Header Ads
Breaking News

ಉಡುಪಿಯಲ್ಲಿ ಕೆರೆ ಸ್ವಚ್ಛಗೊಳಿಸಿ ಅಂತರ್ಜಲ ಅಭಿವೃದ್ದಿ: ಉತ್ಸಾಹಿ ಯುವಕರ ಶ್ಲಾಘನೀಯ ಕಾರ್ಯ

ಉಡುಪಿ ಜಿಲ್ಲೆ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದರೂ, ಅಧಿಕಾರಿಗಳು ಮತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಉತ್ಸಾಹಿ ಯುವಕರ ತಂಡಗಳು ಸರಕಾರ ಮತ್ತು ಜನಪ್ರತಿನಿಧಿಗಳು ಮಾಡಬೇಕಾಗಿರುವ ಕೆಲಸವನ್ನು ಸದ್ದಿಲ್ಲದೆ ಮಾಡುವ ಮೂಲಕ ಅಂತರ್ಜಲ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕೆರೆ ಸ್ವಚ್ಛಗೊಳಿಸಿ ಪ್ರಕೃತಿಯನ್ನು ಸ್ವಚ್ಚಂಧಗೊಳಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಸದ್ಯ ಅಕ್ಷರಶಃ ನೀರಿನ ಬರ ಕಾಡುತ್ತಿದೆ. ಸ್ವಚ್ಛ ಕುಡಿಯುವ ನೀರು ಅಂದ್ರೆ, ಮರುಭೂಮಿಯ ಓಯಸೀಸ್ ನಂತಾಗಿದೆ. ಈ ಹಿನ್ನಲೆಯಲ್ಲಿ ಯುವ ಪಡೆಯೊಂದು ಅಂತರ್ಜಲ ಅಭಿವೃದ್ಧಿಗೆ ಪಣ ತೊಟ್ಟು ಕಾರ್ಯ ಪ್ರವೃತ್ತವಾಗಿದೆ. ಜಿಲ್ಲೆಯಲ್ಲಿರುವ ನೀರಿನ ಸೆಲೆಯ ಮೂಲಗಳಾದ ಪುರಾತನ ಕೆರೆಗಳು ಮತ್ತು ಕಲ್ಯಾಣಿಗಳನ್ನು ಕರಸೇವೆಯ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೈ ಹಾಕಿದೆ. ಪ್ರತಿವಾರ ಒಂದೊಂದು ಕಲ್ಯಾಣಿಯನ್ನು ಗುರುತಿಸಿ ಹೊರಡುವ ಈ ’ಯುವ ಬ್ರಿಗೇಡ್’ ತಂಡ ಕಸ ತೆಗೆದು, ಹೂಳೆತ್ತಿ ನೀರಸೆಲೆಗೆ ಮರುಜನ್ಮ ನೀಡುತ್ತಿದೆ. ಉಡುಪಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಇರುವ ಗುಂಡ್ಮಿಯ ಶ್ರೀ ಮಹಾಗಣಪತಿ ದೇವಸ್ಥಾನದ ಕಲ್ಯಾಣಿಯು ಪರಿಸರದ ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿಯ ವೇಳೆ ಕಲ್ಯಾಣಿ ಮುಚ್ಚಿತು. ಇದರಿಂದ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಿತ್ತು. ಸದ್ಯ ಯುವ ಬ್ರಿಗೇಡ್ ತಂಡ ಕರಸೇವೆಯ ಮೂಲಕ ಕಲ್ಯಾಣಿ ಸ್ವಚ್ಛತೆ ನಡೆಸಿದೆ. ಈ ಜಸೇವೆಗೆ ಸ್ಥಳೀಯರು ಕೂಡ ಕೈ ಜೋಡಿಸಿದ್ದಾರೆ. ಸುಮಾರು ನಲವತ್ತರಿಂದ ಐವತ್ತು ಮಂದಿ ಬ್ರೀಗೆಡ್ ಕಾರ್ಯಕರ್ತರು ಈ ಕರೆಯ ಸ್ವಚ್ಛತೆಯ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಉಡುಪಿ ಜಿಲ್ಲೆಯ ರಸ್ತೆ, ಸೇತುವೆ, ಹೆದ್ದಾರಿ ಉದ್ದಕ್ಕೂ ನಿಮಗೆ ಎಲ್ಲೆಂದರಲ್ಲಿ ಕಸದ ರಾಶಿಗಳೇ ಕಾಣಸಿಗುತ್ತೆ. ಅದರಲ್ಲೂ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಸೀತಾನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಭಾಗಶಃ ವಿದ್ಯಾವಂತರ ಕಸ ಎಸೆಯುವ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಗೊಂಡಿದೆ. ಇದನ್ನು ಅರಿತ ಸ್ಥಳೀಯ ೫ ಯುವ ಸಂಘಟನೆಗಳು ’ಸೀತಾ ನದಿ ಉಳಿಸಿ’ ಅಭಿಯಾನ ಕೈಗೊಂಡಿದೆ. ಮಾಬುಕಳ ಸೇತುವೆಯ ಎಡ ಬಲ ಬದಿಯಲ್ಲಿ ರಾಶಿ ಬಿದ್ದ ಕಸ ಮತ್ತು ತಾಜ್ಯದ ರಾಶಿಯನ್ನು ಶ್ರಮದಾನದ ಮೂಲಕ ತೆರವುಗೊಳಿಸಿದ್ದಾರೆ.ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನದಿ ಇಕ್ಕೆಲಗಳನ್ನು ಸ್ವಚ್ಛಗೊಳಿಸುವುದರ ಮೂಲಕ ಸ್ವಚ್ಛತೆಯ ಅರಿವನ್ನು ಮೂಡಿಸುತ್ತಿದ್ದಾರೆ.

 ಈ ಬಾರಿಯ ಬರದ ಸ್ಥಿತಿ ಕರಾವಳಿಗರಿಗೊಂದು ಪಾಠ.ಯುವಕರು ಜಾಗೃತರಾದ್ರೆ, ಕಲ್ಲು ಗುದ್ದಿ ನೀರು ತೆಗೆಯಬಹುದು ಅನ್ನೋ ಮಾತಿದೆ. ಸಮಸ್ಯೆಗಳ ನಡುವೆಯೂ ಕರಾವಳಿಯಲ್ಲಿ ಜಾಗೃತ ಯುವ ಸಮುದಾಯವೊಂದು ಸಿದ್ದವಾಗುತ್ತಿದೆ ಅನ್ನೋದು ನೆಮ್ಮದಿಯ ವಿಚಾರ.

Related posts

Leave a Reply

Your email address will not be published. Required fields are marked *