Header Ads
Header Ads
Breaking News

ಉಡುಪಿ ಮಠದ ಇಫ್ತಾರ್ ಕೂಟ ಯಾರ ಲಾಭಕ್ಕೆ? ಹಿಂದೂ ಸಂಘಟನೆಗಳಿಗೆ ಕಾಂಗ್ರೆಸ್‌ನ ಶಿವನಾಥ ರೈ ಪ್ರಶ್ನೆ

ಈ ಹಿಂದೆ ಕಾಂಗ್ರೆಸ್‌ನವರಾದ ನಾವು ಸರ್ವೆ ದೇವಾಲಯಲ್ಲಿ ಇಫ್ತಾರ್ ಕೂಟ ನಡೆಸಿದ್ದ ಸಂದರ್ಭದಲ್ಲಿ ಅದನ್ನು ಖಂಡಿಸಿ ದೊಡ್ಡ ಮಟ್ಟದ ಗೊಂದಲ ಎಬ್ಬಿಸಿದ್ದ ಹಿಂದೂ ಜಾಗರಣಾ ವೇದಿಕೆ ಮತ್ತು ಬಜರಂಗ ದಳದವರು ಉಡುಪಿ ಮಠದಲ್ಲಿ ನಡೆಸಿರುವ ಇಫ್ತಾರ್ ಕೂಟವನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಇಫ್ತಾರ್ ಕೂಟ ನಡೆಸಿದ್ದ ವೇಳೆ ಆಕ್ಷೇಪವೆತ್ತಿದ್ದ ಈ ಸಂಘಟನೆಯ ನಾಯಕರು ಉಡುಪಿ ಮಠದಲ್ಲಿ ಯಾರ ಒಳಿತಿಗೆ ಇಫ್ತಾರ್‌ಕೂಟ ಮಾಡಲಾಗಿದೆ ಎಂಬ ನಮ್ಮ ಪ್ರಶ್ನೆಗೆ ಉತ್ತರಿಸಬೇಕು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಮಾಜಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಅವರು ಆಗ್ರಹಿಸಿದರು.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸಿಗರಾದ ನಾವು ಸರ್ವೆ ದೇವಾಲಯದಲ್ಲಿ ಇಫ್ತಾರ್ ಕೂಟ ನಡೆಸಿದಾಗ ಹಿಂದೂ ಜಾಗರಣಾ ವೇದಿಕೆಯವರು ಬಹಳಷ್ಟು ರದ್ಧಾಂತ ಮಾಡಿದ್ದರು. ದೇವಾಲಯದಲ್ಲಿ ಇಫ್ತಾರ್ ಕೂಟ ನಡೆಸಿ ಮಾಂಸವನ್ನು ಕೊಡುತ್ತಾರೆ ಎಂದು ಅಪಪ್ರಚಾರ ಮಾಡಿದ್ದರು. ಪುತ್ತೂರಿನಲ್ಲಿ ಹಲವು ಹಿಂದೂ ಸಂಘಟನೆಗಳಿದ್ದರೂ ಪೇಜಾವರ ಶ್ರೀಗಳ ಇಫ್ತಾರ್ ಕೂಟದ ವಿಚಾರದಲ್ಲಿ ಯಾಕೆ ಮೌನ. ಕಾಂಗ್ರೆಸ್‌ನವರು ಇಫ್ತಾರ್ ಕೂಟ ನಡೆಸಿದರೆ ಸೌಹಾರ್ದತೆ ಅಲ್ಲ, ಬಿಜೆಪಿಯವರು ಮಾಡಿದರೆ ಮಾತ್ರ ಸೌರ್ಹಾದತೆಯೇ ಎಂದು ಪ್ರಶ್ನಿಸಿದರು. ಪೇಜಾವರ ಶ್ರೀಗಳು ಸೌಹಾರ್ದತೆಯ ದೃಷ್ಠಿಯಿಂದ ಮಾಡಿರುವ ಇಫ್ತಾರ್ ಕೂಟ ಕಾರ್ಯಕ್ರಮವನ್ನು ನಾವು ಬೆಂಬಲಿಸುತ್ತೇವೆ. ಕೆಲ ಸಂಘಟನೆಗಳು ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದು, ಇದರಿಂದಾಗಿ ಸೌಹಾರ್ದತೆಯ ವಾತಾವರಣ ಹದಗೆಟ್ಟಿದೆ.
