Header Ads
Header Ads
Breaking News

ಉಡುಪಿಯಲ್ಲಿ ನಿರ್ಮಾಣವಾಗಿದೆ ಕಾಷ್ಟಶಿಲ್ಪದ ಪ್ರಾರ್ಥನಾ ಮಂದಿರ : ಕಣ್ಣು ಮನಸ್ಸುಗಳಿಗೆ ಏಕಾಗ್ರತೆ ಕಲ್ಪಿಸುವ ಸುಂದರ ಮಂಟಪ

ಈ ಅದ್ಬುತ ದೃಶ್ಯ ನೋಡಿದ ಕೂಡಲೇ ಯಾವುದೋ ಹಿಂದು ದೇವಾಲಯ ಭ್ರಮಿಸಿದ್ರಾ ಖಂಡಿತ ಅಲ್ಲ. ದಾರು ಶಿಲ್ಪದ ಕೆತ್ತನೆಯಿಂದ ಕಂಗೊಳ್ಳಿಸುವ ಇಸ್ಲಾಂ ಧರ್ಮಿಯರ ಸುಂದರ ಪ್ರಾರ್ಥನಾ ಮಂದಿರ. ಒಳ ಪ್ರವೇಶಿಸುತ್ತಿದ್ದಂತೆ ಕಣ್ಣು ಮನಸ್ಸುಗಳಿಗೆ ಏಕಾಗ್ರತೆ ಕಲ್ಪಿಸಿ ಭಗವತ್ ಚಿಂತನೆಗೆ ಧ್ಯಾನ ಭಾವ ನೀಡಬಲ್ಲ ಸುಂದರ ಮಂಟಪ. ಹೌದು ಇಂತಹ ಭವ್ಯವಾದ ದಾರು ಶಿಲ್ಪ ಸೌಂದರ್ಯದ ಮಸೀದಿ ಉಡುಪಿಯಲ್ಲಿದೆ. ಇಸ್ಲಾಂ ಧರ್ಮೀಯರ ಪ್ರಾರ್ಥನಾ ಮಂದಿರಗಳಲ್ಲೇ ಬಲು ಅಪರೂಪದ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಪ್ರಾರ್ಥನಾ ಮಂದಿರಗಳು ಶಾಂತಿ ಸಮಾಧಾನ ನೀಡುವ ತಾಣ. ಅದರ ಒಳಭಾಗದ ವಿನ್ಯಾಸಗಳು ಭಕ್ತಿ ಸ್ಫುರಣೆಯ ಕೇಂದ್ರವಾಗಬೇಕು. ಅಂತಹ ಶಕ್ತಿ ಕಲೆಗಲ್ಲದೆ ಮತ್ಯಾವುದಕ್ಕಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಎಂಬಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿ ಕಾಷ್ಠ ಶಿಲ್ಪದ ವೈಭವದಿಂದ ಕಂಗೊಳಿಸುತ್ತಿದೆ. ಅತೀ ಅಪರೂಪ ಎಂಬಂತೆ ಇಂಡೋ ಅರೆಬಿಕ್ ಶೈಲಿಯನ್ನು ಬಳಸಿ ಆಕರ್ಷಣೀಯವಾಗಿ ವಿನ್ಯಾಸಗೊಳಿಸಲಾಗಿದೆ. ಯುವ ಪ್ರತಿಭಾವಂತ ಶಿಲ್ಪಿ ಹರೀಶ್ ಆಚಾರ್ಯ ತನ್ನ ಹತ್ತು ಜನರ ಬಳಗದೊಂದಿಗೆ ಸುಮಾರು 10 ತಿಂಗಳು ಶ್ರಮ ವಹಿಸಿ ಈ ಸುಂದರ ಪ್ರಾರ್ಥನಾ ಮಂದಿರವನ್ನು ಅಣಿಗೊಳಿಸಿದ್ದಾರೆ.

