Header Ads
Header Ads
Breaking News

ಆರೋಗ್ಯ ಕವಚ ನೂರಾಎಂಟಕ್ಕೆ ನೂರೆಂಟು ಅನಾರೋಗ್ಯ!

 ಸಾವಿನ ದವಡೆಯಲ್ಲಿರುವ ರೋಗಿಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಮುಟ್ಟಿಸಬೇಕಿದ್ದ ನೂರಾಎಂಟು ಆಂಬುಲೆನ್ಸ್ ನೂರೆಂಟು ಅನಾರೋಗ್ಯದಿಂದ ಬಳಲುತ್ತಿದೆ. ಹಿಂಬದಿ ಬಾಗಿಲ ಲಾಕರ್ ತುಂಡಾಗಿ ಬಳ್ಳಿಯ ಸಹಾಯದಿಂದ ಬಿಗಿಯಲಾಗಿದರೆ, ವಾಹನಕ್ಕೆ ಅಳವಡಿಸಿರುವ ಎಸಿ ಕೆಲಸವೇ ಮಾಡುತ್ತಿಲ್ಲ. ತುಕ್ಕು ಹಿಡಿದ ಫ್ಲಾಟ್ ಫಾರ್ಮ್ ಈಗಲೋ ಆಗಲೋ ಎನ್ನುವ ಸ್ಥಿತಿಯಲ್ಲಿದೆ. ಇನ್ನು ಆಗಾಗೆ ಹಾಳಾಗುತ್ತಲೇ ಇರುವ ಹೆಡ್ ಲೈಟ್ ಒಂದೆಡೆಯಾದರೆ, ಇನ್ನೊಂದೆಡೆ ಬ್ಯಾಟರಿ ಕೈಕೊಟ್ಟರೆ ಏಳೆಂಟು ಮಂದಿ ಸೇರಿ ದೂಡಬೇಕಾದ ಪರಿಸ್ಥಿತಿ. ಅಬ್ಬಬ್ಬಾ…. ಕೇವಲ ಒಂದು ಆಂಬುಲೆನ್ಸ್ ನಲ್ಲಿ ಎಷ್ಟೆಲ್ಲಾ ಸಮಸ್ಯೆಗಳು. ಇದು ರಾಜ್ಯಸರ್ಕಾರದ ಆರೋಗ್ಯ ಕವಚ 108ರ ದಯನೀಯ ಸ್ಥಿತಿ. ಈ ಕುರಿತಾದ ಒಂದು ಸ್ಟೋರಿ ಇಲ್ಲಿದೆ. ಯಾವ ಬದಿಯಿಂದ ನೋಡಿದರೂ ಈ ಆಂಬುಲೆನ್ಸ್ ಸುರಕ್ಷಿತ ಅಂತ ಅನಿಸೋದಿಲ್ಲ.

