Header Ads
Header Ads
Breaking News

ಆತ್ಮವಿಶ್ವಾಸದಿಂದ ಗೆಲುವು ಸಾಧ್ಯವಾಯಿತು: ಕ್ಯಾ. ನವೀನ್ ನಾಗಪ್ಪ

ಉಜಿರೆ: ಕಾರ್ಗಿಲ್ ಯುದ್ಧದ ವೇಳೆ ಸೇನೆಗೆ ಸೇರಿ ಆರು ತಿಂಗಳಷ್ಟೇ ಕಳೆದಿತ್ತು. ಎರಡನೇ ಹಂತದ ಯುದ್ಧದ ವೇಳೆ ಸುಮಾರು ೧೦೦ ಮಂದಿ ಸೈನಿಕರ ತಂಡದ ಕ್ಯಾಪ್ಟನ್ ಜವಾಬ್ದಾರಿ ವಹಿಸಿದಾಗ ಬಹಳ ಸಂತೋಷಪಟ್ಟಿದ್ದೆ. ಆದರೆ ವೀರಯೋಧರಿಗೆ ಆತ್ಮಸ್ಥೈರ್ಯ ತುಂಬುವ ಕಾಯಕ ಸವಾಲಿನದಾಗಿತ್ತು. ಕಣ್ಣೆದುರಿಗೇ ಹುತಾತ್ಮರಾದ ಯೋಧರನ್ನು ಕಂಡು ಜರ್ಝರಿತರಾಗುತ್ತಿದ್ದೆವು. ದೇಶದ ತ್ರಿವರ್ಣ ಧ್ವಜವನ್ನು ಹಾರಿಸಿಯೇ ತೀರುತ್ತೇವೆಂಬ ದೃಢ ವಿಶ್ವಾಸದಿಂದ ಹೋರಾಡಿದ ಪರಿಣಾಮ ಗೆಲುವು ನಮ್ಮದಾಯಿತು ಎಂದು ನಿವೃತ್ತ ಯೋಧ ಕ್ಯಾ. ನವೀನ್ ನಾಗಪ್ಪ ನುಡಿದರು.

ಅವರು ಶ್ರೀ ಧ. ಮಂ. ಪದವಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಸೀರೀಸ್ ಜಂಟಿಯಾಗಿ ಆಯೋಜಿಸಿದ್ದ ‘ಕಾರ್ಗಿಲ್- ನನ್ನ ಅನುಭವ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಯುದ್ಧಕ್ಕೆ ಹೋಗುವಾಗಿನ ಸನ್ನಿವೇಶ ಕಠಿಣವಾಗಿತ್ತು. ಮತ್ತೆ ಮರಳಿ ಬರುತ್ತೇವೆ ಎನ್ನುವ ಭರವಸೆ ಇರುತ್ತಿರಲಿಲ್ಲ. ಮನೆಯವರಿಗೆ ಪತ್ರದ ಮೂಲಕ ತಾವು ಆಕಸ್ಮಾತ್ ಯುದ್ಧ ಕಣದಲ್ಲಿ ವೀರಮರಣ ಅಪ್ಪಿದರೆ ಅಂತಹ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಧೃಢ ನಿರ್ಣಯಗಳ ಬಗ್ಗೆ ವಿವರಿಸಲಾಗುತ್ತಿತ್ತು. ಆಕಸ್ಮಾತ್ ಬದುಕಿದ್ದರೆ ಅದನ್ನು ನಮ್ಮಲ್ಲೇ ಇಟ್ಟುಕೊಳ್ಳುತ್ತಿದ್ದೆವು. ಗುರುತಿನ ಚೀಟಿಯನ್ನೂ ಕಳಚಿಟ್ಟು ಹೋಗಬೇಕಾಗಿತ್ತು. ಕಾರ್ಗಿಲ್ ಯುದ್ಧದ ಅನುಭವಗಳು ನನ್ನ ಹಾಗೂ ಇತರೆ ಸೈನಿಕರ ಜೀವನಕ್ಕೆ ಪ್ರೇರಕ ಶಕ್ತಿಯಾಗಿದೆ. ಆ ಯುದ್ಧದಲ್ಲಿ ಭಾಗವಹಿಸಲು ಅವಕಾಶ ದೊರೆತಿದ್ದು ನನ್ನ ಪಾಲಿನ ಮರೆಯಲಾಗದ ಕ್ಷಣಗಳು ಎಂದರು.

ಯುದ್ಧ ಕಣದಲ್ಲಿ ನನಗೆ ಬೆನ್ನೆಲುಬಾಗಿ ನಿಂತವರು ಅಣ್ಣಾ ಎಂದು ಪ್ರೀತಿಯಿಂದ ಸಂಭೋಧಿಸುತ್ತಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾರಂತಹ ವೀರ ಸೇನಾನಿಗಳ ನುಡಿಗಳು. ಅವರು ನಮ್ಮನ್ನು ಅಗಲಿದರೂ ಶಾಶ್ವತವಾಗಿ ಹೃದಯದಲ್ಲಿ ನೆಲೆಸಿದ್ದಾರೆ. ಯುದ್ಧ ಸಂದರ್ಭದಲ್ಲಿ ಸೈನಿಕರ ಕಿಚ್ಚು ಹೇಗಿರುತ್ತಿತ್ತು ಅಂದರೆ, ಮೂರು ದಿನ ಊಟ ಬಿಟ್ಟಿರುತ್ತೇವೆ ಆದರೆ ಶಸ್ತ್ರಾಸ್ತ್ರಗಳನ್ನು ಮಾತ್ರ ತಲುಪಿಸಿ ಎನ್ನುತ್ತಿದ್ದರು. ಕಾರಣ, ಅಂತಹ ದುರ್ಗಮ, ಬೆಟ್ಟ ಕೊರಕಲುಗಳ ಹಾದಿಯಲ್ಲಿ ಸಾಗುವುದು ಸುಲಭದ ಮಾತಾಗಿರಲಿಲ್ಲ. ಈ ಸಂದರ್ಬದಲ್ಲಿ ಗ್ರೆನೈಡ್ ದಾಳಿಯಿಂದ ನಾನು ನನ್ನ ಒಂದು ಕಾಲನ್ನು ಕಳೆದುಕೊಳ್ಳಬೇಕಾಯಿತು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ ಮಾತನಾಡಿ, ಒಬ್ಬ ಯೋಧನ ಮನ ಮತ್ತು ಹೃದಯ ಸದಾ ದೇಶಸೇವೆಗಾಗಿ ತುಡಿಯುತ್ತಿರುತ್ತದೆ. ಅವರೇ ನಿಜವಾದ ಹೀರೋಗಳು. ನವೀನ್ ನಾಗಪ್ಪರಂಥಹಾ ಸೈನಿಕರ ತ್ಯಾಗ, ಬಲಿದಾನಗಳಿಂದ ಭಾರತದ ಪ್ರಜೆಗಳು ನೆಮ್ಮದಿಯಿಂದ ಉಸಿರಾಡುವಂತಾಗಿದೆ. ವಿದ್ಯಾರ್ಥಿಗಳು ದೇಶಭಕ್ತಿ ಬೆಳೆಸಿಕೊಳ್ಳಬೇಕು, ಜೊತೆಗೆ ಇನ್ನೊಬ್ಬರಿಗೆ ಸಂಕಷ್ಟದಲ್ಲಿ ಸಹಾಯಹಸ್ತ ಚಾಚುವ ಗುಣವನ್ನು ಬೆಳೆಯಬೇಕು ಎಂದರು.ಕಾಲೇಜಿನ ಪ್ರಾಧ್ಯಾಪಕರು, ಎನ್.ಎಸ್.ಎಸ್ ಸ್ವಯಂಸೇವಕರು, ಎನ್.ಸಿ.ಸಿ ಕೆಡೆಟ್ಸ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಎನ್.ಎಸ್.ಎಸ್ ಕಾರ್ಯದರ್ಶಿ ರಕ್ಷಾ ಕೋಟ್ಯಾನ್ ನಿರೂಪಿಸಿದರು. ಯೋಜನಾಧಿಕಾರಿ ಪ್ರೊ. ಆಶಾ ಕಿರಣ್ ಸ್ವಾಗತಿಸಿ, ನಿಕಟಪೂರ್ವ ಯೋಜನಾಧಿಕಾರಿ ಪ್ರೊ. ಗಣೇಶ್ ಶೆಂಡ್ಯೆ ವಂದಿಸಿದರು.

