Header Ads
Header Ads
Breaking News

ಹೆಮ್ಮಾಡಿ ಗುಲಾಬಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಕುಂದಾಪುರ: ಮೀನು ಮಾರಾಟ ಮಹಿಳೆ ಹೆಮ್ಮಾಡಿಯ ಗುಲಾಬಿ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಸೋಮವಾರ ಬಂಧಿಸಿ ಜೈಲಿಗಟ್ಟಿದ್ದಾರೆ. ಜಡ್ಕಲ್ ಗ್ರಾಮ ಸೆಳ್ಕೋಡು ಕುಂಟುಮಾವು ಮನೆ ಸುಭಾಸ್ ನಾಯ್ಕ್ ಎಂಬವರ ಪುತ್ರ ರವಿರಾಜ್ (31) ಬಂಧಿತ ಆರೋಪಿ.

ಆರೋಪಿ ರವಿರಾಜ್‌ನನ್ನು ಸೋಮವಾರ ಬೆಳಗಿನ ಜಾವ ಸಿದ್ದಾಪುರದ ಪೆಟ್ರೋಲ್ ಬಂಕ್ ಸಮೀಪದಲ್ಲಿ ಬಂಧಿಸಲಾಗಿದ್ದು, ಮಧ್ಯಾಹ್ನದ ವೇಳೆಗೆ ಘಟನಾಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಲಾಯಿತು. ಹೆಚ್ಚುವರಿ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಧೀಶ ಶ್ರೀಕಾಂತ ಎನ್.ಎ ಆರೋಪಿಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಪ್ರಾಸಿಕ್ಯೂಶನ್ ಪರ ಹೆಚ್ಚುವರಿ ಸರ್ಕಾರಿ ಅಭಿಯೋಜಕಿ ಸುಮಂಗಲ ನಾಯಕ್ ವಾದ ಮಂಡಿಸಿದ್ದಾರೆ.ಪ್ರಕರಣದ ಹಿನ್ನೆಲೆ:
ಹರೆಗೋಡು ಸಮೀಪದ ವಿಜಯ ಗೇರುಬೀಜ ಕಾರ್ಖಾನೆ ಸಮೀಪದ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ಗುಲಾಬಿ ಫೆಬ್ರವರಿ 28ರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದು, ಮಾರ್ಚ್ 1ರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಗುಲಾಬಿ ಧರಿಸಿದ್ದ ಚಿನ್ನಾಭರಣಗಳು ಇಲ್ಲದ ಕಾರಣ ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿದ್ದರಿಂದ ಪೊಲೀಸರು ಹೆಚ್ಚಿನ ತನಿಖೆಗಾಗಿ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿದ್ದರು. ನಾಲ್ಕು ದಿನಗಳ ಬಳಿಕ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದ್ದು, ಗುಲಾಬಿಯ ಕತ್ತು ಹಿಸುಕಿ ಉಸಿರುಗಟ್ಟಿ ಸಾಯಿಸಲಾಗಿರುವ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಬಳಿಕ ಪ್ರಕರಣ ಭೇದಿಸಲು ಮುಂದಾದ ಪೊಲೀಸರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆರೋಪಿಯ ಪತ್ತೆಗಾಗಿ ನಾಲ್ಕು ತಂಡ ರಚಿಸಿಕೊಂಡು ಕಾರ್ಯಾಚರಣೆಗಿಳಿದ ಪೊಲೀಸರು 10 ದಿನಗಳ ಬಳಿಕ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲಸಕ್ಕೂ ಹೋಗದೆ ಶೋಕಿ ಮಾಡಿಕೊಂಡು ಕಾರಿನಲ್ಲಿ ಸುತ್ತಾಡುತ್ತಿದ್ದ ರವಿರಾಜ್ ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ಫೆ.28ರಂದು ರಾತ್ರಿ ಗುಲಾಬಿ ಮನೆಗೆ ಬಂದಿದ್ದು, ತಾನು ಕಷ್ಟದಲ್ಲಿದ್ದು ನಿಮ್ಮ ಬಳಿಯಲ್ಲಿರುವ ಚಿನ್ನದ ಸರ ಕೊಡಿ, ಅದನ್ನು ಗಿರವಿಯಿಟ್ಟು ಹಣ ತೆಗೆದುಕೊಳ್ಳುವೆ, ಸ್ವಲ್ಪ ಸಮಯದ ಬಳಿಕ ಮರಳಿ ನೀಡುವೆ ಎಂದು ಆಕೆಯ ಬಳಿ ಅಂಗಾಲಾಚುತ್ತಾನೆ. ಅದಕ್ಕೆ ಆಕೆ ಒಲ್ಲೆ ಎಂದು ಹೇಳುತ್ತಾಳೆ. ಸುಮಾರು ಮೂರು ಗಂಟೆಯವ ತನಕವೂ ಅಲ್ಲಿಯೇ ಕುಳಿತು ಕಾಯುತ್ತಿದ್ದ. ಸ್ವಲ್ಪ ಸಮಯದ ಬಳಿಕ ಆಕೆ ಮತ್ತೆ ಎದ್ದು ನೋಡಿದಾಗ ರವಿರಾಜ್ ಅಲ್ಲಿಯೇ ಕುಳಿತಿದ್ದು ಮತ್ತೆ ಮತ್ತೆ ಚಿನ್ನ ನೀಡುವಂತೆ ದುಂಬಾಲು ಬಿದ್ದಿದ್ದು ಆಕೆ ಸುತರಾಂ ಒಪ್ಪದಿದ್ದಾಗ ಗುಲಾಬಿ ಹಿಂಬದಿಯಿಂದ ಕುತ್ತಿಗೆಗೆ ತಾಣು ತಂದಿದ್ದ ಟವೆಲ್ ಅನ್ನು ಸುತ್ತಿ ಉಸಿರುಗಟ್ಟಿಸಿ ಕೊಲೆಗೈದು ಆಕೆಯ ಚಿನ್ನಾಭರಣ ದೋಚಿ ಪರಾರಿಯಾಗುತ್ತಾನೆ. ಈ ಪ್ರಕರಣ ಮಾರ್ಚ್ 1ರಂದು ಮಧ್ಯಾಹ್ನದ ವೇಳೆಗೆ ಬೆಳಕಿಗೆ ಬಂದಿತ್ತು. ಮೃತ ಮಹಿಳೆ ಕತ್ತಲ್ಲಿದ್ದ ಚಿನ್ನದ ಸರ, ಬೆಂಡೋಲೆ, ಉಂಗುರ ತೆಗೆದುಕೊಂಡು ಗಿರವಿ ಇಟ್ಟಿರುವುದಾಗಿ ಪೊಲೀಸರ ವಿಚಾರಣೆಯ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ.

