
ದಕ್ಷಿಣ ಭಾರತದ ಪ್ರಧಾನ ಮಹಾಕ್ಷೇತ್ರಗಳಲ್ಲೊಂದಾದ ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಕದ್ರಿ ಮಂಜುನಾಥ ಸ್ವಾಮಿಯ ದೇವಸ್ಥಾನಕ್ಕೆ ಸಂಬಂಧಪಟ್ಟ ಕದ್ರಿ ಶ್ರೀ ಜೋಗಿ ಮಠ ಬಹಳ ಪುರಾತನವಾದ ಶೈವ ಪರಂಪರೆಯ ಧಾರ್ಮಿಕ ಕ್ಷೇತ್ರವಾಗಿದೆ. ಇದೀಗ ಮಠದಲ್ಲಿ ಕಾಲ ಭೈರವ ದೇವರ ದೇವಸ್ಥಾನದ ಗರ್ಭಗುಡಿ ನವೀಕರಣ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಲಿರುವುದು ಎಂದು ಕದ್ರಿ ಶ್ರೀ ಯೋಗೀಶ್ವರ ಮಠದ ಮಠಾಧಿಪತಿ ಶ್ರೀ ನಿರ್ಮಲನಾಥ್ ಜೀ ಮಹಾರಜ್ ತಿಳಿಸಿದರು.
ಅವರು ಕದ್ರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕದ್ರಿ ಶ್ರೀ ಯೋಗೇಶ್ವರ ಮಠದ ಆರಾಧ್ಯ ಮೂರ್ತಿಯಾದ ಶ್ರೀ ಕಾಲ ಭೈರವ ದೇವರನ್ನು ನಾಥ ಸಂಪ್ರದಾಯದ ಋಷಿ ಮುನಿಗಳು ಅನಾದಿಕಾಲದಿಂದಲೂ ಪೂಜಿಸಿ ಆರಾಧಿಸಿಕೊಂಡು ಬಂದಿರುತ್ತಾರೆ. ಜನರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ, ಸಕಲ ಇಷ್ಠಾರ್ಥ ಸಿದ್ದಿಗಳನ್ನು ಪೂರೈಸಿ ಶ್ರೀ ಭೈರವ ದೇವರನ್ನು ಪ್ರಾರ್ಥಿಸಿದಲ್ಲಿ ಅನುಗ್ರಹಿಸಿರುತ್ತಾರೆ. ಶ್ರೀ ಮಠದಲ್ಲಿ ಪರಿವಾರ ದೇವರಾದ ಶ್ರೀ ಗಣಪತಿ, ಶ್ರೀ ಮರಳು ಧೂಮಾವತಿ, ಶ್ರೀ ಆಚಿಜನೇಯ, ಶ್ರೀ ಜ್ವಾಲಾಮಹಮ್ಮಾಯಿ, ಶ್ರೀ ಪರಶುರಾಮ ಯಜ್ಞಕುಂಡ, ಸೀತಾಬಾವಿ ಪಾಂಡವರ ಗುಹೆ ಮೊದಲ್ಗೊಂಡು ಪವಿತ್ರ ನಾಗ ಸನ್ನಿಧಿ ಮತ್ತು ಪಾತಾಳ ಭೈರವನ ಸಾನಿಧ್ಯವೂ ಈ ಧಾರ್ಮಿಕ ನೆಲೆಗಟ್ಟಿನಲ್ಲಿದೆ. ಈಗಾಗಲೇ ಶ್ರೀ ಕಾಲ ಭೈರವ ದೇವರ ಗರ್ಭಗುಡಿಯನ್ನು ಶಿಲಾಮಯವನ್ನಾಗಿ ಪುನರ್ ನಿರ್ಮಾಣ ಕಾರ್ಯ ಆರಂಭಿಸಲಿದ್ದೇವೆ. ಈ ಪುಣ್ಯ ಕಾರ್ಯಕ್ಕೆ ಪ್ರತಿಯೋರ್ವರು ತನು-ಮನ-ಧನಗಳಿಂದ ಸಹಕರಿಸಬೇಕು ಎಂದು ಹೇಳಿದರು.
ಆನಂತರ ಮಂಗಳೂರು ಪಾಲಿಕೆಯ ಮಾಜಿ ಮೇಯರ್ ಹಾಗೂ ಜೀರ್ಣೋದ್ಧಾರ ಮತ್ತು ಕಾರ್ಯನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹರಿನಾಥ್ ಬೊಂದೇಲ್ ಅವರು ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವಿರುವ ಕದ್ರಿ ಕಾಲಭೈರವ ದೇವರ ದೇವಸ್ಥಾನದ ಜೀರ್ಣೋದ್ಧಾರವನ್ನು ಮಾಡಲು ಮಠಾಧೀಶರು ಹೊರಟಿದ್ದಾರೆ. ಮಚ್ಚೇಂದ್ರನಾಥ ಮತ್ತು ಯೋಗ ಗುರು ಶ್ರೀ ಗೋರಕ್ಷಕನಾಥರು ವಾಸ ಮಾಡುತ್ತಿದ್ದಂತಹ ಈ ಸ್ಥಳಕ್ಕೆ ವಿಶೇಷವಾದ ಮಹತ್ವವಿದೆ. ನಾವೆಲ್ಲಾ ಒಟ್ಟಿಗೆ ಇದ್ದು ಈ ಕ್ಷೇತ್ರವವನ್ನು ಅಭಿವೃದ್ಧಿ ಪಡಿಸಲು ಸಹಕರಿಸುವುದಾಗಿ ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷರಾದ ಕಿರಣ್ ಕುಮಾರ್ ಜೋಗಿ, ದಕ್ಷಿಣ ಕನ್ನಡ ಜಿಲ್ಲಾ ಜೋಗಿ ಸಮಾಜ ಸೇವಕ ಸಂಘದ ಅಧ್ಯಕ್ಷರಾದ ಅಶೋಕ್ ಕೆ., ಎಸ್.ಕೆ. ಪುರುಷೋತ್ತಮ, ಸತೀಶ್, ಉಮೇಶ್, ಮಂಗಳೂರು ಪಾಲಿಕೆಯ ಮಾಜಿ ಕಾರ್ಪೋರೇಟರ್ ರಾಜೇಶ್, ಉಪಸ್ಥಿತರದ್ದರು.