Header Ads
Header Ads
Breaking News

ಉಡುಪಿಯ ಕೃಷ್ಣನಿಗೆ ಚಿನ್ನದ ಗೋಪುರ : 40 ಕೋಟಿ ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿ

ಲೋಕಪ್ರಸಿದ್ದ ಉಡುಪಿಯ ಕೃಷ್ಣದೇವರು ಇನ್ನು ಚಿನ್ನದ ಮನೆಯಲ್ಲಿ ಕಂಗೊಳಿಸಲಿದ್ದಾರೆ. ಹೌದು, ಎಂಟು ಶತಮಾನದ ಇತಿಹಾಸ ಇರುವ ಕೃಷ್ಣ ದೇವರ ಗರ್ಭಗುಡಿಗೆ ಚಿನ್ನದ ಮೇಲ್ಛಾವಣೆ ಹೊದಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ವಿವಿಧ ಹೋಮ ಹವನಗಳ ಮೂಲಕ ಪೂಜಿಸಿ, ದೇವರ ಅನುಮತಿ ಪಡೆಯುವ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮ ಕೃಷ್ಣಮಠದಲ್ಲಿ ನಡೆಯಿತು. ಮುಷ್ಟಿಕಾಣಿಕೆಯನ್ನು ಅರ್ಪಿಸುವ ಮೂಲಕ ಈ ದೇವಕಾರ್ಯದಲ್ಲಿ ಸಾರ್ವಜನಿಕರು ಭಾಗಿಯಾದ್ರು.ಕನಕದಾಸರಿಗೆ ಒಲಿದ ಗೋವಿಂದ ದೇವರು ಇನ್ನು ಮುಂದೆ ಕನಕಾಂಬರದ ಕೆಳಗೆ ಪೂಜಿತನಾಗಲಿದ್ದಾರೆ. ದೇಶದ ಪ್ರಸಿದ್ದ ಧಾರ್ಮಿಕ ಕೇಂದ್ರವಾದ ಉಡುಪಿಯ ಕೃಷ್ಣಮಠದಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಪರ್ಯಾಯ ಪಲಿಮಾರು ಮಠಾಧೀಶರ ಸಂಕಲ್ಪದಂತೆ, ಕೃಷ್ಣ ದೇವರ ಗರ್ಭಗುಡಿಗೆ ನೂರು ಕೆಜಿ ತೂಕದ ಚಿನ್ನದ ಮೇಲ್ಛಾವಣಿ ಹೊದಿಸಲಾಗುತ್ತಿದೆ. ಎಂಟ್ನೂರು ವರ್ಷಗಳ ಇತಿಹಾಸ ಇರುವ ಗರ್ಭಗುಡಿಯ ಹಳೇಯ ಮೇಲ್ಛಾವಣಿಯನ್ನು ಇಂದು ಕೆಳಗಿಳಿಸಲಾಯ್ತು. ಸಂಪ್ರದಾಯದಂತೆ ಹೋರಿಯ ಮೂಲಕ ಚಿನ್ನದ ಕಳಶಗಳನ್ನು ಕೀಳಲಾಯ್ತು. ಊರಿನ ದೇವಸ್ಥಾನದ ಗರ್ಭಗುಡಿಯನ್ನು ಕಿತ್ತಾಗ, ಊರಿಗೆ ಸಂಕಟವಾಗಬಾರದು ಅನ್ನೋ ಕಾರಣಕ್ಕೆ ವಿವಿಧ ಪ್ರಯಶ್ಚಿತ್ತ ಹೋಮಗಳನ್ನು ನಡೆಸಲಾಯ್ತು. ಕೃಷ್ಣಮಂತ್ರ, ವಿಷ್ಣುಗಾಯತ್ರಿ ಮಂತ್ರ ಪಠಿಸಲಾಯ್ತು. ವಾಸ್ತುಪೂಜೆ, ಗಣಪತಿ ಹೋಮ, ಚಂಡಿಕಾಹೋಮ ಹಾಗೂ ದೇವರ ಗರ್ಭಗುಡಿ ಕಿತ್ತ ಕಾಲದಲ್ಲಿ ಊರಿನಲ್ಲಿ ಯಾವುದೇ ಸಾವು ನೋವು ಸಂಭವಿಸಬಾರದು ಅನ್ನೋ ಕಾರಣಕ್ಕೆ ಮೃತ್ಯಂಜಯ ಹೋಮವನ್ನೂ ನಡೆಸಲಾಯ್ತು.

