Header Ads
Header Ads
Breaking News

ಉಡುಪಿಯ ಗಂಗೆಯನ್ನು ಹುಡುಕಿಕೊಡಿ….ಸಾಮಾಜಿಕ ಜಾತಾಣಗಳಲ್ಲಿ ದಂಗೆ ಎದ್ದ ತರುಣರು!

ಪ್ರತಿ ನದಿಯಲ್ಲೂ ಗಂಗೆ ಇರ್ತಾಳಂತೆ! ಕೇವಲ ಗಂಗಾನದಿ ಶುದ್ಧವಾದರೆ ಸಾಕೇ? ಸಾಲಲ್ಲ ಅಂತಾರೆ ಉಡುಪಿಯ ತರುಣರು. ಒಂದು ಕಾಲದಲ್ಲಿ ಮೈದುಂಬಿ ಹರಿಯುತ್ತಿದ್ದ ಉಡುಪಿಯ ಇಂದ್ರಾಣಿ ನದಿ ಈಗ ಕಾಣೆಯಾಗಿದೆ. ಅಲ್ಲಲ್ಲಿ ಈ ನದಿಯ ಅವಶೇಷಗಳಿದ್ದು, ಅಲ್ಲೂ ಕೊಳಕು ನೀರೇ ತುಂಬಿಕೊಂಡಿದೆ. ಉಡುಪಿಯ ಗಂಗೆಯನ್ನು ಹುಡುಕಿಕೊಡಿ ಎಂದು ಸಾಮಾಜಿಕ ಜಾತಾಣಗಳಲ್ಲಿ ದಂಗೆ ಎದ್ದ ತರುಣರು, ಇದೀಗ ಸಾಮಾಜಿಕ ಚಳುವಳಿಯ ಮೂಲಕ ಇಂದ್ರಾಣಿ ನದಿ ಉಳಿಸುವ ಪಣ ತೊಟ್ಟಿದ್ದಾರೆ.

ವ್ಯಕ್ತಿಗಳು ಕಾಣೆಯಾಗೋದನ್ನು ಕೇಳಿದ್ದೀರಿ, ಪ್ರಾಣಿಗಳು ಕಾಣೆಯಾದಾಗ ಜಾಹೀರಾತು ಪ್ರಕಟಗೊಳ್ಳೋದುಂಟು. ಆದರೆ ನದಿಯೇ ಕಾಣೆಯಾದರೆ ಏನು ಮಾಡೋದು?ಬೈಕ್ ಏರಿ.. ಕೈಯ್ಯಲ್ಲಿ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಹೋಗುವ ಯುವಕರ ಸಾಲನ್ನೊಮ್ಮೆ ನೋಡಿ. ಇವರೆಲ್ಲಾ ಉಡುಪಿಯ ಜೀವನದಿಯಾಗಿದ್ದ ಇಂದ್ರಾಣಿಯನ್ನು ಉಳಿಸಲು ಪಣತೊಟ್ಟವರು. ಅವರ ಈ ಹೋರಾಟಕ್ಕೆ ಕಾರಣವೂ ಇದೆ. ಉಡುಪಿಯ ಇಂದ್ರಾಣಿ ದೇಗುಲ ಹನ್ನೊಂದನೇ ಶತಮಾನ ಕಾಲದಿಂದ ಪ್ರಸಿದ್ದಿಯಲ್ಲಿದೆ. ಇಲ್ಲಿನ ಆಂಜನೇಯ ಸನ್ನಿಧಿಯಲ್ಲಿ ಹುಟ್ಟುವ ಪುರಾಣ ಪ್ರಸಿದ್ದ ನದಿಯೇ ಇಂದ್ರಾಣಿ, ಕಾಲ ಕಳೆದಂತೆ ಉಡುಪಿ ನಗರವಾಗಿ ಬೆಳೆದಂತೆ ಈ ನದಿ ಸಾಕಷ್ಟು ಪ್ರಮಾಣದಲ್ಲಿ ಒತ್ತುವರಿಯಾಗಿದೆ. ಸದ್ಯ ನದಿಯ ಸ್ವರೂಪ ಕಳೆದು ಹೋಗಿದ್ದು, ಕೇವಲ ಕಾಲುವೆಯಾಗಿ ಇಂದ್ರಾಣಿ ಹರಿಯುತ್ತಿದ್ದಾಳೆ. ಆದರೆ ಈ ಕಾಲುವೆಯ ನೀರಿಗೂ ನಗರದ ಕೊಳಚೆ ಹರಿಸಿ ಇಂದ್ರಾಣಿ ನದಿಯ ಮೇಲೆ ನಿರಂತರ ಅತ್ಯಾಚಾರ ಮಾಡುತ್ತಿದ್ದಾರೆ.

ಇಂದ್ರಾಣಿ ನದಿಯ ಸದ್ಯದ ಸ್ಥಿತಿ ನೋಡಿದ್ರೆ ಯಾರಿಗಾದರೂ ಬೇಸರವಾಗುತ್ತೆ. ಇಂದ್ರಾಣಿ ದೇವಸ್ಥಾನ, ಉಡುಪಿಯ ಕೃಷ್ಣಮಠ, ಕೊಡವೂರು ಶಂಕರನಾರಾಯಣ ಮುಂತಾದ ಪುರಾಣ ಪ್ರಸಿದ್ದ ಕ್ಷೇತ್ರಗಳ ಪಕ್ಕದಲ್ಲೇ ಹರಿದು ಹೋಗುವ ಈ ನದಿಗೆ ಮನೆಗಳ ತ್ಯಾಜ್ಯ, ಮಠದ ಪರಿಸರದಲ್ಲಿ ಲಾಡ್ಜ್ ಗಳು ಹೊರ ಚೆಲ್ಲುವ ಕೊಳಕು ನೇರವಾಗಿ ಸೇರುತ್ತಿದೆ. ಅಷ್ಟು ಮಾತ್ರವಲ್ಲ ಸ್ವಚ್ಛತೆಯಲ್ಲಿ ನಂ.೧ ಎಂದು ಕರೆಸಿಕೊಳ್ಳುವ ಉಡುಪಿ ನಗರಸಭೆಯ ನಿರ್ಲಕ್ಷ್ಯವೂ ನದಿ ಹಾಳಾಗಲು ಕಾರಣವಾಗಿದೆ. ನಿಟ್ಟೂರಿನಲ್ಲಿ ನಗರಸಭೆಯ ಕೊಳಚೆ ನೀರಿನ ಸ್ವಚ್ಛತಾ ಘಟಕವಿದ್ದು, ಅಲ್ಲಿ ಯಾವುದೇ ವೈಜ್ಞಾನಿಕ ಪ್ರಕ್ರಿಯೆ ನಡೆಸದೆ ನೇರವಾಗಿ ಕೊಳಕು ನೀರನ್ನು ನದಿಗೆ ಹಾಯಿಸಲಾಗುತ್ತಿದೆ. ಪರಿಣಾಮ ಉಡುಪಿ ಪರಿಸರದ ಸಾವಿರಾರು ಮನೆ ಬಾವಿಯ ನೀರು ಕುಡಿಯುವ ಯೋಗ್ಯತೆಯನ್ನೇ ಕಳೆದುಕೊಂಡಿದೆ. ಇವನ್ನೆಲ್ಲಾ ಕಂಡು ರೋಸಿ ಹೋದ ಯುವಕರ ತಂಡ, ಸಾಮಾಜಿಕ ಜಾಲ ತಾಣಗಳ ಮೂಲಕ ಅಭಿಯಾನ ಆರಂಭಿಸಿತು. ಇದೀಗ ನದಿ ಉಳಿಸಲು ಚಿಂತಕರ ಚಾವಡಿ ಸಿದ್ದಪಡಿಸಿ ಹೋರಾಟಕ್ಕ ಮುಂದಾಗಿದೆ. ನಗರದಲ್ಲೇ ಹುಟ್ಟಿ ೧೩ ಕಿಮೀ ಹರಿದು ಸಮುದ್ರ ಸೇರುವ ಈ ಪುಟ್ಟನದಿಯನ್ನು ಉಳಿಸೋದು ನಗರವಾಸಿಗಳ ಜವಾಬ್ದಾರಿಯಾಗಿದೆ. ಇಂದ್ರಾಣಿಯ ಸೊಬಗನ್ನು ಮರು ಸ್ಥಾಪಿಸಲು ಯುವಕರ ತಂಡ ಪಣತೊಟ್ಟಿದೆ.

ಪ್ರತಿಯೊಂದು ನದಿಗೂ ಪೌರಾಣಿಕ ಹಿನ್ನೆಲೆ ಇರುತ್ತೆ. ಆದರೆ ಪುರಾಣಗಳನ್ನು ಪೂಜೆ-ಪುನಸ್ಕಾರಗಳಿಗೆ ಸೀಮಿತಗೊಳಿಸಿ ಪೂರ್ವಿಕರು ಕೊಟ್ಟ ನದಿಮೂಲಗಳನ್ನು ಹಾಳು ಮಾಡೋದು ನಮಗೆ ರೂಢಿಯಾಗಿದೆ. ಮಹಾಗಂಗೆಯ ಜೊತೆಗೆ ನಮ್ಮೂರಿನ ಗಂಗಾಮೂಲಗಳನ್ನೂ ಶುದ್ಧ ಮಾಡೋದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

 

Related posts

Leave a Reply

Your email address will not be published. Required fields are marked *