Header Ads
Header Ads
Breaking News

ಉಡುಪಿಯಾದ್ಯಂತ ಭಾರೀ ಗಾಳಿ ಮಳೆ

ಕರಾವಳಿಯಲ್ಲಿ ಗಾಳಿ, ಮಳೆಯ ಅಬ್ಬರ, ಹಲವೆಡೆ ಧರೆಗೆ ಉರುಳಿದ ಮರ.. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..ಕಡಲಬ್ಬರದಿಂದ ಕಡಲ ನಿವಾಸಿಗಳಲ್ಲಿ ಮನೆ ಮಾಡಿದ ಆತಂಕ.. ಕರಾವಳಿಗೆ ಮುಂಗಾರು ನಿನ್ನೆಯಷ್ಟೇ ಆಗಮನವಾಗಿದೆ. ಮುಂಗಾರು ಆಗಮನದ ನಂತರ ತನ್ನ ಅಬ್ಬರವನ್ನು ಹೆಚ್ಚಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ ೧೧ರತನಕವೂ ಭಾರೀ ಮಳೆಯ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿತ್ತು. ಇಂದು ಬೆಳಗ್ಗೆ ಭಾರೀ ಬಿರುಗಾಳಿ ಸಹಿತ ಮಳೆ ಉಡುಪಿಯಾದ್ಯಂತ ಸುರಿದಿದೆ. ಆದ್ರೆ ಬೆಳಗ್ಗೆ ಮಳೆ ಮಾಯವಾಗಿದ್ದರೂ ಗಾಳಿಯ ರಭಸ ಮಾತ್ರ ಎಲ್ಲರ ಆತಂಕಕ್ಕೆ ಎಡೆ ಮಾಡಿದ್ದಂತೂ ಸತ್ಯ. ಬೆಳಗ್ಗೆ ರೆಸ್ಟ್ ಪಡೆದಿದ್ದ ಮಳೆ ಮದ್ಯಾಹ್ನದ ಬಳಿಕ ಬಿರುಸುಗೊಂಡಿತು. ಉಡುಪಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿದೆ. ಅದರಲ್ಲೂ ಗಾಳಿ ಮಳೆಯಿಂದ ಕಡಲ ನಿವಾಸಿಗಳ ಆತಂಕ ಹೆಚ್ಚಿಸಿದೆ. ಉಡುಪಿ ಪ್ರವಾಸಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ. ಕಡಲ ತೀರಕ್ಕೆ ಪ್ರವಾಸಿಗರು ಮೋಜು ಮಸ್ತಿಗೆ ಬರುತ್ತಾರೆ.ಆದ್ರೆ ಇದಕ್ಕೆಲ್ಲ ಲೈಫ್ ಗಾರ್ಡ್ ನವರು ಬ್ರೇಕ್ ಹಾಕಿದ್ದಾರೆ.

 ಎಲ್ಲೆಡೆ ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡುತ್ತಿದ್ದಾರೆ.ಪ್ರವಾಸಿಗರೂ ಕಡಲ ಸೌಂದರ್ಯ ವೀಕ್ಷಿಸಿ ವಾಪಾಸಾಗುತ್ತಿದ್ದಾರೆ.ಭಾರೀ ಮಳೆಯ ಕಾರಣ ಜಿಲ್ಲಾಡಳಿತ ಮುನ್ನೆಚ್ಚರಿಕೆಯ ಕ್ರಮವಾಗಿ ಮುಂಚೆಯೇ ಶಾಲಾ , ಕಾಲೇಜುಗಳಿಗೆ ರಜೆ ಘೋಷಿಸಿತ್ತು. ನಿನ್ನೆ ತಡರಾತ್ರಿ ಹಾಗೂ ಬೆಳಗ್ಗೆ ಬೀಸಿದ ಗಾಳಿ ಮಳೆಗೆ ಹಲವೆಡೆ ಮರಗಳು ಬಿದ್ದು ಹಾನಿಯಾದ ಬಗ್ಗೆ ವರದಿಯಾಗಿದೆ. ಅದರಲ್ಲೂ ದೊಡ್ಡ ಪ್ರಮಾಣದಲ್ಲಿ ತೆಂಗಿನ ಮರಗಳು ಧಾರಾಶಾಯಿಯಾಗಿದೆ. ರಸ್ತೆಗೆ ಬಿದ್ದ ಮರಗಳನ್ನು ಸ್ಥಳೀಯರು, ಇಲಾಖೆಯ ನೇತೃತ್ವದಲ್ಲಿ ಸ್ಥಳಾಂತರಿಸುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.ತಗ್ಗು ಪ್ರದೇಶದಗಳಲ್ಲಿ ನೀರಿನ ಮಟ್ಟ ಏರುತ್ತಿದ್ದು ಅಂತಹ ಪ್ರದೇಶಗಳ ಬಗ್ಗೆ ನಿಗಾ ವಹಿಸಲಾಗಿದೆ. ನಿರಂತರ ಮಳೆ ಸುರಿದರೆ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಕಡಲ ಅಬ್ಬರಿಸುತ್ತಿದ್ದು ರಸ್ತೆ ದಾಟಿ ನೀರು ಬರುತ್ತಿದೆ. ಇದು ಕಡಲ ನಿವಾಸಿಗಳ ಆತಂಕಕ್ಕೂ ಕಾರಣವಾಗಿದೆ. ಈಗಾಗಲೇ ಪ್ರವಾಸಿಗರ, ಕಡಲ ನಿವಾಸಿಗಳ ರಕ್ಷಣೆಗೆ ಕಾರಾವಳಿ ಕಾವಲು ಪಡೆ, ಲೈಪ್ ಗಾರ್ಡ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ. ಒಟ್ಟಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಕುಂದಾಪುರ, ಕಾರ್ಕಳದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಪ್ರವಾಹದ ಭೀತಿ ಇದೆ. ಮಳೆಯ ಅಬ್ಬರ ಇನ್ನೂ ಒಂದೆರಡು ದಿನ ಇರಲಿದೆ ಎಂಬ ಸೂಚನೆ ಹವಾಮಾನ ಇಲಾಖೆ ನೀಡಿದ್ದು ಯಾವೆಲ್ಲಾ ಅವಾಂತರ ಸೃಷ್ಟಿ ಆಗುತ್ತೋ ಕಾದು ನೋಡಬೇಕು..

Related posts

Leave a Reply