Header Ads
Breaking News

ಉಡುಪಿಯಲ್ಲಿ ರೂಪುಗೊಂಡಿದೆ ಇಂಟರ್ನೆಟ್ ಅಗತ್ಯವಿಲ್ಲದ ಆಪ್

ಇದೊಂದು ಹೊಸ ಆವಿಷ್ಕಾರ; ಉಡುಪಿಯ ಯುವಕ ಇದರ ಹಿಂದಿನ ರೂವಾರಿ. ಎಂಬಿಎ ಮಾಡಿ ಹತ್ತು ವರ್ಷ ಬೇರೆ ಬೇರೆ ಸಂಸ್ಥಗಳಲ್ಲಿ ದುಡಿದ ಯುವಕನ ಸ್ವಂತ ಯೋಚನೆ ಮೂಲಕ ಮೂಡಿ ಬಂದ ತಂತ್ರಾಂಶ ಇದು.ಮುಂದಿನ ದಿನಗಳಲ್ಲಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಮನೆಮಾತಾಗಲಿರುವ ಈ ತಂತ್ರಾಂಶ ಯಾವುದು? ಏನಿದರ ವಿಶೇಷತೆ? ಈ ಸ್ಟೋರಿ ನೋಡಿ..

ಡಿಜಿಟಲ್, ಕ್ಯಾಶ್ ಲೆಸ್ ಯುಗದಲ್ಲಿ ದಿನಕ್ಕೊಂದು ಆಪ್‌ಗಳು ಮೊಬೈಲ್‌ನೊಳಗೆ ಸೇರಿಕೊಳ್ಳುತ್ತಿವೆ; ಡೌನ್ ಲೋಡ್ ಮಾಡೀ ಮಾಡೀ ಮೊಬೈಲೇ ಹ್ಯಾಂಗ್ ಆಗಿ ಬಿಡುತ್ತವೆ; ಅಷ್ಟೊಂದು ಆಪ್‌ಗಳು ಈಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಉಡುಪಿಯ ಯುವಕನೋರ್ವ ಇಂತಹದ್ದೇ ಒಂದು ಆಪ್‌ನ್ನು ಅಭಿವೃದ್ಧಿಪಡಿಸಿ ಸುದ್ದಿ ಮಾಡಿದ್ದಾರೆ. ಆದರೆ ಈ ಮೊಬೈಲ್ ಆಪ್ ಸರಿಯಾದ ರೀತಿಯಲ್ಲಿ ಜನರನ್ನು ತಲುಪಿದ್ರೆ, ಭಾರತ ಮಾತ್ರವಲ್ಲ ,ಇಡೀ ವಿಶ್ವವೇ ಈ ಯುವಕನ ಆವಿಷ್ಕಾರಕ್ಕೆ ತಲೆದೂಗಲಿದೆ ಏಕೆಂದರೆ ಯುವ ಪೇ ಎಂಬ ಈ ಮೊಬೈಲ್ ಆಪ್‌ಗೆ ಇಂಟರ್ನೆಟ್‌ನ ಅಗತ್ಯವೇ ಇಲ್ಲ ಹೌದು. ನಾವು ಸದ್ಯ ಬಳಸ್ತಾ ಇರೋ ಬಹುತೇಕ ಆಪ್ ಗಳಿಗೂ ಅಂತರ್ಜಾಲ ವ್ಯವಸ್ಥೆ ಬೇಕೇ ಬೇಕು.ಆದರೆ ಉಡುಪಿಯ ಬ್ರಹ್ಮಾವರದ ಉದ್ಮಾ ಟೆಕ್ನಾಲಜೀಸ್‌ನ ಪ್ರಶಾಂತ್ ಬ್ರಹ್ಮಾವರ ಆವಿಷ್ಕರಿಸಿರುವ ಯುವ ಪೇ, ಇಂಟರ್ನೆಟ್ ಇಲ್ಲದೆಯೇ ಕೆಲಸ ಮಾಡುತ್ತದೆ.ಮಾತ್ರವಲ್ಲ, ದೇಶದಲ್ಲೇ ಈ ತರಹದ ಪಾವತಿ ಮಾಡುವ ಮೊಬೈಲ್ ಆಪ್ ಈ ತನಕ ಬಂದಿಲ್ಲ.

ನಿಮಗೂ ಗೊತ್ತಿರಬಹುದು ;ಪೇಟಿಎಂ ,ಭಾರತ್ ಪೇ ತರಹದ ಆಪ್ ಗಳು ಬಹಳ ಪ್ರಸಿದ್ಧಿ ಪಡೆದಿವೆ. ಆದರೆ ಗ್ರಾಮೀಣ ಪ್ರದೇಶಗಳ್ಲಿ ಈ ಆಪ್ ಗೆ ನೆಟ್ ವರ್ಕ್ನದ್ದೇ ಸಮಸ್ಯೆ.ಹೀಗಾಗಿ ಈ ಸಮಸ್ಯೆಗೆ ಪರಿಹಾರ ಏನು ಎಂದು ಯೋಚಿಸಿದಾಗ ಪ್ರಶಾಂತ್ ರಿಗೆ ಹೊಳೆದದ್ದೇ ಈ ತಂತ್ರಾಂಶ. ಯುವ ಪೇ ತಂತ್ರಾಂಶದಲ್ಲಿ ಡಿಜಿಟಲ್ ಹಣದ ವ್ಯವಹಾರಗಳಿಗೆ ಅಂತರ್ಜಾಲದ ಅವಶ್ಯಕತೆ ಇರುವುದಿಲ್ಲ.ಅತ್ಯಂತ ಸರಳವಾಗಿ ಈ ಆಪ್ ಮೂಲಕ ವ್ಯವಹಾರ ಮಾಡಬಹುದು.ಈ ತರಹದ ತಂತ್ರಾಂಶ ಇದೇ ಮೊದಲು ಆಗಿರುವುದರಿಂದ ಯುವ ಪೇ ಮೊಬೈಲ್ ಆಪ್ ಪೇಟೆಂಟ್ ಗಾಗಿಯೂ ಅರ್ಜಿ ಸಲ್ಲಿಸಲಾಗಿದೆ.ಮುಖ್ಯವಾಗಿ ವಾಣಿಜ್ಯ ಬ್ಯಾಂಕ್ ಗಳಿಲ್ಲದ ಸಣ್ಣ ಪಟ್ಟಣಗಳು ,ಹಳ್ಳಿಗಳು ಮತ್ತು ಅಂತರ್ಜಾಲ ಸಂಪರ್ಕಗಳಿಲ್ಲದ ಗ್ರಾಮೀಣ ಪ್ರದೇಶಗಳ ಜನರಿಗಾಗಿಯೇ ಈ ಮೊಬೈಲ್ ಆಪ್ ನ್ನು ಅಭಿವೃದ್ಧಿಪಡಿಸಲಾಗಿದೆ.ಪೈಲಟ್ ಪ್ರಾಜೆಕ್ಟ್ ಆಗಿ ಈಗಾಗಲೇ ಕೆಲ ಗ್ರಾಮಗಳಲ್ಲಿ ಈ ಆಪ್ ಸಕ್ಸಸ್ ಆಗಿದೆ.

ಮೊದಲ ಹಂತದಲ್ಲಿ ಉಡುಪಿ ಜಿಲ್ಲೆಯ ಅಷ್ಟೂ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಈ ತಂತ್ರಾಂಶದ ಪ್ರಯೋಜನವನ್ನು ಜನರಿಗೆ ನೀಡುವುದು ಪ್ರಶಾಂತ್ ಅವರ ಗುರಿ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ವಿಸ್ತರಿಸುವ ಯೋಚನೆ ಇವರದ್ದು. ಒಟ್ಟಿನಲ್ಲಿ ಉಡುಪಿಯ ಉದ್ಮಾ ಟೆಕ್ನಾಲಜೀಸ್ ಆವಿಷ್ಕರಿಸಿರುವ ನಗದು ರಹಿತ ಪಾವತಿ ಯೋಜನೆಯ ತಂತ್ರಾಂಶ, ಮುಂದಿನ ದಿನಗಳಲ್ಲಿ ಭಾರೀ ಕ್ರಾಂತಿ ಮಾಡುವ ಭರವಸೆಯನ್ನು ಮೂಡಿಸಿದೆ.

Related posts

Leave a Reply

Your email address will not be published. Required fields are marked *