Header Ads
Header Ads
Breaking News

ಉಡುಪಿ:ಹಳೆ ಬಟ್ಟೆಗಳಿಗೆ ಮರು ಜೀವ

ಹಲವು ಮಾನವೀಯ ಕಾರ್ಯ ಮೂಲಕ ಉಡುಪಿಯಲ್ಲಿ ಗಮನಸೆಳೆದಿರುವ ನಾಗರೀಕ ಸಮಿತಿ ಇದೀಗ ಮತ್ತೊಂದು ಮಾನವೀಯ ಕಾರ್ಯಕ್ಕೆ ಮುಂದಾಗಿದ್ದು ಬಟ್ಟೆ ಇಲ್ಲದ ಬಡವರಿಗೆ ಬಟ್ಟೆ ನೀಡಿವ ಯೋಜನೆ ಆರಂಭಿಸಿದೆ.

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ (ರಿ) ಉಡುಪಿ ಕಳೆದ 20 ವರ್ಷಗಳಿಂದ, ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತ ಬಂದಿದೆ. ಬಹು ಮುಖ್ಯವಾಗಿ ಬಸ್ಸು ತಂಗುದಾಣ, ರೈಲು ನಿಲ್ದಾಣ, ಪಾದಚಾರಿ ರಸ್ತೆ, ಉಡುಪಿ ನಗರದ ಸುತ್ತಮುತ್ತದ ಸ್ಥಳಗಳಲ್ಲಿ ಕಂಡು ಬರುವ ವೃದ್ದರು, ಮಹಿಳೆಯರು, ಅಸಹಾಯಕ ರೋಗಿಗಳು, ಅನಾಥರನ್ನು, ಹಾಗೂ ಅಪಘಾತ ಸಂದರ್ಭದ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸುತ್ತ ಸಮಿತಿಯ ಸದಸ್ಯರು ಜೀವರಕ್ಷರಾಗಿ ಸೇವಾ ನಿರತರಾಗಿದ್ದಾರೆ. ಇದುವರೆಗೆ ಹೀಗೆ ಸಮಿತಿಯಿಂದ ಆಸ್ಪತ್ರೆಗೆ ದಾಖಲಿಸಲ್ಪಟ್ಟ ರೋಗಿಗಳ ಸಂಖ್ಯೆ ೫ ಸಾವಿರಕ್ಕೂ ಅಧಿಕ ಆಗಿರಬಹುದು.

ಸಮಿತಿಯಿಂದ ತುರ್ತು ಸೇವೆಗಾಗಿ ಎರಡು ಅಂಬುಲೇನ್ಸ್ ಗಳು 247ಉಚಿತ ಸೇವೆಯನ್ನು ಒದಗಿಸುತ್ತಿವೆ. ಇವರ ಸೇವಾ ಚಟುವಟಿಕೆಗಳಿಗೆ ಸಹೃದಯಿ ದಾನಿಗಳು ಬೆನ್ನೆಲುಬಾಗಿ ನಿಂತಿದ್ದಾರೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬಳಸಿದ ಹಳೆ ಬಟ್ಟೆಗಳು ದಾಸ್ತನಿರುತ್ತವೆ. ಕೆಲವರು ಗಂಟುಕಟ್ಟಿ ಅಟ್ಟದ ಮೇಲೆ ಎಸೆದಿಡುತ್ತಾರೆ. ಅವುಗಳಲ್ಲಿ ಮರು ಬಳಕೆಗೆ ಬರುವಂತಹ ಉತ್ತಮ ಗುಣಮಟ್ಟದ ಶುಭ್ರಬಟ್ಟೆಗಳನ್ನು ನಮ್ಮ ಜನಸೇವೆಯ ಕಾರ್ಯಕ್ಕೆ ಒದಗಿಸಿದರೆ, ನಾವು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತೆವೆ ಎಂದು ಸಮಿತಿಯವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದರು. ಇವರ ಪ್ರಕಟಣೆಯು ಉತ್ತಮ ಸ್ಪಂದನೆ ಪಡೆಯಿತು. ಪ್ರಕಟಣೆ ನೋಡಿದ ಸ್ಥಿತಿವಂತರು ಕೆಲವರು ಹೊಸ ಬಟ್ಟೆ ತಂದು ಸಮಿತಿಯ ಕಛೇರಿಗೆ ಒಪ್ಪಿಸಿದರು. ಕೆಲವರು ಉತ್ತಮ ಸ್ಥಿತಿಯಲ್ಲಿ ಇರುವ ಬಟ್ಟೆಗಳ ತಂದು ಒಪ್ಪಿಸಿದರೆ, ಕೆಲವು ಬಟ್ಟೆ ಅಂಗಡಿಯವರು ಹಳೆ ದಾಸ್ತಾನುಗಳನ್ನು ನೀಡಿ ಸಹಕರಿಸಿದರು.