 

ಇದಕ್ಕಾಗಿ ಊರಿನಲ್ಲೇ ದೊರೆತ ಒಂದು ಸಾವಿರ ಸಿಎಫ್ ಟಿ ಸಾಗುವಾನಿ ಮರಗಳನ್ನೇ ಬಳಸಲಾಗಿದೆ. ಮರಗಳ ಕೆತ್ತನೆಗಳಿಗೆ ಸರಿಹೊಂದುವಂತೆ ದುಬಾಯಿ ಮುಂತಾದೆಡೆಗಳಿಂದ ಆಕರ್ಷಕ ಲೈಟ್ ಗಳನ್ನು ತರಿಸಲಾಗಿದೆ. ಪ್ರಥಮ ಬಾರಿಗೆ ಮಿಂಬರ್ ಮೆಹರಬ್ ಗಳನ್ನು ಮರದಿಂದ ನಿರ್ಮಿಸಲಾಗಿದೆ. ಮೆಹ್ರಬ್ ನ ಒಂದು ಭಾಗದ ಹಿಡಿಯ ಒಳಭಾಗದಲ್ಲಿ ಸೂಕ್ಷ್ಮ ಕೆತ್ತನೆಯ ಮಸೀದಿ ಕೆತ್ತಲಾಗಿದೆ ಸುಂದರ ಕಂಬಗಳು ಅಡ್ಡ ಪಟ್ಟಿಗಳು ಹಳೆಯ ದೇವಾಲಯಗಳ ಶಿಲಾ ಕೆತ್ತನೆಯನ್ನು ನೆನಪಿಸುತ್ತದೆ

ನೂರು ವರ್ಷಕ್ಕಿಂತಲೂ ಅಧಿಕ ಇತಿಹಾಸವಿರುವ ಕಾಪು ಮಜೂರಿನ ಬದ್ರಿಯಾ ಜುಮ್ಮಾ ಮಸೀದಿ ಸದ್ಯ ಆಕರ್ಷಕ ದಾರು ಶಿಲ್ಪದಿಂದ ಪ್ರಸಿದ್ಧಿಯಾಗಿದೆ. ಒಳಾಂಗಣ ಪ್ರವೇಶಿಸುತ್ತಿದ್ದಂತೆ ಸುಂದರ ಗಾಜಿನ ಬಾಗಿಲು ಭವ್ಯ ಕಾಷ್ಠ ಶಿಲ್ಪ ಪ್ರಾಂಗಣವನ್ನು ಅನಾವರಣಗೊಳಿಸುತ್ತದೆ. ಈ ಹಿಂದೆ ಕಾಸರಗೋಡು ಬಾರ್ಕೂರುನಲ್ಲಿ ಈ ರೀತಿಯ ದಾರು ಶಿಲ್ಪದ ಮಸೀದಿಗಳು ಇವೆ. ಆದ್ರೆ ಈ ರೀತಿಯ ಮರದ ಕೆತ್ತನೆಗಳನ್ನು ಬಳಸಿದ ಮೊದಲ ಮಸೀದಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಪ್ರರ್ಥಾನ ಮಂದಿರದ ಕೆತ್ತನೆಯಲ್ಲಿ ಮಸೀದಿ,ಮೀನಾರ್ ಗುಂಬಜ್ ನಕ್ಷತ್ರ ಹೀಗೆ ಹಲವು ಆಕಥರಿಯನ್ನು ಮೂಡಿಸಲಾಗಿದೆ.ಮಸೀದಿಯ ಯುವಕರ ದಫ್ ತಂಡ ರಾಜ್ಯಮಟ್ಟದ ನೂರಾರು ಪ್ರಶಸ್ತಿಗಳನ್ನು ಪಡೆದಿದೆ. ಅಷ್ಟೇ ಅಲ್ಲದೆ ಇಲ್ಲನ ಯುವಕರ ತಂಡ ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿಯೂ ಹೆಸರುವಾಸಿಯಾಗಿದೆ.

ಜಾತಿ ಧರ್ಮ ದೇಶ ಭಾಷೆ ಎಲ್ಲವನ್ನೂ ಮೀರಿದ್ದು ಕಲೆ. ಮನಸಿಗೆ ಸುಖ ಮತ್ತು ಶಾಂತಿಯನ್ನು ಕೊಡುವ ಏಕೈಕ ಸಾಧನ ಕಲೆ. ಇಂತಹ ಕಾಷ್ಠ ಶಿಲ್ಪ ಕಲೆ ಮಸೀದಿಯಲ್ಲಿರಲಿ, ಮಂದಿರದಲ್ಲಿರಲಿ ಪ್ರಾರ್ಥನೆ ಸಲ್ಲಿಸುವವನ ಚಿತ್ತದಲ್ಲಿ ಏಕಾಗ್ರತೆ,ನೆಮ್ಮದಿಯನ್ನು ತುಂಬುತ್ತೆ ಅನ್ನೋದು ಮಾತ್ರ ಸುಳ್ಳಲ್ಲ.

Related posts

Leave a Reply

Your email address will not be published. Required fields are marked *