Breaking News

ಆಹಾರ ಮತ್ತು ನೀರಿನ ಕೊರತೆ,  ಮೂರು ಡಜನ್ ಆನೆಗಳ ಸಾವು

ತಮಿಳುನಾಡಿನ ಕೊಯಮತ್ತೂರು ಮತ್ತು ನೀಲಗಿರಿ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಕಳೆದ ೧೮ ತಿಂಗಳ ಅವಧಿಯಲ್ಲಿ ೩೬ ಆನೆಗಳು ಆಹಾರವಿಲ್ಲದೆ ಮೃತಪಟ್ಟಿವೆ.
ಕುಡಿಯುವ ನೀರು ಮತ್ತು ಆಹಾರದ ಕೊರತೆ, ಮಾನವ ವನ್ಯಜೀವಿಗಳ ನಡುವಿನ ಸಂಘರ್ಷವೇ ಆನೆಗಳ ಸಾವಿಗೆ ಕಾರಣ. ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೇ ಹೆಚ್ಚು ಆನೆಗಳು ಅಸುನೀಗಿವೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. ದಕ್ಷಿಣ ರಾಜ್ಯಗಳಲ್ಲಿ ಇದೇ ೧೬ರಿಂದ ಆನೆಗಳ ಗಣತಿ ನಡೆಯಲಿದೆ. ಈ ನಡುವೆಯೇ ಕಾಡಾನೆಗಳ ಸಾವು ಹೆಚ್ಚುತ್ತಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಮುಂಗಾರು ವೈಫಲ್ಯ ಮತ್ತು ಕುಡಿಯುವ ನೀರಿನ ಕೊರತೆಯು ಕೇವಲ ರೈತರ ಮೇಲೆ ಅಷ್ಟೆ ಅಲ್ಲದೆ ನೀಲಗಿರಿ ಜೀವವೈವಿಧ್ಯ ತಾಣದಲ್ಲಿರುವ ಆನೆಗಳ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರಿದೆ. ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನ, ಮುತ್ತಂಗ ಅರಣ್ಯ ಪ್ರದೇಶ ಮತ್ತು ಕೇರಳದ ವೈನಾಡು ಪ್ರದೇಶಕ್ಕೆ ನೀರು, ಮೇವು ಅರಸಿ ಆನೆಗಳು ವಲಸೆ ಹೋಗುತ್ತವೆ. ಆದರೆ, ಅಲ್ಲಿಯೂ ಆಹಾರ ಸಿಗುತ್ತಿಲ್ಲ. ಹಾಗಾಗಿ, ಹಸಿವಿನಿಂದ ಸಾಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಕಾಡಿನೊಳಗೆ ತಾತ್ಕಾಲಿಕವಾಗಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಆನೆಗಳು ವಲಸೆ ಹೋಗುವುದರಿಂದ ಮೇವು ಒದಗಿಸುವುದು ಕಷ್ಟಕರ ಎಂಬುದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ವಿವರಣೆ. ೨೦೧೬ರ ಮಾರ್ಚ್ನಿಂದ ಈ ವರ್ಷದ ಮಾರ್ಚ್ವರೆಗೆ ಮುದುಮಲೈ, ಗೂಡಲೂರು, ಪಾಂಡಲೂರು, ಚೇರಂಪಾಡಿ ವಲಯದ ವ್ಯಾಪ್ತಿಯಲ್ಲಿ ೨೬ ಆನೆಗಳು ಮೃತಪಟ್ಟಿವೆ. ಈ ಪೈಕಿ ೮ ಆನೆಗಳು ಹಸಿವು ಮತ್ತು ನಿಶ್ಯಕ್ತಿಯಿಂದ ಅಸು ನೀಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಮಾಯಾರ್ ಅರಣ್ಯ ವಲಯದ ವ್ಯಾಪ್ತಿ ಹೆಣ್ಣಾನೆ ಮತ್ತು ಮರಿ ಆನೆಯೊಂದು ಸತ್ತಿರುವುದು ವರದಿಯಾಗಿದೆ. ಕೊಯಮತ್ತೂರು ವಿಭಾಗದಲ್ಲೂ ೮ ಆನೆಗಳು ಅಸುನೀಗಿವೆ.
ಅರಣ್ಯದಲ್ಲಿ ಪಾರ್ಥೇನಿಯಂ ಕಳೆ ಆವರಿಸಿದೆ. ಇದರಿಂದ ಸಮೃದ್ಧವಾಗಿ ಮೇವು ಬೆಳೆಯಲು ತೊಡಕಾಗಿದೆ. ಹಾಗಾಗಿ, ಆನೆಗಳು ನೀರು, ಮೇವು ಅರಸಿಕೊಂಡು ರೈತರ ಕೃಷಿ ಜಮೀನಿನತ್ತ ಲಗ್ಗೆ ಇಡುತ್ತವೆ. ಹಸಿರು ಮೇವು ಅರಸಿಕೊಂಡು ನಗರದ ಅಂಚಿನ ಕೃಷಿ ಜಮೀನಿನತ್ತಲೂ ಮುಖ ಮಾಡುತ್ತವೆ. ಈ ವೇಳೆ ಸಂಭವಿಸುವ ಮಾನವ ಮತ್ತು ಕಾಡಾನೆಗಳ ನಡುವಿನ ಸಂಘರ್ಷವು ಆನೆಯ ಸಾವಿನೊಂದಿಗೆ ಅಂತ್ಯಗೊಳ್ಳುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Related posts

Leave a Reply