ಇದರೊಳಗೆ ಮಲಗುವ ರೋಗಿಗಳು ಆಸ್ಪತ್ರೆ ತಲುಪುತ್ತಾರೆ ಎಂದು ನಿಖರವಾಗಿ ಹೇಳುವುದಕ್ಕೆ ಸಾಧ್ಯವೇ ಇಲ್ಲ. ರಸ್ತೆ ಮೇಲೆ ಆಂಬುಲೆನ್ಸ್ ಹೊರಟರೆ ಸೈರನ್ ಹಾಕಬೇಕು ಅಂತಲೇ ಇಲ್ಲ. ದಡಬಡಾ ಶಬ್ಧ ಕೇಳಿದರೆ ಸಾಕು ಇಲ್ಲಿನ ಜನರು ಸೈಡ್ ಕೊಟ್ಟು ನಿಲ್ಲುತ್ತಾರೆ. ರಾಜ್ಯದ ಜನರಿಗೆ ಹತ್ತಾರು ಭಾಗ್ಯಕೊಟ್ಟ ರಾಜ್ಯ ಸರ್ಕಾರ ಸಿದ್ದಾಪುರ ಜನರಿಗೆ ಕೊಟ್ಟಿದ್ದು ಮಾತ್ರ ಡೆಕೋಟ ಆಂಬುಲೆನ್ಸ್ ಭಾಗ್ಯ! ಹೊಸಂಗಡಿ, ಸಿದ್ದಾಪುರ, ಹಳ್ಳಿಹೊಳೆ, ಆಜ್ರಿ, ಜನ್ಸಾಲೆ, ಯಡಮೊಗೆ, ಅಮಾಸೆಬೈಲು ಪ್ರದೇಶಗಳ ಸುಮಾರು ೧೦ ಸಾವಿರಕ್ಕೂ ಮಿಕ್ಕಿ ಜನಸಂಖ್ಯೆಗೆ ಇರುವುದು ಒಂದೇ ಆಂಬುಲೆನ್ಸ್. ಅದೂ ಕೂಡ ಸಸೂತ್ರವಿಲ್ಲ. ಸಿದ್ದಾಪುರ ಗ್ರಾ.ಪಂ ಹಾಗೂ ಈ ಭಾಗದ ಜನಪ್ರತಿನಿಧಿಗಳು108 ಆಂಬುಲೆನ್ಸ್ ವಾಹನವನ್ನು ಬದಲಾಯಿಸುವಂತೆ ಮನವಿ ಮಾಡಿದರೂ ಸಂಬಂಧಪಟ್ಟವರಿಂದ ಯಾವುದೇ ಸ್ಪಂದನೆ ಇಲ್ಲ. 10 ಲಕ್ಷಕ್ಕೂ ಅಧಿಕ ಕಿ.ಮೀ ಓಡಿದ ಈ ಆಂಬುಲೆನ್ಸ್ ಅನ್ನು ತಕ್ಷಣ ಬದಲಾಯಿಸಿ ಹೊಸ ಅಂಬೂಲೆನ್ಸ್ ಕೊಡಿ ಎನ್ನುವುದು ಇಲ್ಲಿನ ಜನರ ಒಕ್ಕೊರಲ ಆಗ್ರಹ. ನಕ್ಸಲ್ ಪ್ರದೇಶ ಎಂದು ಹಣೆಪಟ್ಟಿಕಟ್ಟಿಕೊಂಡಿರುವ ಈ ಪ್ರದೇಶಗಳಿಗೆ ಸರ್ಕಾರ ವಿಶೇಷ ಆಧ್ಯತೆ ನೀಡುವ ಬದಲು ಗುಜರಿ ಆಂಬುಲೆನ್ಸ್ ನೀಡಿರುವುದು ಹಲವರ ಕಣ್ಣು ಕೆಂಪಗಾಗಿಸಿದೆ. ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಬಂದ ಬಳಿಕ108 ಆಂಬುಲೆನ್ಸ್ ಸೇವೆ ಸಿದ್ದಾಪುರಕ್ಕೂ ಸಿಕ್ಕಿತು.

ಮೊದಲು ಹೊಚ್ಚ ಹೊಸದು ಆಂಬುಲೆನ್ಸ್ ಸಿದ್ದಾಪುರಕ್ಕೆ ಬಂದಿತ್ತು. ಅದೇನಾಯಿತೋ ಗೊತಿಲ್ಲ. ಬಂದ ಸ್ವಲ್ಪ ದಿನದಲ್ಲೇ ಅತ್ಯುತ್ತಮ ಸೇವೆ ಒದಗಿಸಿದ ೧೦೮ ಆಂಬುಲೆನ್ಸ್ ವಾಹನವನ್ನು ಕಾರಣಾಂತರಗಳಿಂದ ಬೇರೆ ಜಿಲ್ಲೆಗೆ ಕೊಡಲಾಯಿತು. ಯಾದಗಿರಿಯಲ್ಲಿ ಸಾಕಷ್ಟು ಓಡಿ ಗುಜರಿಯಾದ108 ಸಿದ್ದಾಪುರಕ್ಕೆ ಬಂದಿತು.108 ಚಾಲಕ, ಸಿಬ್ಬಂದಿ ಬಗ್ಗೆ ಪರಿಸರದಲ್ಲಿ ಒಳ್ಳೆಯ ಹೆಸರಿದೆ. ಇರೋದ್ರಲ್ಲೇ ಉತ್ತಮ ಸೇವೆ ಕೊಡುತ್ತಿದ್ದಾರೆ. ಆದರೆ ಗಾಡಿಯೇ ಸರಿಯಿಲ್ಲದ್ದಿದ್ದರೆ ಅವರೇನು ಮಾಡಲು ಸಾಧ್ಯ. ಸಿದ್ದಾಪುರದ108 ರಲ್ಲಿ ಮೂರಕ್ಕೂ ಹೆಚ್ಚು ಹರಿಗೆ ಆಗಿದೆ. ನೂರಾರು ಜನರ ಜೀವ ಉಳಿಸಿದ ಆಂಬುಲೆನ್ಸ್ ಪ್ರಸಕ್ತ ಜೀವ ಬಿಡುವ ಸ್ಥಿತಿಯಲ್ಲಿದೆ. ಆಕ್ಸಿಜನ್ ಕೊಟ್ಟರೂ ಬದುಕೋದು ಕಷ್ಟವಾಗಿದೆ. ಗುಜರಿ ಸೇರಬೇಕಿದ್ದ ಆಂಬುಲೆನ್ಸ್ ಇನ್ನೂ ರಸ್ತೆ ಮೇಲೆ ಸಂಚರಿಸುತ್ತದೆ ಎಂದರೆ ನಮ್ಮ ಆಡಳಿತ ವ್ಯವಸ್ಥೆಗೆ ನಾಚಿಕೆ ಆಗಬೇಕು.ಇಷ್ಟೆಲ್ಲಾ ಸಮಸ್ಯೆಗಳಿರುವ ಆಂಬುಲೆನ್ಸ್ ಬದಲಾಗುತ್ತದೆ ಎಂದು ಇಲ್ಲಿನ ಜನತೆ ಕಾಯುತ್ತಿರುವಾಗಲೇ ನಾಲ್ಕು ಹೊಸ ಆಂಬುಲೆನ್ಸ್ ಕಳೆದ ವರ್ಷ ಬಂತಲ್ಲಾ ಸಿದ್ದಾಪುರಕ್ಕೂ ಸಿಕ್ಕಿತು ಎಂದು ಖುಷಿ ಪಟ್ಟಿದ್ದೇ ಬಂತು..