ಯುದ್ಧ ಸಂದರ್ಭ ಪ್ರತಿಯೊಬ್ಬ ಸೈನಿಕರೂ ತಮ್ಮ ಸಹವರ್ತಿಗಳ ಜೊತೆ ಬೆಸೆಯುತ್ತಿದ್ದ ಬಾಂಧವ್ಯ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ನನ್ನ ಜೊತೆಗಾರನಾಗಿದ್ದವರು ಶ್ಯಾಮ್‌ಸಿಂಗ್ ಅನ್ನುವವರು. ಅನಾರೋಗ್ಯದಿಂದ ಬಳಲುತ್ತಿದ್ದರೂ ನಾನು ಯುದ್ಧಕ್ಕೆ ಹೊರಟು ನಿಂತ ಸಂದರ್ಭದಲ್ಲಿ ಜೊತೆಯಾಗಿದ್ದರು. ಸಂತೋಷ ಹಾಗೂ ಸಂಧಿಗ್ಧ ಪರಿಸ್ಥಿತಿಗಳೆರಡರಲ್ಲೂ ನಿಮ್ಮ ಜೊತೆಗಿರುತ್ತೇನೆ ಎಂದು ಅವರು ಹೇಳಿದ ಮಾತು ಇಂದಿಗೂ ಕಿವಿಯಲ್ಲಿ ಕೇಳಿದಂತೆ ಭಾಸವಾಗುತ್ತದೆ. ಆದರೆ ಅವರ ಸಾವು ನನ್ನ ಕಣ್ಣೆದುರೇ ಸಂಭವಿಸಿದರೂ ಜೋರಾಗಿ ಅಳಲೂ ನನ್ನಿಂದ ಸಾಧ್ಯವಾಗಲಿಲ್ಲ ಎಂದು ತಮ್ಮ ಮಿತ್ರನನ್ನು ನೆನೆದು ಕ್ಯಾ. ನವೀನ್ ನಾಗಪ್ಪ ದುಃಖಪಟ್ಟರು.

ಕ್ಯಾ. ನವೀನ್ ನಾಗಪ್ಪ ಅವರು ಕಾರ್ಗಿಲ್ ಯುದ್ಧದ ಸನ್ನಿವೇಶಗಳು ಹಾಗೂ ಸೈನಿಕರು ಎದುರಿಸುವ ಸವಾಲುಗಳನ್ನು ಮನೋಜ್ಞವಾಗಿ ತಿಳಿಸಿದ್ದರು. ಈ ವೇಳೆ ಭಾಷಣ ಆಲಿಸಿದ ವಿದ್ಯಾರ್ಥಿಗಳುಕ್ಯಾಪ್ಟನ್ ಅನುಭವದ ಮಾತನ್ನು ಕೇಳಿ ಕಣ್ಣೀರು ಹಾಕಿದ ಘಟನೆಯೂ ನಡೆಯಿತು. ಕಾರ್ಯಕ್ರಮದ ಬಳಿಕ ಸಭಾಂಗಣದಲ್ಲಿ ನೀರವ ಮೌನ ಆವರಿಸಿತ್ತು.

ಉಜಿರೆ ಶ್ರೀ ಧ. ಮಂ. ಪದವಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಿವೃತ್ತ ಯೋಧ ಕ್ಯಾ. ನವೀನ್ ನಾಗಪ್ಪ ಕಾರ್ಗಿಲ್ ಯುದ್ಧದ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

Related posts

Leave a Reply

Your email address will not be published. Required fields are marked *