕೆ.ಜಿ.ಗೆ ೩೫೦-೪೦೦ ರೂ.ಗಳವರೆಗೆ ಮಾರಾಟ ಮಾಡಿದ್ದಾರೆ. ಅಂದರೆ ಒಂದು ಆಡು ಒಂದೂವರೆ ವರ್ಷಗಳಾಗುವಾಗ ಸಾಮಾನ್ಯ ೧೨ರಿಂದ ೧೫ ಸಾವಿರಗಳವರಗೆ ಮಾರಾಟಗೊಳ್ಳುತ್ತದೆ.
ಸಂಜೆ ಇವರು ತಮ್ಮ ಆಡುಗಳನ್ನು ಒಂದು ಗಂಟೆ ಕಾಲ ಪಕ್ಕದ ಗುಡ್ಡಕ್ಕೆ ಮೇವಿಗಾಗಿ ಕರೆದೊಯ್ದು ಆಡುಗಳ ಹೊಟ್ಟೆ ತುಂಬಿಸಿಕೊಂಡ ಅನಂತರ ಮನೆಯತ್ತ ಹಿಂದಿರುಗುತ್ತಾರೆ. ಮರುದಿನ ಬೆಳಗ್ಗೆ ಕುಸುಮಾವತಿಯವರು ಒಂದಿಷ್ಟು ನೆಲಗಡಲೆ ಹಿಂಡಿ, ಗೋದಿಬೂಸ ಹಾಗೂ ೧ ಸೇರು ಹುಡಿಅಕ್ಕಿಯನ್ನು ಬೇಯಿಸಿ ಮಡ್ಡಿಯನ್ನಾಗಿಸಿ ಆಡುಗಳಿಗೆ ನೀಡುತ್ತಾರೆ. ಇದರಿಂದ ಆಡುಗಳು ಒಂದಷ್ಟು ದಷ್ಟಪುಷ್ಟವಾಗಿ ಬೆಳೆಯುತ್ತವೆ. ಇವುಗಳ ಮೂತ್ರವನ್ನು ಗೋಬರ್ ಗ್ಯಾಸ್‌ಗೆ ಬಳಸಿದರೆ, ವರ್ಷವೊಂದಕ್ಕೆ ೧೦೦ ಗೋಣಿಚೀಲದಷ್ಟು ದೊರಕುವ ಗೊಬ್ಬರವನ್ನು ಕೃಷಿಗೆ ಬಳಸುತ್ತಾರೆ. ಚೀಲವೊಂದಕ್ಕೆ ೧೫೦ ರೂ.ಗಳಷ್ಟು ಬೆಲೆಯಿದೆ. ಗೊಬ್ಬರವನ್ನು ಕೃಷಿಗೆ ಬಳಸುತ್ತಿದ್ದು ಇದರಿಂದ ಫಸಲು ಜಾಸ್ತಿ, ಜೊತೆಗೆ ಆದಾಯವೂ ಹೆಚ್ಚಿದೆ.
ಹೀಗೆ ಹತ್ತಾರು ಆಡು ಸಾಕಿದರೆ ೧೮-೨೦ ತಿಂಗಳಲ್ಲಿ ಲಕ್ಷಕ್ಕೂ ಅಧಿಕ ಸಂಪಾದನೆ ಮಾಡಬಹುದು. ಒಂದೆರಡು ಎಕರೆ ಜಾಗದಲ್ಲಿ ನಿತ್ಯ ಕೇವಲ ಒಂದು ಗಂಟೆ ಮೇವುಣಿಸಲು ಸಮಯ ಮೀಸಲಿಟ್ಟರೆ ಸಾಕು. ಆಡುಗಳು ಕಳ್ಳತನವಾಗದಂತೆ, ಇತರೇ ಪ್ರಾಣಿಗಳು ಅವುಗಳಿಗೆ ದಾಳಿ ಮಾಡದಂತೆ ಅಥವಾ ಪಕ್ಕದ ತೋಟದೊಳಗೆ ನುಗ್ಗಿ ಕೃಷಿ ಹಾಳುಮಾಡದಂತೆ ನೋಡಿಕೊಂಡರಾಯಿತು. ಅವಗಳು ತಮ್ಮ ಪಾಡಿಗೆ ಮೇವಿನಲ್ಲಿರುತ್ತವೆ. ಆಡು ಸಾಕಣೆಯಿಂದ ಕಡಿಮೆ ಖರ್ಚು ಅಧಿಕ ಲಾಭ ಎಂದು ಕುಸುಮಾವತಿ ಕುಟುಂಬದವರು ಅಭಿಪ್ರಾಯಕ್ಕೆ ಬಂದು ಐದು ವರ್ಷಗಳಿಂದ ಆಡು ಸಾಕುವಿಕೆ ಮುಂದುವರಿಸಿದ್ದಾರೆ.
ಆಡು ಸಾಕಾಣಿಕೆಯಲ್ಲಿ ನಷ್ಟವಿಲ್ಲ. ಲಾಭವೇ ಹೆಚ್ಚು, ತುಂಬಾ ಬೇಡಿಕೆ ಇದೆ. ಪ್ರಥಮ ವರ್ಷದಲ್ಲಿಯೇ ೮೦ ಸಾವಿರ ರೂಪಾಯಿ ಲಾಭ ಸಿಕ್ಕಿದೆ. ಆಡು ಮರಿಗಳಿಗೂ ಹೆಚ್ಚು ಬೇಡಿಕೆ ಇದೆ. ಮೊದಲಿಗೆ ಎರಡು ಆಡುಗಳನ್ನು ನಾವು ಕೊಂಡು ಬಂದು ಸಾಕಿದೆವು. ಅನಂತರ ೧೫ ಹೀಗೆ ಜಾಸ್ತಿ ಮಾಡುತ್ತ ಹೋದೆವು. ಸುಮಾರು ೫೦ ಆಡುಗಳಿವೆ.

Related posts

Leave a Reply