ಪಕ್ಕದ ಹಾಲಾಡಿಗೆ ಒಂದು ಆಂಬುಲೆನ್ಸ್ ಹೋದರೆ ಉಳಿದವು ಬೇರೆ ಬೇರೆ ಕಡೆ ರವಾನೆಯಾಗುವ ಮೂಲಕ ಸಿದ್ದಾಪುರಕ್ಕೆ ಸಿಕ್ಕಿದ್ದು ನಿರಾಸೆ. ಪ್ರಸಕ್ತ ಸಿದ್ದಾಪುರದಲ್ಲಿ ೧೦೮ ಗುಜರಿಯಾದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೂ ಇಲ್ಲ. ಸರ್ಕಾರ ನಕ್ಸಲ್ ಪ್ರದೇಶಕ್ಕೆ ಪ್ಯಾಕೇಜ್, ವಿಶೇಷ ಅನುದಾನ ಅಭಿವೃದ್ಧಿ ಮುಂತಾದ ಕೊಡುಗೆ ಕೊಟ್ಟರೂ, ಹೈಲೀ ನಕ್ಸಲ್ ಬೆಲ್ಟ್ ಗುಜರಿ108 ಬದಲಾಯಿಸದಿರುವುದು ಅಚ್ಚರಿಯ ಸಂಗತಿ. ಸಿದ್ದಾಪುರದ ಗುಜರಿ ಅಂಬುಲೆನ್ಸ್ ಬದಲಾಯಿಸುವಂತೆ ೧೦೮ ರ ಜಿಲ್ಲಾ ಮೇಲುಸ್ತುವಾರಿಯವರಿಗೆ ಕೇಳಿಕೊಂಡರೂ ಅವರು ಉಡಾಫೆ ಉತ್ತರ ಕೊಡುತ್ತಿದ್ದಾರೆ. ಸಿದ್ದಾಪುರಕ್ಕೆ ಹೊಸ ಆಂಬುಲೆನ್ಸ್ ಅಥವಾ ಸುಸಜ್ಜಿತ ಆಂಬುಲೆನ್ಸ್ ಕೊಡದಿದ್ದರೆ ನಾಗರಿಕರ ಜೊತೆ ಆರೋಗ್ಯ ಅಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಎನ್ನುತ್ತಾರೆ ಈ ಭಾಗದ ತಾ.ಪಂ ಸದಸ್ಯ ವಾಸುದೇವ ಪೈ. ಒಟ್ಟಿನಲ್ಲಿ ಸರ್ಕಾರ ಉಚಿತ ಆಂಬುಲೆನ್ಸ್ ಸೇವೆ ನೀಡುತ್ತೇವೆ ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದರೆ ಸರ್ಕಾರದ ವ್ಯವಸ್ಥೆ ಹೇಗಿರುತ್ತದೆ ಎನ್ನೋದಕ್ಕೆ ಒಮ್ಮೆ ಸಿದ್ದಾಪುರ ೧೦೮ ಆಂಬುಲೆನ್ಸ್ ನೋಡಿ ಬಂದರೆ ಸಾಕು. ಆರೋಗ್ಯ ಇಲಾಖೆ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದೆ. ಎಲ್ಲಾದರೂ ಹೆಚ್ಚುಕಮ್ಮಿಯಾದರೆ ಯಾರನ್ನ ಕೇಳಬೇಕು. ಅನಾರೋಗ್ಯಕ್ಕೀಡಾದ ಆಂಬುಲೆನ್ಸ್ ನ ಆರೋಗ್ಯ ಸುಧಾರಿಸೋದು ಎಂದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಸಿಗಬೇಕಾಗಿದೆ.

Related posts

Leave a Reply