Header Ads
Breaking News

ಉಜಿರೆ ಎಸ್.ಡಿ.ಎಮ್ ಕಾಲೇಜಿನಲ್ಲಿ ಕನ್ನಡ ಸಂಘ ಉದ್ಘಾಟನೆ

ಜೀವನದಲ್ಲಿ ಪರಿಶ್ರಮ ಪಡಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಕನಸು ನನಸಾಗುತ್ತದೆ. ಸೌಕರ್ಯ ಇಲ್ಲವೆಂದು ಕೊರಗುವ ಬದಲು, ಇರುವ ಸೌಕರ್ಯಗಳನ್ನು ಧನಾತ್ಮಕ ಚಿಂತನೆಯಿಂದ ಬಳಸಿದಾಗ ಸಂತೃಪ್ತ ಜೀವನ ಸಾಗಿಸಬಹುದು. ಬಾಲ್ಯದಲ್ಲಿ ನನ್ನ ಮನೆಯಲ್ಲಿ ಕಡುಬಡತನವಿದ್ದರೂ ಯಾರ ಮುಂದೆಯೂ ಕೈಚಾಚಲಿಲ್ಲ. ಸ್ವಾಭಿಮಾನದಿಂದ ಬದುಕನ್ನು ಎದುರಿಸಿದೆ ಈಗಲೂ ಪ್ರಾಮಾಣಿಕವಾಗಿ ವೃತ್ತಿ ನಡೆಸುತ್ತಿದ್ದೇನೆ ಎಂದು ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರೀ ಹೇಳಿದರು.
ಉಜಿರೆ ಎಸ್.ಡಿ.ಎಮ್ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಂಘದ ಪ್ರಸಕ್ತ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವ-ಇಚ್ಛೆಯಿಂದ ಶಿಸ್ತನ್ನು ಕಲಿಯಬೇಕು, ಇನ್ನೊಬ್ಬರ ಒತ್ತಾಯಕ್ಕಾಗಿ ಕಲಿತರೆ ಅದು ಜೀವನ ಪೂರ್ತಿ ಉಳಿಯುವುದಿಲ್ಲ. ಸೋಲು ಬಂದಾಗ ಕಾರಣಗಳನ್ನು ನೀಡಿ ಸಮರ್ಥಿಸಿಕೊಳ್ಳುವ ಬದಲು, ಮರಳಿ ಪ್ರಯತ್ನವನ್ನು ಮಾಡಬೇಕು ಆಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ದೇಶಸೇವೆ ಮಾಡಲು ಹಾಗೂ ತಾನು ವಿದ್ಯಾರ್ಥಿಯಾಗಿದ್ದ ಸೈನ್ಯಕ್ಕೆ ಸೇರಬೇಕೆಂದು ಪ್ರೇರಣೆಗೊಂಡ ಪರಿಣಾಮ ಸೈನ್ಯಕ್ಕೆ ಸೇರಿದೆ. ಈ ವೇಳೆ ಹಲವು ಅಡೆತಡೆಗಳು ಎದುರಾದರೂ ಧೈರ್ಯದಿಂದ ಎದುರಿಸಿದೆ ಎಂದು ತಿಳಿಸಿದರು.
ಎಸ್.ಡಿ.ಎಮ್. ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಸ್. ಸತೀಶ್ಚಂದ್ರ ಮಾತನಾಡಿ, ಕನ್ನಡ ಸಂಘದಿಂದ ಹಿಂದೆಯೂ ಅತ್ಯುತ್ತಮ ಕಾರ್ಯಕ್ರಮಗಳು ನಡೆದಿವೆ, ಮುಂದೆಯೂ ಇಂತಹ ಯಶಸ್ವೀ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕನ್ನಡ ಐಚ್ಛಿಕ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಪ್ರತಿನಿಧಿಗಳಾದ ದಶಮಿ, ಅಭ್ಯುದಯ್, ದ್ವಿತೀಯ ವರ್ಷದ ವರ್ಷಿತಾ, ಆದರ್ಶ್ ಮತ್ತು ತೃತೀಯ ವರ್ಷದ ಮಹೇಶ್ ಹಾಗೂ ಕನ್ನಡ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *