Header Ads
Header Ads
Breaking News

ಕೊರಗರ ಮಕ್ಕಳ ಮನೆಯಲ್ಲಿ ದೊಂದಿ ಬೆಳಕಿನ ಯಕ್ಷ ಪ್ರಯೋಗ

 

ಕರಾವಳಿಯ ಹೆಮ್ಮೆಯ ಗಂಡು ಕಲೆ ಯಕ್ಷಗಾನ. ಯಕ್ಷಗಾನಕ್ಕೆ ಮೂಲ ಪ್ರೇಕ್ಷಕರು ಅಂದರೆ ಕೊರಗ ಜನಾಂಗ. ಯಕ್ಷಗಾನದ ಮೂಲ ಪ್ರೇಕ್ಷಕರಿಗೆ ಮೂಲ ಸ್ವರೂಪವನ್ನು ಉಣಬಡಿಸಿ ಕೊರಗ ಜನಾಂಗಕ್ಕೆ ಯಕ್ಷ ಕಲೆಯಲ್ಲಿ ತೊಡಗಿಸಿಕೊಳ್ಳುವ ಹೊಸ ಪ್ರಯತ್ನ ಕೊರಗರ ಛಾವಡಿ ಮಕ್ಕಳ ಮನೆಯಲ್ಲಿ ನಡೆಯಿತು. ಮಂದ ಬೆಳಕಿನಲ್ಲಿ ಪ್ರಕ್ರತಿಯ ಮಡಿಲಲ್ಲಿ ನಡೆದ ಈ ಸಾಂಪ್ರದಾಯಿಕ ಪ್ರಯೋಗ ಗತಕಾಲದ ದಿನಗಳ ವೈಭವದ ಪರಿಚಯ ಮಾಡಿಕೊಟ್ಟಿತು.

ದಾರಿಯುದ್ದಕ್ಕೂ ಸಾಲು ಪ್ರಕೃತಿಯ ನಡುವೆ ದೊಂದಿ ಬೆಳಕಿನ ಮಂದ ಬೆಳಕು. ರಾತ್ರಿ ಕತ್ತಲಿಗೆ ಕೊರಗ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಬುಟ್ಟಿ , ಡೋಲು ಪ್ರದರ್ಶನ. ರಾತ್ರಿ ಕತ್ತಲಿಗೆ ರಂಗೇರಿಸುವ ಬಡಗುತಿಟ್ಟಿನ ಯಕ್ಷ ನರ್ತನ. ಹೀಗೊಂದು ಯಕ್ಷ ಪ್ರಯೋಗ ನಡೆದಿದ್ದು ಕುಂದಾಪುರದ ಕುಂಭಾಶಿ ಕೊರಗರ ಮಕ್ಕಳ ಮನೆಯಲ್ಲಿ . ಬಾರ್ಕೂರು ಹುಭಾಶಿಕ ಕೊರಗರ ವೇದಿಕೆ ವತಿಯಿಂದ ಬಡಗುತಿಟ್ಟಿನ ಅತಿಥಿ ಕಲಾವಿದರು ಧ್ರುವ ಚರಿತ್ರೆ ಪ್ರಸಂಗದ ಮೂಲಕ ಪ್ರಕೃತಿಯ ಮಡಿಲಲ್ಲಿ ವಿಶಿಷ್ಟ ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶಿಸಿದರು. ದಶಕಗಳ ಹಿಂದೆ ಗ್ರಾಮೀಣ ಪ್ರದೇಶದ ಹಾಡಿಗಳಲ್ಲಿ ನಡೆಯುತ್ತಿದ್ದ ಈ ಯಕ್ಷ ಪ್ರಯೋಗ ಮೂಲ ನಿವಾಸಿಗಳ ಜೊತೆ ನೆರೆದ ಯಕ್ಷಪ್ರಿಯರಿಗೂ ಮುದ ನೀಡಿತು.

ಪೃಕೃತಿಯ ನಡುವೆ ಅಪ್ಪಟ ಗಿಡ ಮರ ಗಳ ಇಕ್ಕೆಲಗಳಲ್ಲಿ ಇರಿಸಿದ್ದ ದೊಂದಿಗಳ ಧ್ರುವನ ರಾಜ್ಯ ವೈಭವದ ಜೊತೆಗೆ ಬೇಡರ ನೃತ್ಯ, ವಿಶಿಷ್ಟ ಬೇಟೆ ಯ ಯಕ್ಷದ್ರಶ್ಯ ದಲ್ಲಿ ಕರಾವಳಿಯ ಹಿರಿಯ ಹವ್ಯಾಸಿ ಕಲಾವಿದರ ಜೊತೆ ಯಕ್ಷ ಹೆಜ್ಜೆಯ ದಾಪುಗಾಲು ಇಡುತ್ತಿದ್ದ ಪುಟ್ಟ ಮಕ್ಕಳ ಕುಣಿತ ನೆರೆದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿತ್ತು. ವೇದಿಕೆಯ ನಾಲ್ಕು ದಿಕ್ಕಿನಲ್ಲಿ ದೊಂದಿಗಳನ್ನು ಅಳವಡಿಸಲಾಗಿತ್ತು. ಕಣ್ಣಿಗೆ ಹಿತವಾಗುವ  ಮಂದ ಬೆಳಕಿನ ನಡುವೆ ಮಕ್ಕಳ ಮನೆಯ ಚಂಡೆ ಕಲಾವಿದ ಪೋರ ಸುದೀಪ್‍ನ ಚಂಡೆವಾದನದ ಎಂಟ್ರಿಯಂತೂ ಕೊರಗ ಮಕ್ಕಳನ್ನು ಯಕ್ಷಲೋಕಕ್ಕೆ ಕಾಲಿಡುವಂತೆ ಮಾಡಿದ್ದು ಸತ್ಯ. ಹಿರಿಯ ಕಲಾವಿದರು ಕೂಡಾ ದೊಂದಿ ಯಕ್ಷ ಪ್ರಯೋಗದಲ್ಲಿ ಭಾಗವಹಿಸಿದ್ದು ಯಕ್ಷ ಪ್ರಿಯರಿಗೆ ಖುಷಿ ಕೊಟ್ಟಿತ್ತು.

`

ಯಕ್ಷಗಾನದಷ್ಟು ಪ್ರಯೋಗಗಳಿಗೆ ಒಡ್ಡಿಕೊಂಡ ಇನ್ನೊಂದು ಜನಪದ ಕಲೆ ದೇಶದಲ್ಲೇ ಇಲ್ಲ. ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣದಿಂದ ಯಕ್ಷಗಾನ ಜಗತ್ ಪ್ರಸಿದ್ಧ ಕಲೆಯಾಗಿರುವುದಕ್ಕೆ ಇಂತಹಾ ಪ್ರಯೋಗಗಳೇ ಕಾರಣವಿರಬಹುದು.

Related posts

Leave a Reply