Header Ads
Header Ads
Breaking News

ಆರ್‌ಟಿಐ ಸೀಟು ಹಂಚಿಕೆಯಲ್ಲಿ ತಾರತಮ್ಯ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಮ್ಮೂರು ನೆಕ್ಕಿಲಾಡಿ ಸಂಸ್ಥೆಯ ನೇತೃತ್ವದಲ್ಲಿ ಧರಣಿ

ಪುತ್ತೂರು : ಕಡ್ಡಾಯ ಶಿಕ್ಷಣ ಕಾಯ್ದೆ ಸೀಟು ಹಂಚಿಕೆ ತಾರತಮ್ಯವನ್ನು ವಿರೋಧಿಸಿ ಮತ್ತು ಆರ್‌ಟಿಐ ಉಚಿತ ಸೀಟುಗಳನ್ನು ತಾಲ್ಲೂಕುವಾರು ಹಂಚಿಕೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಪುತ್ತೂರು ತಾಲ್ಲೂಕಿನ 34 ನೆಕ್ಕಿಲಾಡಿ ಗ್ರಾಮದ ‘ನಮ್ಮೂರು ನೆಕ್ಕಿಲಾಡಿ’ ಸಂಸ್ಥೆಯ ನೇತೃತ್ವದಲ್ಲಿ ಗುರುವಾರ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಆರ್‌ಟಿಐ ಸೀಟು ಹಂಚಿಕೆಗೆ ಸಂಬಂಧಿಸಿ ಈಗ ಇರುವ ಗ್ರಾಮ,ವಾರ್ಡುವಾರು ಮಿತಿಯನ್ನು ರದ್ದುಗೊಳಿಸಿ, ತಾಲ್ಲೂಕುವಾರು ಸೀಟು ಹಂಚಿಕೆ ಮಾಡಬೇಕು. ಆರ್‌ಟಿಐ ಸೀಟುಗಳು ಶ್ರೀಮಂತ ಮಕ್ಕಳ ಪಾಲಾಗದೆ ಅರ್ಹ ಬಡ ಮಕ್ಕಳಿಗೆ ಸಿಗುವಂತೆ ಆಗಬೇಕು, ಈ ಬಗ್ಗೆ ತನಿಖೆ ನಡೆಸಲು ತಾಲ್ಲೂಕಿಗೊಂದು ಸಮಿತಿ ರಚನೆ ಮಾಡಬೇಕು, ಸೀಟು ಹಂಚಿಕೆಯಲ್ಲಿ ದುರುಪಯೋಗವಾದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು, ಕಡ್ಡಾಯ ಶಿಕ್ಷಣವನ್ನು 14 ವರ್ಷಗಳಿಗೆ ಸೀಮಿತಗೊಳಿಸದೆ 18 ವರ್ಷದ ತನಕ ಮುಂದುವರಿಸಬೇಕು, ಪ್ರತಿ ಗ್ರಾಮದಲ್ಲಿಯೂ ಎಲ್ಲಾ ಮೂಲಭೂತ ಸೌಕರ್ಯಗಳನ್ನೊಳಗೊಂಡ ಮಾದರಿ ಸರ್ಕಾರಿ ಶಾಲೆ ತೆರೆಯುವ ಮೂಲಕ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು. ‘ನೇತ್ರಾವತಿ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಮತ್ತು ಸ್ಥಳಿಯರ ಸಹಕಾರದೊಂದಿಗೆ ‘ನಮ್ಮೂರು ನೆಕ್ಕಿಲಾಡಿ’ ಸಂಘಟನೆಯವರು ಈ ಪ್ರತಿಭಟನೆ ಹಮ್ಮಿಕೊಂಡಿದ್ದರು.

‘ನಮ್ಮೂರು ನೆಕ್ಕಿಲಾಡಿ’ ಸಂಘಟನೆಯ ಉಪಾಧ್ಯಕ್ಷರಾದ ರೂಪೇಶ್ ರೈ ಅಲಿಮಾರು, ಜಾನ್ ಕೆನ್ಯೂಟ್,ಅನಿ ಮೆನೇಜಸ್, ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸತ್ಯಾವತಿ ಪೂಂಜ,ಸಂಘಟನಾ ಸಹ ಕಾರ್ಯದರ್ಶಿ ಅಮಿತಾ ಹರೀಶ್, ಸಂಘಟನೆಯ ಪ್ರಮುಖರಾದ ರೋಹಿತ್ ಹರೇಬಂಡಾಡಿ, ಮತ್ತಿತರರು ಹಾಜರಿದ್ದರು.ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬಳಿಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕ್ಷೇತ್ರ ಶಿಕ್ಷಣ ಇಲಾಖೆಯ ಸಂಯೋಜಕ ಲೋಕಾನಂದ ಅವರ ಮೂಲಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಶೇಠ್ ಅವರಿಗೆ ಮನವಿ ಸಲ್ಲಿಸಿದರು.
ವರದಿ: ಅನೀಶ್ ಪುತ್ತೂರು

Related posts

Leave a Reply