Header Ads
Breaking News

ಉಡುಪಿಯಲ್ಲಿ ಇನ್ನೂ ಆರಂಭವಾಗದೆ ಸ್ಥಗಿತಗೊಂಡ ಬಸ್ ಸೇವೆ

ಕೋವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಓಡಾಟ ಆರಂಭಿಸಿಲ್ಲ. ನಗರದ ಸಿಟಿ ಮತ್ತು ಸರ್ವಿಸ್ ಬಸ್ ಗಳ ಓಡಾಟವೇನೋ ಭಾಗಶಃ ಪ್ರಾರಂಭಗೊಂಡಿದೆ.ಆದರೆ ಅದು ನಗರವಾಸಿಗಳಿಗೆ ಮಾತ್ರ ಸೀಮಿತವಾಗಿದೆ. ಗ್ರಾಮೀಣ ಭಾಗದ ಜನ ಇನ್ನೂ ತಮ್ಮೂರಿಗೆ ಬಸ್ ಯಾವಾಗ ಬರುತ್ತೆ ಅಂತ ಕಾಯುತ್ತಲೇ ಇದ್ದಾರೆ.

  ನಿಂತಲ್ಲೇ ನಿಂತು ತುಕ್ಕು ಹಿಡಿದ ಬಸ್ಸುಗಳನ್ನೊಮ್ಮೆ ನೋಡಿ.ಬಸ್ಸಿನ ಮೇಲೆ ಹುಲ್ಲು ಬೆಳೆದರೂ ತೆಗೆದಿಲ್ಲ.ಕೊರೋನಾ ಬಂದಾಗಿನಿಂದ ಇದೇ ಪರಿಸ್ಥಿತಿ ಇದೆ. ಈ ಬಸ್ಸುಗಳು ಕೂಡಾ ಜನ ನನ್ನೊಳಗೆ ಯಾವಾಗ ಬರ್ತಾರೋ? ಅಂತ ನಿರೀಕ್ಷೆಯಲ್ಲಿದ್ದಂತೆ ಭಾಸವಾಗುತ್ತೆ. ಲಾಕ್ ಡೌನ್ ಬಹುತೇಕ ಅನ್‌ಲಾಕ್ ಆಗಿದೆ. ಜನಜೀವನ ಕ್ರಮೇಣ ಹಳಿಗೆ ಮರಳುತ್ತಿದೆ. ಉಡುಪಿಯ ಮಟ್ಟಿಗೆ ಹೇಳುವುದಾದರೆ ಇಲ್ಲಿ ಜನಸಂಚಾರದ ಜೀವನಾಡಿ ಖಾಸಗಿ ಬಸ್‌ಗಳು. ಆದರೆ ನಗರ ಪ್ರದೇಶದಲ್ಲಿ ಸಿಟಿ- ಸರ್ವಿಸ್ ಬಸ್‌ಗಳ ಓಡಾಟವೇನೋ ಪ್ರಾರಂಭಗೊಂಡಿದೆ. ಆದರೆ ಗ್ರಾಮೀಣ ಭಾಗದ ಜನರಿಗೆ ಇನ್ನೂ ಬಸ್ ಸೇವೆ ಲಭ್ಯವೇ ಆಗಿಲ್ಲ. ಶೇ.30 ರಿಂದ 40೦ ಬಸ್ಸುಗಳು ಮಾತ್ರ ಸದ್ಯ ಸೇವೆಯಲ್ಲಿವೆ. ಹಳ್ಳಿ ರೂಟ್ ಬಸ್ಸುಗಳು ಡಿಪೋದಲ್ಲೇ ಬಾಕಿಯಾಗಿವೆ. ಮೊದಮೊದಲು ಬಸ್ ಹತ್ತಲು ಜನರು ಹಿಂದೇಟು ಹಾಕಿದ್ರೆ…ಈಗ ಪ್ರಯಾಣಿಕರು ಬರಲು ತಯಾರಿದ್ರೂ ಬಸ್ ಮಾಲಕರು ಸಂಚಾರ ಆರಂಭಿಸುತ್ತ ಇಲ್ಲ.

ಹಾಗೆ ನೋಡಿದರೆ ಖಾಸಗಿ ಬಸ್ ಮೂಲಕರಿಗೂ ಸಾಕಷ್ಟು ಸಮಸ್ಯೆ ಇದೆ. ಮುಖ್ಯವಾಗಿ ಪೂರ್ಣ ಪ್ರಮಾಣದ ಅನ್ ಲಾಕ್ ಆದರೆ ಜನಜೀವನ ಮಾಮೂಲಾಗುತ್ತದೆ.ಆಗ ಬಸ್ ಓಡಿಸಿದರೆ ತಮಗೂ ಒಂದಷ್ಟು ಲಾಭಸಿಗುತ್ತದೆ.ಈಗ ಜನ ಸಂಚಾರ ಕಡಿಮೆ ಇದೆ. ಹೀಗಾಗಿ ಈಗ ಬಸ್ ಓಡಿಸುವುದು ನಷ್ಟ ಎಂಬುದು ಅವರ ವಾದ ಮತ್ತು ಸಮಸ್ಯೆ. ಪ್ರೈಂ ಟೈಂ ಬಿಟ್ರೆ ಉಳಿದ ಹೊತ್ತಲ್ಲಿ ಟಿಕೆಟ್ ಕಲೆಕ್ಷನ್ ಆಗೋದೂ ಇಲ್ಲ. ಈ ಮೊದಲು ಕುಂದಾಪುರ ನಿಲ್ದಾಣದಿಂದ ಗ್ರಾಮಾಂತರ ಭಾಗಗಳಿಗೆ ಸುಮಾರು 200 ಬಸ್‌ಗಳ ಓಡಾಟ ಇರುತ್ತಿತ್ತು, ಆದರೆ ಈಗ 40 ರಷ್ಟುಬಸ್‌ಗಳು ಮಾತ್ರ ಸೇವೆ ನೀಡುತ್ತಿವೆ. ಅದೂ ಹೆಚ್ಚಿನವು ನಷ್ಟದಲ್ಲೇ ಸಂಚರಿಸುತ್ತಿವೆ. ಬನ್ನೂರು, ಹಾಲಾಡಿ ಕೊಕ್ಕರ್ಣೆ, ಸಿದ್ದಾಪುರ, ಶಂಕರನಾರಾಯಣ, ಗೋಳಿಯಂಗಡಿ, ತಲ್ಲೂರು, ಕೊಲ್ಲೂರು. ಹೆಮ್ಮಾಡಿ ಮೂಲಕ ಕೊಲ್ಲೂರು, ನೂಜಾಡಿ, ಅಲೂರು, ಕೆರಾಡಿ, ಹಳ್ಳಿಹೊಳೆ, ಉಪ್ಪಿನಕುದ್ರು, ಯಡಮೊಗೆ ಅಮಾಸೆ ಬೈಲು ಮೊದಲಾದ ಗ್ರಾಮೀಣ ಭಾಗಗಳಿಗೆ ಇನ್ನೂ ಬಸ್ ಸಂಚಾರ ಆರಂಭಗೊಂಡಿಲ್ಲ.

ಸರ್ಕಾರ ಹಾಗೂ ಖಾಸಗಿ ಬಸ್‌ನವರ ಹಗ್ಗಜಗ್ಗಾಟದಿಂದಾಗಿ ಸರಕಾರದ ಬಿಗು ನಿಲುವಿನಿಂದಾಗಿ, ಖಾಸಗಿಯವರ ನಷ್ಟದ ಲೆಕ್ಕ ದಿನದಿಂದ ದಿನಕ್ಕೆ ಏರುತ್ತಿದೆ. ಬಸ್ ಉದ್ಯಮ ಇಂದು ತೀವ್ರ ತೆರನಾದ ಸಂಕಷ್ಟದಲ್ಲಿದೆ. ಇದನ್ನೇ ನಂಬಿದ ದೈನಂದಿನ ಪ್ರಯಾಣಿಕರು ಕೂಡ ಪ್ರತಿದಿನ ತಾಪತ್ರಯ ಅನುಭವಿಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *