Header Ads
Breaking News

ಶೋಭಾ ವಿರುದ್ಧ ತೀರದ ಆಕ್ರೋಶ: ಶುರುವಾಗಿದೆ ನೋಟಾ ಅಭಿಯಾನ!!

ಬಿಜೆಪಿಗೆ ಕಗ್ಗಂಟಾಗಿ ಉಳಿದಿದ್ದ ಹಾಗೂ ರಾಜ್ಯದಲ್ಲೇ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಇದೀಗ ಹಾಲಿ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಮತ್ತೊಮ್ಮೆ ಸ್ಪರ್ಧಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಕಾರ್ಯಕರ್ತರ ಆಯ್ಕೆ ಕಡೆಗಣನೆಗೆ ಬಿಜೆಪಿ ವರಿಷ್ಠರ ವಿರುದ್ದ ಇದೀಗ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಜೆಪಿ ಹೆಗ್ಡೆಗೆ ಟಿಕೆಟ್ ಕೊಡದ ಕಾರಣ ಬಿಜೆಪಿ ಕಾರ್ಯಕರ್ತರು ಸೋಶಿಯಲ್ ಮೀಡಿಯಾಗಳಲ್ಲಿ ನೋಟಾ-ಚಳವಳಿ ಆರಂಭಿಸಿದ್ದಾರೆ.

ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದ ವಿಚಾರ ಮುಂದಿಟ್ಟುಕೊಂಡು ಜಿಲ್ಲೆಯ ಉಡುಪಿ, ಕಾರ್ಕಳ, ಕುಂದಾಪುರದಲ್ಲಿ ಕಾರ್ಯಕರ್ತರು ಶೋಭಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ವಿರುದ್ದ ಆಕ್ರೋಶದ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ನಮ್ಮದು ಕಾರ್ಯಕರ್ತರ ಪಕ್ಷ ಎಂದು ತಿಳಿದಿದ್ದೇವೆ. ಕೇವಲ ಕಾರ್ಯಕರ್ತರ ಸಭೆಗಳಲ್ಲಿ ಮಾತ್ರ ನಮ್ಮದು ಕಾರ್ಯಕರ್ತರ ಪಕ್ಷ. ನಾಯಕರ ಸಭೆಗಳಲ್ಲಿ ಹಠವಾದಿ ಪಕ್ಷ ಎಂದು ಇಂದು ತಿಳಿಯಿತು. ಹೆಸರಿಗೆ ಮಾತ್ರ ಕಾರ್ಯಕರ್ತರ ಪಕ್ಷ, ಆದರಿಲ್ಲಿ ಕಾರ್ಯಕರ್ತರ ಮಾತಿಗೆ ಕಿಂಚಿತ್ತೂ ಬೆಲೆ ಇಲ್ಲ. ಗೆಲುವಿನ ಮದ ಏರಿಸಿಕೊಂಡ ನಾಯಕರಿಗೂ ಕಾರ್ಯಕರ್ತನ ಮನದಾಳ ತಿಳಿಯದು ಎಂಬಿತ್ಯಾದಿ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮೋದಿಯವರಿಂದ ಅಭ್ಯರ್ಥಿಗಳ ಘೋಷಣೆಯಾದರೆ ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡುತ್ತಾರೆ ಎನ್ನುವುದು ರಾಜ್ಯ ನಾಯಕರಿಗೆ ತಿಳಿದಿತ್ತು. ಆದರೆ ಬುದ್ದಿವಂತ ಜಿಲ್ಲೆಯ ಮತದಾರರಾದ ನಾವೆಲ್ಲರೂ ಆಲೋಚನೆ ಮಾಡಬೇಕು. ಮೋದಿಯವರು ಈ ಬಾರಿ ಮುನ್ನೂರಕ್ಕಿಂತ ಹೆಚ್ಚಿನ ಸೀಟು ಪಡೆದು ಪ್ರಧಾನಿಯಾಗುತ್ತಾರೆ. ನಮ್ಮ ಜಿಲ್ಲೆಯ ಒಂದು ಸೀಟು ಅವರಿಗೆ ಲೆಕ್ಕವಲ್ಲ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ನಮ್ಮೊಳಗೆ ವಿರೋಧವಿದ್ದು, ನಾವು ಅದನ್ನು ಪ್ರದರ್ಶನ ಮಾಡಲೇಬೇಕು. ಅಲ್ಲಿ ಮೋದಿ, ಇಲ್ಲಿ ನನ್ನ ವಿರೋಧ ಈ ಬರಹ ವಾಟ್ಸಾಪ್ ಹಾಗೂ ಪೇಸ್‌ಬುಕ್‌ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಒಟ್ಟಿನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಜೆಪಿ ಹೆಗ್ಡೆಯವರ ಅವಿರತ ಶ್ರಮದಿಂದಾಗಿ ಬಿಜೆಪಿ ಅಭ್ಯರ್ಥಿಗಳು ಕೆಲವೆಡೆ ಗೆಲುವು ಸಾಧಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಸಹಜವೆಂಬಂತೆ ಜೆಪಿ ಹೆಗ್ಡೆ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇದೀಗ ಜೆಪಿ ಹೆಗ್ಡೆಯವರಿಗೆ ಟಿಕೆಟ್ ನಿರಾಕರಣೆಯಾಗಿರುವ ವಿಷಯ ಹೊರ ಬೀಳುತ್ತಿದ್ದಂತೆ ಜೆಪಿ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಸಮರ ಸಾರಿದ್ದರಿದ ಬಳಿಕ ತುಮಕೂರು ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆಯವರನ್ನು ಕಣಕ್ಕಿಳಿಸಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಪಿ ಹೆಗ್ಡೆಯವರಿಗೆ ಬಿಟ್ಟು ಕೊಡುವ ಬಗ್ಗೆ ರಾಜ್ಯ ನಾಯಕರು ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾಹಿತಿಗಳು ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

Related posts

Leave a Reply

Your email address will not be published. Required fields are marked *