Header Ads
Header Ads
Breaking News

ಆಳ್ವಾಸ್ :ಅಭಿವೃದ್ಧಿಯನ್ನು ಪ್ರಶ್ನಿಸಿದ “ಅಭಿವೃದ್ಧಿ” ಕಿರು ನಾಟಕ

ಮೂಡುಬಿದಿರೆ: ರಂಗ ಮಾತ್ರಿಕ ಜೀವನ್ ರಾಂ ಸುಳ್ಯ ರಚಿಸಿ, ನಿರ್ದೇಶಿಸಿದ ಅಭಿವೃದ್ದಿ ಕಿರುನಾಟಕ ಹೃದಯಸ್ಪರ್ಶಿಯಾಗಿದ್ದು ಅಭಿವೃದ್ಧಿಯ ವಿವಿಧ ಮಜಲುಗಳನ್ನು ಮನಸ್ಸಿಗೆ ನಾಟುವಂತೆ ತೆರೆದಿಟ್ಟಿದೆ.

ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಸಾದರಪಡಿಸಿದ ಈ ನಾಟಕದಲ್ಲಿ ಆಧುನಿಕ ಸಮಾಜದ ಭ್ರಮಾತ್ಮಕ ಲೋಕಕ್ಕೆ ಭಾವನಾತ್ಮಕ ಸಂಬಂಧಗಳು ವಿನಾಶದ ಅಂಚಿಗೆ ತಲುಪುವ ವಸ್ತುಸ್ಥಿತಿಯನ್ನು ಕಾಣಬಹುದಾಗಿದೆ. ಸುಸಜ್ಜಿತ ರಂಗ ಸಜ್ಜಿಕೆಯನ್ನು ಬಳಸಿಕೊಂಡು ಸೀಮಿತ ಕಾಲಾವಧಿಯಲ್ಲಿ ಅನಿಯಮಿತ ಅನುಭವಗಳನ್ನು ಸ್ಪುರಿಸುವಲ್ಲಿ ನೆರವಾಗುವ ಈ ಕಿರು ನಾಟಕ ಎಲ್ಲರೂ ನೋಡಬೇಕಾದದ್ದು.

ಅಭಿವೃದ್ಧಿ ಎಂಬ ಪರಿಕಲ್ಪನೆಯೇ ಅವನತಿಯ ಆಳವನ್ನು ಅರ್ಥೈಸುವಂತಹ ವಾಸ್ತವ ಕಟು ಸತ್ಯ. ಏಳಿಗೆಯ ಉದ್ದೇಶವನ್ನಿರಿಸಿಕೊಂಡು ಏನೋ ಒಂದು ರೀತಿಯ ಬದಲಾವಣೆಯಾಗುತ್ತದೆ ಎಂಬ ಭ್ರಮೆಯಲ್ಲಿ ಸದಾ ವಿಹರಿಸುವ ಆಧುನಿಕ ಮನಸ್ಸುಗಳು ಹಿರಿತನದ ಮುಗ್ಧ ಯೋಚನೆ- ಯೋಜನೆಗಳನ್ನು ಗಾಳಿಯಲ್ಲಿ ತೋರಿಬಿಡುವಂತಹ ಜಾಯಮಾನ ಬೆಳೆಯುತ್ತಿದೆ. ಅಭಿವೃದ್ಧಿ ಎಂಬ ನೆಪದಲ್ಲಿ ಮಾನವೀಯ ಮೌಲ್ಯಗಳನ್ನು ಮರೆತು ಕೊನೆಗೆ ವ್ಯಥೆ ಪಡುವ ಸ್ಥಿಯನ್ನು ಸೋದಹರಣವಾಗಿ ಬಿಚ್ಚಿಟ್ಟ ಕಿರು ನಾಟಕವೇ “ಅಭಿವೃದ್ಧಿ”

“ಈ ಮನೆಯಲ್ಲಿ ನನ್ನ ಕೊನೆಯ ಸ್ನಾನ”, “ಬದಲಾವಣೆಗೆ ಹೊಂದಿಕೊಳ್ಳಬೇಕು”, ನಿಮ್ಮ ಅಭಿವೃದ್ಧಿಗೆ ಧಿಕ್ಕಾರ”, “ಸರ್ಕಾರದ ಆದೇಶ ಪಾಲಿಸಬೇಕು”…… ಎಂಬಿತ್ಯಾದಿ ಪದಪ್ರಯೋಗಗಳು ಪ್ರೇಕ್ಷಕರನ್ನು ಯೋಚನಾ ಮಗ್ನರನ್ನಾಗಿಸುತ್ತದೆ.

ದೇವಸ್ಥಾನವನ್ನು ನಾಶಮಾಡುವ, ಮರವನ್ನು ಉರುಳಿಸುವ, ಸಂಬಂಧವನ್ನು ಮುರಿಯುವಂತಹ ಅಭಿವೃದ್ಧಿಯು ನಿಜವಾಗಿಯೂ ಅಭಿವೃದ್ಧಿಯೇ? ಎಂದು ಪ್ರೇಕ್ಷಕರಲ್ಲೇ ಪ್ರಶ್ನೆ ಮಾಡುವ ಪಾತ್ರಧಾರಿಗಳ ನಟನಾ ಕೌಶಲ್ಯ ಕರತಾಡನಕ್ಕೆ ಕಾರಣವಾಗುತ್ತದೆ. ಒಟ್ಟಿನಲ್ಲಿ ಅಭಿವೃದ್ಧಿ ಎಂಬ ನೆಪದಲ್ಲಿ ನಾಶವಾಗುವ ಭೌತ-ಅಭೌತ ಸಂಸ್ಕೃತಿಯ ತೀವ್ರತೆಯನ್ನು ಪರೋಕ್ಷವಾಗಿ ಪರಿಚಯಿಸುವಲ್ಲಿ ಈ “ಅಭಿವೃದ್ಧಿ” ಎಂಬ ಕಿರು ನಾಟಕ ಸಫಲವಾಗಿದೆ ಎಂದರೆ ಅತಿಶಯೋಕ್ತಿಯಾಗದು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳ ಶ್ರಮ, ರಂಗ ಮಾಂತ್ರಿಕ ಜೀವನ್ ರಾಂ ಸುಳ್ಯ ರವರ ಸೃಜನಶೀಲತೆಯ ರಂಗ ನಿರ್ದೇಶನ ನಾಟಕದ ಯಶಸ್ಸಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

 

Related posts

Leave a Reply