Header Ads
Breaking News

ಉಜಿರೆ ಎಸ್.ಡಿ.ಎಮ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳ ಪ್ರಶಿಕ್ಷಣ ಕಾರ್ಯಗಾರ ನಡೆಯಿತು

ಮೇ.೧೭: ಕಲ್ಲಿಗೆ ಉಳಿಪೆಟ್ಟು ಬಿದ್ದಾಗ ಮಾತ್ರ ಅದು ಸುಂದರ ಮೂರ್ತಿಯಾಗಲು ಸಾಧ್ಯ ಎಂಬಂತೆ ಜೀವನದಲ್ಲಿ ಪರಿಶ್ರಮ ಪಡಬೇಕು, ಆಗ ಮಾತ್ರ ನಿಮ್ಮ ಕನಸು ನನಸಾಗುತ್ತದೆ. ಆದರೆ ಇವೆಲ್ಲದಕ್ಕೂ ಕಾಯುವ ತಾಳ್ಮೆ ವಿದ್ಯಾರ್ಥಿಗಳಲ್ಲಿರಬೇಕು ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರು ಹೇಳಿದರು. 

ಇವರು ಉಜಿರೆ ಎಸ್.ಡಿ.ಎಮ್ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಥಮ ವರ್ಷ ಪದವಿಪೂರ್ವ ವಿದ್ಯಾರ್ಥಿಗಳ ಪ್ರಶಿಕ್ಷಣ ಕಾರ್ಯಗಾರದಲ್ಲಿ ಉದ್ಘಾಟಕರಾಗಿ ಮಾತನಾಡಿದರು.
ಕನಸುಗಳನ್ನು ಕಾಣಬೇಕು ಹಾಗೂ ಆ ಕನಸುಗಳನ್ನು ಸಾಕಾರಗೊಳಿಸಲು ಹೆತ್ತವರ ಹಾಗೂ ಶಿಕ್ಷಕರ ಸಹಕಾರವನ್ನು ಪಡೆಯಿರಿ. ನಿಮ್ಮನ್ನು ನೀವು ಅಧ್ಯಯನ ವಿಚಾರಗಳಿಗೆ ಪರಿವರ್ತಿಸಿಕೊಳ್ಳಿ. ಪಿಯು ಶಿಕ್ಷಣ ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾಗಿದ್ದು ಉತ್ತಮ ಶಿಕ್ಷಣ ಪಡೆದು ಯಶಸ್ಸು ಗಳಿಸುವಂತಾಗಬೇಕು ಎಂದು ಶುಭಹಾರೈಸಿದರು.
ಎಸ್.ಡಿ.ಎಮ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್ ದಿನೇಶ್ ಚೌಟ, ಮಕ್ಕಳು ತರಗತಿಯನ್ನು ಗಮನವಿಟ್ಟು ಕೇಳಬೇಕು. ಆಗ ಆಲಿಸುವ ಕೌಶಲ್ಯ ಹೆಚ್ಚಾಗುತ್ತದೆ. ಪಿಯು ಹಂತದಲ್ಲಿ ಪರಿಶ್ರಮ ವಹಿಸಿ ಏಕಾಗ್ರತೆಯಿಂದ ಕಲಿತರೆ ಮುಂದೆ ಉದ್ಯೋಗಕ್ಕೆ ದಾರಿ ಸುಲಭ ಸಾಧ್ಯವಾಗುತ್ತದೆ ಎಂದರು.
2019ನೇ ಸಾಲಿನ ದ್ವಿತೀಯ ಪಿಯು ವಿಜ್ಞಾನ ವಿಭಾಗಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶಿವಪ್ರಸಾದ್ ಮಾತನಾಡಿ, ಕೇವಲ ಅಂಕಗಳು ಜೀವನವನ್ನು ಅಳೆಯುವಂತಾಗಬಾರದು. ಕಡಿಮೆ ಅಂಕಗಳು ಬಂತೆಂದು ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ, ನಮಗೆ ಇಷ್ಟವಿದ್ದ ಬೇರೆ ಯಾವುದಾದರೂ ರಂಗಗಳಲ್ಲಿ ಸಾಧನೆ ಮಾಡಬಹುದು. ವಿದ್ಯಾರ್ಥಿ ಜೀವನದಲ್ಲಿ ಉಪನ್ಯಾಸಕರು ನೀಡುವ ಕೆಲಸವನ್ನು ಅದೇ ದಿನ ಮಾಡಿ ಮುಗಿಸಬೇಕು, ಇಲ್ಲವಾದಲ್ಲಿ ಹೊರೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದಲ್ಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶಿವಪ್ರಸಾದ್, ವಾಣಿಜ್ಯ ವಿಭಾಗದ ಸರ್ವಮಂಗಳ ಹಾಗೂ ಕಲಾ ವಿಭಾಗದ ಉಲ್ಲಾಸ್ ಅವರನ್ನು ಗೌರವಿಸಲಾಯಿತು.

ಪೋಷಕರು, ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಉಪಪ್ರಾಂಶುಪಾಲ ಪ್ರಮೋದ್ ಕುಮಾರ್ ಸ್ವಾಗತಿಸಿ, ಉಪನ್ಯಾಸಕಿ ದಿವ್ಯ ಕುಮಾರಿ ವಂದಿಸಿದರು. ದೀಕ್ಷಿತ್ ರೈ, ನಿಹಾರಿಕ ಹಾಗೂ ಚೇತನಾ ನಿರೂಪಿಸಿದರು.

ನಿಮಗೋಸ್ಕರ ಬದುಕಿ:
ವಿದ್ಯಾರ್ಥಿಯಾದವನಲ್ಲಿ ಉತ್ತಮ ಜ್ಞಾನ, ಕೌಶಲ್ಯದ ಜೊತೆಗೆ ಒಳ್ಳೆಯ ನಡವಳಿಕೆ ಇರಬೇಕು. ಪ್ರಾಮಾಣಿಕ ಜೀವನದಿಂದ ಯಶಸ್ಸು ಸಾಧ್ಯ. ನಿಮಗೋಸ್ಕರ ನೀವು ಬದುಕಿ, ಬೇರೆಯವರ ಮಾತುಗಳು ನಿಮಗೆ ಸರಿ ಎನಿಸಿದರೆ ಅದನ್ನು ಪಾಲಿಸಿ, ಇಲ್ಲವಾದರೆ ನಿಮ್ಮ ಕೆಲಸವನ್ನು ಯಾವುದೇ ಅಂಜಿಕೆಯಿಲ್ಲದೆ ಮುಂದುವರಿಸಿ ಎಂದು ಯುವರಾಜ್ ಜೈನ್ ಹೇಳಿದರು.

Related posts

Leave a Reply

Your email address will not be published. Required fields are marked *