ಇದೊಂದು ಅಪರೂಪದ ಧಾರ್ಮಿಕ ಪ್ರಕ್ರಿಯೆ, ಇತರ ದೇವಸ್ಥಾನಗಳಲ್ಲಿ ಈ ಸಂಕೋಚ ಕಾರ್ಯ ನಡೆಯುವಾಗ ದೇವರಮೂರ್ತಿಯನ್ನು ಪ್ರತ್ಯೇಕವಾಗಿ ಇರಿಸಲಾಗುತ್ತೆ. ಆದರೆ ಉಡುಪಿಯ ಕೃಷ್ಣದೇವರು ಆಚಾರ್ಯ ಮಧ್ವರಿಂದ ಪ್ರತಿಷ್ಟಾಪಿತ ಬಿಂಬವಾದ ನಿತ್ಯಪೂಜೆ ನಡೆಯಲೇಬೇಕು. ಹಾಗಾಗಿ ದೇವರ ಮೂರ್ತಿಯನ್ನು ಸ್ಥಳದಲ್ಲೇ ಉಳಿಸಿಕೊಳ್ಳಲಾಗಿದೆ. ಪ್ರತಿದಿನ ನಡೆಯುವ ೧೪ ಬಗೆಯ ಪೂಜೆಗೆ ಯಾವುದೇ ಸಮಸ್ಯೆ ಇಲ್ಲ. ಭಕ್ತರು ಕನಕನ ಕಿಂಡಿಯ ಮೂಲಕ ದೇವರ ದರ್ಶನ ಕೈಗೊಳ್ಳಲು ಯಾವುದೇ ಅಡ್ಡಿ ಆತಂಕಗಳಿರುವುದಿಲ್ಲ. ಇನ್ನು ದೇವಸ್ಥಾನದ ಗರ್ಭಗುಡಿಯ ಮೇಲ್ಛಾವಣಿ ಕಿತ್ತಾಗ ಊರ ಜನರಿಗೆ ಸಂಕಷ್ಟವಾಗಬಾರದು ಎಂಬ ಕಾರಣಕ್ಕೆ ಪೂಜೆ, ಧ್ಯಾನದಲ್ಲಿ ತೊಡಗುವಂತೆ ಸೂಚಿಸಲಾಗುತ್ತೆ. ಆದ್ರೆ ಬದಲಾದ ಕಾಲಘಟ್ಟದಲ್ಲಿ ನಿರಂತರ ಧಾರ್ಮಿಕ ಕಾರ್ಯ ನಡೆಸೋದು ಕಷ್ಟವಾದ ಕಾರಣ, ದೋಷ ಪರಿಹಾರಾರ್ಥ ಮುಷ್ಟಿ ಕಾಣಿಕೆಯನ್ನು ಅರ್ಪಿಸಲು ಅನುಕೂಲ ಕಲ್ಪಿಸಲಾಗಿದೆ. ಬ್ರಹ್ಮ ಕಲಶೋತ್ಸವದವರೆಗೂ ಇಲ್ಲಿ ಕಾಣಿಕೆ ಅರ್ಪಿಸಿ, ಈ ಮಹತ್ಕಾರ್ಯದಲ್ಲಿ ಕೈ ಜೋಡಿಸಲು ಅವಕಾಶವಿದೆ.

ಇದು40 ಕೋಟಿ ವೆಚ್ಚದ ಕಾಮಗಾರಿ. ದೇಶದ ಪ್ರಸಿದ್ದ ಕ್ಷೇತ್ರದಲ್ಲಿ ಕೈಗೊಂಡ ಈ ಮಹತ್ಕಾರ್ಯಕ್ಕೆ ಈಗಾಗಲೇ ಶೇ.70 ರಷ್ಟು ಧನಸಂಗ್ರಹವಾಗಿದೆ. ಮುಂದಿನ ಎರಡುವರೆ ತಿಂಗಳಲ್ಲಿ ನೂರು ಕೆಜಿ ಚಿನ್ನದ ಮಾಡು ಕೃಷ್ಣ ದೇವರ ಎರಡಂತಸ್ತಿನ ಮೇಲ್ಚಾವಣಿಯನ್ನು ಅಲಂಕರಿಸಲಿದೆ. ಈ ಮೂಲಕ ಕೃಷ್ಣಮಠ ಮತ್ತಷ್ಟು ಜನಾಕರ್ಷಣೆಗೆ ಪಾತ್ರವಾಗಲಿದೆ.

 

Related posts

Leave a Reply

Your email address will not be published. Required fields are marked *