Header Ads
Breaking News

ಮದ್ದಲೆ ಮಾಂತ್ರಿಕ ಶತಾಯುಷಿ ಹಿರಿಯಡ್ಕ ಗೋಪಾಲ್ ರಾವ್ ನಿಧನ

ಯಕ್ಷಗಾನ ಕ್ಷೇತ್ರದ ಅನರ್ಘ್ಯ ರತ್ನಗಳಲ್ಲಿ ಒಬ್ಬರಾಗಿದ್ದ ‘ಮದ್ದಲೆ ಮಾಂತ್ರಿಕ’ ಎಂದೇ ಕರೆಸಿಕೊಂಡಿದ್ದ ಶತಾಯುಷಿ ಹಿರಿಯಡ್ಕ ಗೋಪಾಲರಾಯರು ಇಂದು ರಾತ್ರಿ ಹಿರಿಯಡ್ಕ ಸಮೀಪದ ಒಂತಿಬೆಟ್ಟಿನ ತಮ್ಮ ಮನೆ ‘ಸೀತಾರಾಮ ನಿಲಯ’ದಲ್ಲಿ ನಿಧನರಾದರು.

ಕರಾವಳಿಯ ಮೂರು ಜಿಲ್ಲೆಗಳ ಯಕ್ಷಗಾನ ಲೋಕದಲ್ಲಿ ‘ಮದ್ದಲೆ ಮಾಂತ್ರಿಕ’ ರೆಂದೇ ಹೆಸರಾದ ಹಿರಿಯಡ್ಕ ಗೋಪಾಲರಾಯರು ಕಳೆದ ವರ್ಷ ತಮ್ಮ ನೂರು ವರ್ಷ ಪ್ರಾಯದಲ್ಲೂ ನವತಾರುಣ್ಯದ ಎಲ್ಲಾ ಛಾಪನ್ನು ತೋರಿಸಿ ತಮ್ಮ ಕೈಬೆರಳುಗಳಲ್ಲಿದ್ದ ಮದ್ದಲೆಯ ಮಾಂತ್ರಿಕತೆಯನ್ನು ತೋರಿಸಿ ಕಲಾಪ್ರೇಮಿಗಳು ಮತ್ತು ತನ್ನ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದರು.

1919ರ ಡಿ.15ರಂದು ಹಿರಿಯಡ್ಕದಲ್ಲಿ ಜನಿಸಿದ ಗೋಪಾಲರಾಯರು ಕಲಿತಿದ್ದು 6ನೇ ತರಗತಿಯವರೆಗೆ ಮಾತ್ರ. ಆದರೆ ಯಕ್ಷಗಾನ ಚೌಕಿ ಹಾಗೂ ರಂಗಸ್ಥಳದಲ್ಲಿ ಅವರು ಕಲಿತಿದ್ದು ಬದುಕಿನ ಕಲೆಯನ್ನು. 16ನೇ ವಯಸ್ಸಿನಲ್ಲಿ ತಂದೆ ಶೇಷಗಿರಿ ರಾವ್ ಇವರಿಂದ ಮದ್ದಲೆಯನ್ನು ಅಭ್ಯಾಸ ಮಾಡಿದ ಗೋಪಾಲರಾಯರು, ನೃತ್ಯವನ್ನು ಗುರು ನಾಗಪ್ಪ ಕಾಮತರಿಂದ ಕಲಿತರು. 1934ರಲ್ಲಿ ಹಿರಿಯಡ್ಕ ಮೇಳದಲ್ಲಿ ಪಾತ್ರಧಾರಿಯಾಗಿ ಪ್ರವೇಶ ಪಡೆದ ಅವರು 1936ರಲ್ಲಿ ಸಹ ಮದ್ದಲೆ ಕಲಾವಿದರಾದರು. ಮುಂದಿನ ವರ್ಷವೇ ಪೆರ್ಡೂರು ಮೇಳದಲ್ಲಿ ಪ್ರಧಾನ ಮದ್ದಲೆಕಾರರಾಗಿ ಸೇರಿದ ಗೋಪಾಲರಾಯರು ನಂತರ ಹಿಂದಿರುಗಿ ನೋಡಲಿಲ್ಲ.
ಹಲವು ಬಾರಿ ಯಕ್ಷಗಾನ ತಂಡಗಳೊಂದಿಗೆ ವಿದೇಶಿ ಪ್ರಯಾಣ ನಡೆಸಿದ ಗೋಪಾಲರಾಯರಿಗೆ 1979ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1997ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 1998ರಲ್ಲಿ ಜಾನಪದಶ್ರೀ ಪ್ರಶಸ್ತಿ, 2012ರಲ್ಲಿ ಜಾನಪದ ಸಿರಿ ಪ್ರಶಸ್ತಿಗಳನ್ನು ಪಡೆದಿದ್ದರು. 2018ರಲ್ಲಿ ಅವರಿಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಅದನ್ನು ಸ್ವತಹ ಸಚಿವೆ ಜಯಮಾಲ ಅವರೇ ಹಿರಿಯಡ್ಕದ ಅವರ ಮನೆಗೆ ಬಂದು ಪ್ರದಾನ ಮಾಡಿದ್ದರು.

ಅವರಿಗೆ 101 ವರ್ಷ ಪ್ರಾಯವಾಗಿತ್ತು. ಅವರು ಪುತ್ರ, ಅಪಾರ ಬಂಧುಮಿತ್ರರು ಹಾಗೂ ಅಭಿಮಾನಿ ವೃಂದವನ್ನು ಅಗಲಿದ್ದಾರೆ. ರವಿವಾರ ಹಿರಿಯಡ್ಕ ಗೋಪಾಲರಾಯರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *