Breaking News

ಉಡುಪಿ ತಾಲೂಕು ಬೇಳೂರು ಗ್ರಾಮದಲ್ಲಿ ದುರ್ಘಟನೆ, ಕೆರೆಯಲ್ಲಿ ಮುಳುಗಿ ಮೂವರು ಮೃತ್ಯು


ಕೆರೆಯಲ್ಲಿ ಜಾರಿ ಬಿದ್ದ ಮಗಳನ್ನು ರಕ್ಷಿಸಲು ಹೋದ ತಾಯಿ ಮತ್ತು ಇನ್ನೋರ್ವ ಮಗಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಡುಪಿ ತಾಲೂಕಿನ ಸಮೀಪದ ಬೇಳೂರು ಗ್ರಾಮದ ದೇಲಟ್ಟು ದೇವಸ್ಥಾನದ ಬಳಿ ಮಂಗಳವಾರ ನಡೆದಿದೆ.
ಉಮೇಶ್ ಎನ್ನುವವರ ಪತ್ನಿ ೪೨ರ ಭಾರತಿ ಅವರ ಇಬ್ಬರು ಮಕ್ಕಳಾದ ೨೧ರ ಪ್ರಥ್ವಿ ಮತ್ತು ೧೭ರ ಪ್ರಜ್ಞಾ ಮೃತ ದುದೈರ್ವಿಗಳಾಗಿದ್ದಾರೆ. ಮಳೆಗಾಲ ಆರಂಭಗೊಂಡ ಹಿನ್ನೆಲೆ ಎಲ್ಲೆಡೆ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ನರಸಿಂಹ ಶೆಟ್ಟಿ ಕೂಡ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದರು, ಎರಡು ದಿನಗಳ ಹಿಂದೆ ಮನೆಯ ತೋಟದಲ್ಲಿರುವ ಕೆರೆಯಲ್ಲಿ ಮೊಳಕೆ ಬರಲೆಂದು ಸುಮಾರು ಎಳು ಚೀಲಗಳಷ್ಟು ಬಿತ್ತನೆ ಬೀಜವನ್ನು ನೆನೆಯಲು ಹಾಕಲಾಗಿತ್ತು. ಅದನ್ನು ತೆಗೆಯುವ ಉದ್ದೇಶದಿಂದ ತಾಯಿ ಮತ್ತು ಮಕ್ಕಳು ತೆರಳಿದ್ದು, ಎರಡು ಚೀಲಗಳನ್ನು ಮೇಲೆ ತೆಗೆದುಕೊಂಡು ಬಂದಿದ್ದರು ಎನ್ನಲಾಗಿದೆ. ಆದರೆ ಮೂರನೇ ಚೀಲವನ್ನ ಮೇಲೆ ತರಲು ಪ್ರಥ್ವಿ ಕೆಳಗಿಳಿದಾಗ ಕಾಲು ಜಾರಿದ್ದು, ಕೆರೆಯಲ್ಲಿ ಕಾಲು ಸಿಲುಕಿ ಮುಳುಗಲಾರಂಬಿಸಿದ್ದಾಳೆ. ಈ ಸಂದರ್ಭ ಮಗಳ ರಕ್ಷಣೆಗೆ ತಾಯಿ ಭಾರತಿ ಕೂಡ ಕೆರೆಗೆ ಹಾರಿದ್ದು, ಭಾರತಿ ಕೂಡ ಮುಳುಗಲಾರಂಭಿಸಿದ್ದು, ಇವರಿಬ್ಬರೂ ಮುಳುಗುವುದನ್ನು ಕಂಡು ಎರಡನೇ ಮಗಳು ಪ್ರಜ್ಞಾ ಕೂಡ ಇವರ ರಕ್ಷಣೆಗೆ ಕೆರೆಗಿಳಿದ್ದಿದ್ದು, ಮೂವರೂ ಮೇಲೆ ಬರಲಾಗದೇ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತ ಭಾರತಿಯವರ ತಂದೆ ನರಸಿಂಹ ಶೆಟ್ಟಿಯವರಿಗೆ ಇದು ಕರಾಳ ಮಳೆಗಾಲವಾಗಿ ಪರಿಣಮಿಸಿದೆ. ಮೇ. ೧೮ರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಇವರ ಮನೆಯ ಕೊಟ್ಟಿಗೆ ಮೇಲೆ ತೆಂಗಿನ ಮರ ಬಿದ್ದು ಅಪಾರ ಹಾನಿ ಸಂಭವಿಸಿತ್ತು. ಈ ಘಟನೆ ನಡೆದ ಎರಡು ವಾರದೊಳಗೆ ನಡೆದ ಮತ್ತೊಂದು ದುರ್ಘಟನೆಯಲ್ಲಿ ತನ್ನ ಮಗಳು ಮತ್ತು ಮೊಮ್ಮಕ್ಕಳನ್ನು ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಿಂದ ಇಡೀ ಕುಟುಂಬವೇ ಆಘಾತಕ್ಕೊಳಗಾಗಿದ್ದು, ಕುಟುಂಬವನ್ನು ದುಃಖದ ಮಡುವಿಗೆ ತಳ್ಳಿದೆ.
ಮೃತ ಪ್ರಥ್ವಿ ಮತ್ತು ಪ್ರಜ್ಞಾ ಪ್ರತಿಭಾವಂತ ವಿದ್ಯಾರ್ಥಿಗಳಾಗಿದ್ದು, ಪ್ರಥ್ವಿ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಪ್ರಜ್ಞಾ ಈ ಬಾರಿ ಪಿಯುಸಿ ಶಿಕ್ಷಣ ಮುಗಿಸಿ ಕುಂದಾಪುರದ ಭಂಡಾರ್‍ಸ್‌ಕಾರ್ಸ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಶಿಕ್ಷಣಕ್ಕೆ ಸೇರಿದ್ದಳು. ಇಬ್ಬರು ಕೃಷಿ ಕಾರ್ಯದಲ್ಲಿ ಆಸಕ್ತರಾಗಿದ್ದು, ಟಿಲ್ಲರ್ ಮೂಲಕ ಗದ್ದೆಯಲ್ಲಿ ಉಳುಮೆಯನ್ನೂ ಮಾಡುತ್ತಿದ್ದರು. ಇವರ ಈ ಸಾಧನೆಯನ್ನು ಕೆಲ ಮಾಧ್ಯಮಗಳು ಗುರುತಿಸಿ ವರದಿಯನ್ನು ಪ್ರಕಟಿಸಿತ್ತು. ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಸ್ಥಳ ಪರಿಶೀಲನೆ ನಡೆಸಿದ್ದು, ಕೋಟ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

Related posts

Leave a Reply