Header Ads
Header Ads
Breaking News

ಉಡುಪಿಯಲ್ಲಿ ಮಳೆಗೆ ನಡೆದ ವಿಚಿತ್ರ ವಿದ್ಯಾಮಾನ : ಏಕಾಏಕಿ ಕೊಚ್ಚಿ ಹೋದ ರಸ್ತೆ

ಕರಾವಳಿ ಜಿಲ್ಲೆ ಉಡುಪಿಯ ಜನರ ಪಾಲಿಗೆ ಇದೊಂದು ವಿಚಿತ್ರ ವಿದ್ಯಮಾನ. ಕೇವಲ ಒಂದು ಗಂಟೆ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಅನೇಕ ಕಡೆ ಕೃಷಿಭೂಮಿ ಕೊಚ್ಚಿಹೋಗಿದೆ. ರಸ್ತೆ ಸಂಪರ್ಕವೇ ಕಡಿದು ಹೋಗಿದೆ. ಇತ್ತೀಚಿನ ದಶಕಗಳಲ್ಲಿ ಹಿಂದೆಂದೂ ಕಂಡಿರದ ಈ ಜಲಪ್ರಳಯಕ್ಕೆ ಜನರು ಬೆಕ್ಕಸ ಬೆರಗಾಗಿದ್ದಾರೆ.

ನೋಡನೋಡುತ್ತಿದ್ದಂತೆ ಕುಸಿದೇ ಹೋಗುತ್ತಿರುವ ಈ ರಸ್ತೆಯನ್ನೊಮ್ಮೆ ನೋಡಿ. ಹೀಗೊಂದು ದುರ್ಘಟನೆಯಾಗುತ್ತೆ ಅಂತ ಯಾರೂ ಊಹಿಸಲು ಸಾಧ್ಯವಿಲ್ಲ. ಇದೊಂದು ಪ್ರಕೃತಿ ವಿಸ್ಮಯವೇ ಸರಿ! ಉಡುಪಿಯಲ್ಲಿ ರಣ ಬಿಸಿಲಿತ್ತು. ಆದರೆ ಸಂಜೆಯ ವೇಳೆ ಇದ್ದಕ್ಕಿದಂತೆ ಜಿಲ್ಲಾಯಾದ್ಯಂತ ಕತ್ತಲು ಕವಿಯಿತು. ಒಂದು ಗಂಟೆಗಳ ಕಾಲ ಸುರಿದ ಮಳೆಯ ಅಬ್ಬರಕ್ಕೆ ಸುಸ್ಥಿತಿಯಲ್ಲಿದ್ದ ಈ ರಸ್ತೆ ಕೊಚ್ಚಿ ಹೋಗಿದೆ ಅಂದ್ರೆ ಮಳೆಯ ತೀವ್ರತೆ ಎಷ್ಟಿರಬೇಕು? ನೀವೇ ಊಹಿಸಿ. ಕಳೆದ ವರ್ಷವಷ್ಟೇ ನಿರ್ಮಾಣಗೊಂಡ ರಸ್ತೆಯ ಸ್ಥಿತಿ ಹೇಗಾಗಿದೆ ನೋಡಿ. ಈ ಬಾರಿ ಉಡುಪಿಯಲ್ಲಿ ರಾಜ್ಯದಲ್ಲೇ ಅತೀಹೆಚ್ಚು ಅಂದ್ರೆ ೪೩೦೦ ಮಿಮೀ ಗೂ ಅಧಿಕ ಮುಂಗಾರು ಮಳೆಯಾಗಿತ್ತು. ಅಷ್ಟಾದರೂ ಗಂಭೀರ ಹಾನಿ ಸಂಭವಿಸಿರಲಿಲ್ಲ. ಆದರೆ ಒಂದೇ ಗಂಟೆ ಸುರಿದ ಮಳೆಗೆ ಪೆರ್ಡೂರನ್ನು ಹರಿಕಂಡಿಕೆ ಗ್ರಾಮದೊಂದಿಗೆ ಸಂಪರ್ಕಿಸುವ ರಸ್ತೆಯೇ ಕಣ್ಮರೆಯಾಗಿದೆ. ಹಾಗಾದ್ರೆ ಅದೆಂಥಾ ಜಲಸ್ಪೋಟ ಆಗಿರಬೇಕು ಊಹಿಸಿ.

 ಪೆರ್ಡೂರು, ಹಿರಿಯಡ್ಕ, ವಾರಂಬಳ್ಳಿ, ಕೊಕ್ಕರ್ಣೆ, ಬ್ರಹ್ಮಾವರ ಭಾಗದಲ್ಲಿ ಮಳೆಯ ತೀವ್ರತೆಗೆ ಹೆಕ್ಟೇರುಗಟ್ಟಲೆ ಭತ್ತದ ಗದ್ದೆಗಳು ಮುಳುಗಡೆಯಾಗಿದೆ. ಎಲ್ಲಿಂದಲೋ ಹರಿದು ಬಂದ ಮಳೆ ಕಟಾವಿಗೆ ಸಿದ್ದವಿದ್ದ ಭತ್ತದ ಪೈರನ್ನು ಕೊಚ್ಚಿ ಹೊತ್ತೊಯ್ದಿದೆ. ಗ್ರಾಮದ ತೊರೆಗಳಲ್ಲಿ ಏಕಾಏಕಿ ಹತ್ತರಿಂದ ಹದಿನೈದು ಅಡಿ ನೀರಿನ ಮಟ್ಟ ಮೇಲಕ್ಕೇರಿದ್ದನ್ನು ಕಂಡ ರೈತರು ಆತಂಕಗೊಂಡಿದ್ದಾರೆ. ಒಂದು ಗಂಟೆಯಷ್ಟೇ ಸುರಿದ ಮಳೆ ಇಷ್ಟೆಲ್ಲಾ ರಾದ್ದಾಂತ ಸೃಷ್ಟಿಸಿದ್ದು ಅಚ್ಚರಿಯನ್ನೂ ಮೂಡಿಸಿದೆ. ಪೈರು ಕಟಾವಿಗೆ ಸಿದ್ದವಾದ ಕಾಲದಲ್ಲೇ ಈ ವಿಕೋಪ ಉಂಟಾಗಿರುವುದು ರೈತರು ತಲೆಮೇಲೆ ಕೈ ಹೊತ್ತು ಕೂರುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಗಳಲ್ಲೂ ನೆರೆ ಬಂದು ಬ್ರಹ್ಮಾವರ ಪರಿಸರದಲ್ಲಿ ಅಪಾರ ಹಾನಿಯಾಗಿದೆ. ಹಾನಿಯಾದ ಸ್ಥಳಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿದ್ದು ಸೂಕ್ತ ಪರಿಹಾರದ ಭರವಸೆಯನ್ನೂ ನೀಡಿದ್ದಾರೆ. ಸಂಪರ್ಕ ಕಡಿತಗೊಂಡ ರಸ್ತೆಗಳನ್ನು ತಾತ್ಕಾಲಿಕ ದುರಸ್ಥಿ ಮಾಡಲು ಲೋಕೋಪಯೋಗಿ ಇಲಾಖೆಗೆ ಸ್ಥಳದಲ್ಲೇ ಆದೇಶ ಮಾಡಿದ್ದಾರೆ.
ಕರಾವಳಿಯಲ್ಲಿ ಅನಿರೀಕ್ಷಿತ ಪ್ರಕೃತಿ ವಿಕೋಪಗಳು ಪದೇ ಪದೇ ಸಂಭವಿಸುತ್ತಿದೆ. ಇದಕ್ಕೆ ವೈಜ್ಞಾನಿಕ ಕಾರಣವನ್ನು ಕಂಡು ಹುಡುಕದೇ ಹೋದರೆ ಅಪಾಯ ಕಟ್ಟಿಟ್ಟಬುತ್ತಿ, ಮುಂಗಾರು ಮಳೆಯಲ್ಲೂ ಉಂಟಾಗದ ಹಾನಿ ಕೇವಲ ಒಂದೇ ಗಂಟೆಯ ಮಳೆಯಲ್ಲಿ ಆಗಿದ್ದನ್ನು ಕಂಡು ಕರಾವಳಿಗರನ್ನು ಚಿಂತೆಗೀಡುಮಾಡಿದೆ.

Related posts

Leave a Reply

Your email address will not be published. Required fields are marked *