Header Ads
Header Ads
Header Ads
Breaking News

ಇಂದಬೆಟ್ಟುವಿನಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಬಿ.ಬಿ.ಎ. ವಿದ್ಯಾರ್ಥಿಗಳಿಂದ ಪೇಪರ್‌ಪೂಲ್ ಕ್ಯಾಂಪೇನ್

ಇಂದಬೆಟ್ಟು: ಭೌತಿಕ ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನೂ ಬೆಳೆಸಿಕೊಳ್ಳಬೇಕು. ಜ್ಞಾನವನ್ನು ವಿವೇಚನೆಯಾಗಿ ಮಾರ್ಪಾಡುಗೊಳಿಸಿದಾಗ ಮಾತ್ರ ಶಿಕ್ಷಣದ ಮುಖ್ಯ ಗುರಿ ಸಾಕಾರಗೊಳ್ಳುತ್ತದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟುವಿನ ಮುಖ್ಯೋಪಾಧ್ಯಾಯ ಕೋಮಲ್‌ಚಂದ್ ಹೇಳಿದರು.
ಇವರು ಉಜಿರೆಯ ಶ್ರೀ ಧ.ಮಂ. ಪದವಿ ಕಾಲೇಜಿನ ಬಿ.ಬಿ.ಎ. ವಿಭಾಗ ಸ.ಹಿ.ಪ್ರಾ. ಶಾಲೆ ಇಂದಬೆಟ್ಟುವಿನಲ್ಲಿ ಹಮ್ಮಿಕೊಂಡಿದ್ದ ಪೇಪರ್‌ಪೂಲ್ ಕ್ಯಾಂಪೇನ್ ಎಂಬ ವಿಶಿಷ್ಟ ಯೋಜನೆಯ ಸಮಾರಂಭದಲ್ಲಿ ಮಾತನಾಡಿದರು.

ನಾನು ನನ್ನದು ಎನ್ನುವ ಭಾವನೆಯನ್ನು ತೊರೆದು ಸಮಾಜಕ್ಕೆ ಅಲ್ಪ ಸಮಯವನ್ನಾದರೂ ಮೀಸಲಿಡುವ ಉದಾರ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಅದಕ್ಕಾಗಿ ನಿಸ್ವಾರ್ಥ ಮನದಿಂದ ಯಾವುದೇ ಕೀಳರಿಮೆ ಇಲ್ಲದೇ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಲಾ ಹಳೆವಿದ್ಯಾರ್ಥಿ ವಿನೋದ್ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಂದ ಸಿಗುವ ಜ್ಞಾನ ಬೇರೆ ಯಾವ ಮೂಲಗಳಿಂದಲೂ ದೊರಕಲು ಸಾಧ್ಯವಿಲ್ಲ. ಸಮಾಜ ನಮ್ಮ ವ್ಯಕ್ತಿತ್ವ ರೂಪುಗೊಳ್ಳಲು ಹಲವಾರು ಮಾರ್ಗಗಳನ್ನು ಕಲ್ಪಿಸಿದೆ ಅದನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜದ ಏಳ್ಗೆಗಾಗಿ ಶ್ರಮಿಸಬೇಕು, ಈ ನಿಟ್ಟಿನಲ್ಲಿ ಬಿ.ಬಿ.ಎ. ವಿಭಾಗವು ಇಟ್ಟಿರುವ ಹೆಜ್ಜೆ ಶ್ಲಾಘನೀಯ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಂದ್ರ ಗೌಡ ವಹಿಸಿದ್ದರು. ಬಿ.ಬಿ.ಎ. ವಿಭಾಗದ ಪ್ರಾಧ್ಯಾಪಕ ಶರಶ್ಚಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇನ್ನೋರ್ವ ಪ್ರಾಧ್ಯಾಪಕ ಶ್ರೇ ಯಸ್ ಹಾಗೂ ಬಿ.ಬಿ.ಎ. ವಿಭಾಗದ ವಿದ್ಯಾರ್ಥಿ ಸಂಯೋಜಕರಾದ ತನುಷ್ ಹಾಗೂ ಪ್ರತಿಮಾ ಮತ್ತು ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರಾದ ರಮ್ಯಾ ಸ್ವಾಗತಿಸಿ, ಸ್ಮಿತಾ ವಂದಿಸಿದರು. ಪೂಜಾ ನಿರೂಪಿಸಿದರು.

ಏನಿದು ಪೇಪರ್‌ಪೂಲ್ ಕ್ಯಾಂಪೇನ್?
ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಬಿ.ಬಿ.ಎ. ವಿದ್ಯಾರ್ಥಿಗಳು ಕಾಲೇಜಿನ ಇತರೆ ವಿದ್ಯಾರ್ಥಿಗಳಿಂದ ಬಳಸದೇ ವ್ಯರ್ಥವಾಗಿ ಉಳಿದುಹೋಗುವಂತಹ ಕಾಗದಗಳನ್ನು ಸಂಗ್ರಹಿಸಿ, ಅದನ್ನು ಮುದ್ರಣಾಲಯಕ್ಕೆ ನೀಡಿದರು. ಈ ಕಾಗದಗಳಿಂದ ಸುಮಾರು 500 ಪುಸ್ತಕಗಳನ್ನು ತಯಾರಿಸಲಾಯಿತು. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಿಗೆ ಈ ಪುಸ್ತಕಗಳನ್ನು ನೀಡಿ ಅವರ ವಿದ್ಯಾಭ್ಯಾಸಕ್ಕೆ ಕೈಲಾದ ಸಹಾಯ ಮಾಡುವುದು ಹಾಗೂ ಪರಿಸರಸ್ನೇಹಿ ಕಾಗದಗಳ ಮರುಬಳಕೆಗೆ ಹೆಚ್ಚಿನ ಒತ್ತನ್ನು ನೀಡುವುದು ಈ ಯೋಜನೆಯ ಉದ್ದೇಶ. ಇದರ ಜೊತೆಗೆ ಲೇಖನ ಸಾಮಗ್ರಿಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು. ಶಾಲಾ ಸುತ್ತಮುತ್ತಲಿನ ಪರಿಸರದಲ್ಲಿ ಶ್ರಮದಾನ ಹಾಗೂ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆಗಳನ್ನೂ ಹಮ್ಮಿಕೊಳ್ಳಲಾಯಿತು.

Related posts

Leave a Reply

Your email address will not be published. Required fields are marked *