ಹಿಂದೂ ಮತ್ತು ಮುಸ್ಲಿಂ ನಡುವೆ ಗಲಭೆ ಸಂಭವಿಸಿದರೆ ಯಾವ ಕಡೆಯ ನಾಯಕರಿಗೂ ತೊಂದರೆಯಾಗುವುದಿಲ್ಲ. ಎರಡೂ ಕಡೆಯ ಅಮಾಯಕರು ಮಾತ್ರ ಬಲಿಯಾಗುತ್ತಿದ್ದಾರೆ ಎಂದ ಅವರು ಹಿಂದುತ್ವದ ಹೆಸರಿನಲ್ಲಿ ಬಡ ಹಿಂದೂಗಳ ಜೀವ ಯಾಕೆ ತೆಗೆಯುತ್ತಿದ್ದೀರಿ, ಯಾವೊಬ್ಬ ನೈಜ ಹಿಂದೂವಿಗಾದರೂ ಸಂಘಟನೆಗಳ ರಕ್ಷಣೆ ಬೇಕೇ, ಪ್ರಾಮಾಣಿಕ ಮತ್ತು ಸ್ವಾಭಿಮಾನಿಗಳಾಗಿರುವ ಹಿಂದೂ ಮತ್ತು ಮುಸ್ಲಿಮರಿಗೆ ಸಂಘಟನೆಗಳ ಅಗತ್ಯ ಉಂಟೇ, ಜಿಲ್ಲೆಯಲ್ಲಿರುವುದು ತಾಲಿಬಾನ್ ಸಂಸ್ಕೃತಿಯೇ ಅಥವಾ ಹಿಂದೂ ಸಂಸ್ಕೃತಿಯೇ ಎಂದು ಪ್ರಶ್ನಿಸಿದರು. ಕಾನೂನು ಬಾಹಿರ ಮತ್ತು ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ ಮಾತ್ರ ಸಂಘಟನೆಗಳ ರಕ್ಷಣೆ ಬೇಕಾದುದು. ನೈಜ ಹಿಂದೂಗಳಿಗೆ ಬೇಕಾಗಿಲ್ಲ ಎಂದರು. ಸಂಘಟನೆಗಳು ದ್ವಂದ್ವ ನೀತಿಗಳನ್ನು ಬಿಟ್ಟು ಅಭಿವೃದ್ಧಿಯತ್ತ ಮನಮಾಡಬೇಕೆಂದು ಅವರು ಆಗ್ರಹಿಸಿದರು.
ಬಿಜೆಪಿಯ ಹಲವು ಸಂಸದರು ಕಸಾಯಿಖಾನೆ ನಡೆಸುತ್ತಿದ್ದಾರೆ. ಗುಜರಾತಿನ ಸಂಸದರೊಬ್ಬರು ಗೋಮಾಂಸ ರಫ್ತ್‌ನಲ್ಲಿ ನಂಬರ್ ಒನ್ ಆಗಿದ್ದಾರೆ. ವಿದೇಶಕ್ಕೆ ಗೋಮಾಂಸ ರಫ್ತು ಮಾಡಲಾಗುತ್ತಿದ್ದು, ಇದು ಗೋಹತ್ಯೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು ಯಾವುದೇ ಗೋವುಗಳನ್ನು ಕಡಿಯಬಾರದು ಎಂದು ಹೇಳಿದರೆ ಮುದಿ ಆಕಳು, ಎತ್ತುಗಳನ್ನು ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಮೋದಿ ಅವರ ನೋಟು ರದ್ಧತಿ, ಜಿಎಸ್‌ಟಿ ನೀತಿಗಳಿಂದಾಗಿ ಅಡಿಕೆ,ರಬ್ಬರ್ ಧಾರಣೆ ಕುಸಿಯತೊಡಗಿದ್ದು, ಅಕ್ಕಿ ಸೇರಿದಂತೆ ದಿನ ಬಳಕೆಯ ವಸ್ತುಗಳ ಧಾರಣೆಯೂ ಏರಿಕೆಯಾಗಿದೆ. ಪುತ್ತೂರು ತಾಲ್ಲೂಕು ಯುವಕ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಕಾಂಗ್ರೆಸ್ ಪ್ರಮುಖರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸುದೇಶ್ ಚಿಕ್ಕಪುತ್ತೂರು ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.

Related posts

Leave a Reply