ಕೊಲೆ ಮಾಡಿ ಚಿನ್ನ ದೋಚಿದ ರವಿರಾಜ್ ಅಲ್ಲಿಂದ ಕಾಲ್ನಡಿಗೆಯಲ್ಲಿ ಮೂರು ಕಿಲೋಮೀಟರ್ ದೂರ ಸಾಗಿ ತಲ್ಲೂರಿಗೆ ಬರುತ್ತಾನೆ. ಅಲ್ಲಿಂದ ರಿಕ್ಷಾದಲ್ಲಿ ಕುಂದಾಪುರಕ್ಕೆ ಬಂದು ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ಏರಿ ಸಿದ್ದಾಪುರಕ್ಕೆ ತೆರಳಿ ಬೆಳಿಗ್ಗೆ ಸುಮಾರಿಗೆ ರಂಜಿತ್ ಎಂಬಾತನಿಗೆ ತನ್ನ ಕದ್ದು ತಂದ ಚಿನ್ನದ ಸರ ನೀಡಿ ಸಾಲ ಕಟ್ಟಿಕೊಳ್ಳಲು ಹೇಳಿ ಅವನ ಬಳಿ 17 ಸಾವಿರ ಪಡೆದು ಅಲ್ಲಿಂದ ಬೆಂಗಳೂರಿಗೆ ತೆರಳುತ್ತಾನೆ. ಅಲ್ಲಿಯೂ ಕೂಡ ಕಿವಿ ಓಲೆ ಗಿರವಿ ಇಟ್ಟು ಹಣ ಪಡೆಯುತ್ತಾನೆ. ಒಂದೆರಡು ಬಾರಿ ಊರಿಗೆ ಬಂದು ಹೋಗಿರುವ ರವಿರಾಜ್ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದ ಪೊಲೀಸರು ಸೋಮವಾರ ಆತನನ್ನು ಬಂಧಿಸಿದ್ದಾರೆ.

ಕೊಲೆ ಪ್ರಕರಣ ವಿಶೇಷ ತಂಡದಲ್ಲಿದ್ದ ಗ್ರಾಮಾಂತರ ಠಾಣೆಯ ಎಸ್ಸೈ ಶ್ರೀಧರ ನಾಯ್ಕ್, ಕುಂದಾಪುರ ಎಸ್ಸೈ ಹರೀಶ್ ಆರ್.ನಾಯ್ಕ್, ಹೆಡ್ ಕಾನ್ಸ್‌ಟೇಬಲ್ ವೆಂಕಟರಮಣ ದೇವಾಡಿಗ, ಮಂಜುನಾಥ, ಸೀತಾರಾಮ ಶೆಟ್ಟಿಗಾರ್, ಮೋಹನ್ ಶಿರೂರು, ಮಧು, ಸಂತೋಷ್ ಕುಮಾರ್, ರತ್ನಾಕರ ಶೆಟ್ಟಿ, ಸಂತೋಷ್ ಕೊರವಡಿ, ವಿಜಯಾ, ಸಂತೋಷ್, ಕಾನ್ಸ್‌ಟೇಬಲ್‌ಗಳಾದ ಆದರ್ಶ, ಚಂದ್ರಶೇಖರ ಅರೆಶಿರೂರು, ಶ್ರೀಧರ್, ಸುಜಿತ್, ಚೇತನ್, ಸಚಿನ್ ಶೆಟ್ಟಿ, ತಾಂತ್ರಿಕ ವಿಭಾಗದ ಸಿಬ್ಬಂದಿ ಶಿವಾನಂದ ಕೊಲೆ ಪ್ರಕರಣ ಭೇದಿಸಲು ಸಹಕಾರಿಸಿದ್ದಾರೆ. 10 ದಿನಗಳೊಳಗೆ ಕೊಲೆ ಪ್ರಕರಣವನ್ನು ಭೇದಿಸಿದ ಕುಂದಾಪುರ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಉಡುಪಿ ಎಸ್ಪಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಕುಂದಾಪುರ ಡಿಎಸ್ಪಿ ಬಿ.ಪಿ.ದಿನೇಶ್ ಕುಮಾರ್ ನೇತೃತ್ವದಲ್ಲಿ ಕುಂದಾಪುರ ವೃತ್ತನಿರೀಕ್ಷಕ ಮಂಜಪ್ಪ ನೇತೃತ್ವದ ತಂಡ ಕೃತ್ಯಕ್ಕೆ ಬಳಸಿದ ಕಾರನ್ನು ಸಿದ್ದಾಪುರ ಪೆಟ್ರೋಲ್ ಬಂಕ್ ಬಳಿ ವಶಕ್ಕೆ ಪಡೆದಿದ್ದಾರೆ.

Related posts

Leave a Reply

Your email address will not be published. Required fields are marked *