ಕೆಲವರು ಹಳೆ ಬಟ್ಟೆಗಳನ್ನು ಒಟ್ಟುಗೂಡಿಸಿ ಸುಟ್ಟು ನಾಶಗೊಳಿಸುವ ಕಾರಣದಿಂದ ಪರಿಸರದಲ್ಲಿ ರಾಸಾಯನಿಕ ಧೂಮ ಎಬ್ಬಿಸಿ ವಾಯು ಮಾಲಿನ್ಯಗೊಳಿಸುತ್ತಿರುವ, ಗೊಣಿಚೀಲದಲ್ಲಿ ತುಂಬಿ ನದಿ ಸಮುದ್ರ, ಮುಂತಾದ ಜೀವಜಲ ತಾಣಗಳಲ್ಲಿ ಎಸೆದು ಜಲ ಮಾಲಿನ್ಯಗೊಳಿಸುತ್ತಿರುವ, ರಾಷ್ಟ್ರಿಯ ಹೆದ್ದಾರಿ, ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವ ಪ್ರಕ್ರಿಯೆಗಳು ನಡೆಯುತ್ತಲೆ ಇರುತ್ತವೆ, ಇವೆಲ್ಲವು ಪರಿಸರಕ್ಕೆ ಮಾರಕವಾದ ಪ್ರಕ್ರಿಯೆಗಳಾಗುತ್ತವೆ. ಪ್ರಕೃತಿ ಶೋಭೆಗೂ ಕಂಟಕವಾಗಿದೆ. ಇವೆಲ್ಲವನ್ನು ತಪ್ಪಿಸುವ ಸಣ್ಣ ಪ್ರಯತ್ನ ನಮ್ಮದಾಗಿದೆ. ಹಾಗಾಗಿ ಹಳೆ ಬಟ್ಟೆ ಸಂಗ್ರಹಿಸಿ ಅವುಗಳಿಗೆ ಮರುಜೀವ ನೀಡುವ ಪ್ರಯತ್ನ ನಮ್ಮದಾಗಿದೆ. ಎಂದು ಸಮಿತಿಯ ಪದಾಧಿಕಾರಿಗಳಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಹೀಗೆ ಸಂಗ್ರಹಗೊಂಡ ಬಟ್ಟೆಗಳನ್ನು ಸಮಿತಿಯವರು ಜಿಲ್ಲಾಸ್ಪತ್ರೆಗೆ, ಕಡು ಬಡವರನ್ನು ಗುರುತಿಸಿ ವಿತರಿಸಿದ್ದಾರೆ. ಗುರುವಾರದ ದಿನ ಮಣಿಪಾಲದ ಮಂಚಿಯಲ್ಲಿ ಇರುವ ಜನ ವಸತಿ ಕಾಲೋನಿಗೆ ಭೇಟಿ ನೀಡಿದ ಸಮಿತಿಯ ಪದಾಧಿಕಾರಿಗಳಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಸಾಸ್ತಾನ ಅವರು ಸಂಗ್ರಹದಲ್ಲಿದ್ದ ಮಕ್ಕಳ ಬಟ್ಟೆ, ಪುರುಷರ, ಮಹಿಳೆಯರ ಉಡುಪುಗಳನ್ನು ವಿತರಿಸಿದ್ದಾರೆ. ಅಲ್ಲದೆ ವಲಸೆ ಕಾರ್ಮಿಕರಿಗೂ ಕೆಲಸ ಸಂದರ್ಭ ಧರಿಸಲು ಬಟ್ಟೆಗಳನ್ನು ವಿತರಿಸಿದ್ದಾರೆ. ಸಮಿತಿಯ ಈ ಪರಿಸರ ಸ್ನೇಹಿ ಪರಿಕಲ್ಪನೆಯು ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿದೆ.

Related posts

Leave a Reply