Header Ads
Header Ads
Breaking News

ಉತ್ತಮ ಇಳುವರಿ ಕಂಡ ಪೊದೆ ಮೆಣಸು

ಉಳ್ಳಾಲ ಕಾಪಿಕಾಡಿನಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಗೇರುತೋಟದಲ್ಲಿ ಅಂತರ ಬೆಳೆಯಾಗಿ ೩ ವರ್ಷ ಹಿಂದೆ ನೆಡಲಾದ ಹೊಸ ರೀತಿಯ ಪೊದೆ ಮೆಣಸು ಉತ್ತಮ ಇಳುವರಿಯನ್ನು ನೀಡಿದ್ದು, ಒಂದು ಎಕರೆ ಭೂಮಿಯಲ್ಲಿ 500 ರಿಂದ 600 ಕೆಜಿ ಕಾಳುಮೆಣಸ್ಸು ನಿರೀಕ್ಷಿಸಲಾಗಿದೆ.

ಕಾಳು ಮೆಣಸು ದೇಶದ ಪ್ರಮುಖ ವಾಣಿಜ್ಯ ಬೆಳೆ, ಉಷ್ಣ ಮತ್ತು ಸಮತೋಷ್ಣ ವಲಯ ವಾತಾವರಣದಲ್ಲಿ ಬೆಳೆಯಬಹುದು. ಬೆಳೆ ಉತ್ಪಾದನೆ ಹಾಗೂ ರಫ್ತು ಮಾರಾಟದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಹೊಂದಿದೆ. ಸಾಂಬಾರು ಪದಾರ್ಥಗಳ ತಯಾರಿಕೆ, ಔಷಧಿಗಳ ತಯಾರಿಕೆ ಹಾಗೂ ಇತರ ದ್ರವ್ಯ ವಸ್ತುಗಳ ತಯಾರಿಕೆಯಲ್ಲಿ ಕಾಳು ಮೆಣಸು ಬಹಳ ಪ್ರಾಮುಖ್ಯತೆಯನ್ನು ದೇಶ ವಿದೇಶಗಳಲ್ಲಿ ಹೊಂದಿದೆ. ಪ್ರಸ್ತುತ ಬೆಳೆ ವ್ಯವಸಾಯದಲ್ಲಿ ಸಾಕಷ್ಟು ಪ್ರಗತಿಯೂ ಆಗಿದೆ. ಪೊದೆ ಮೆಣಸಿನ ಗಿಡಗಳನ್ನು ಕರಿ ಮೆಣಸಿನ ಬಳ್ಳಿಯಿಂದ ತಯಾರಿಸಬಹುದು. ಕಾಳು ಮೆಣಸಿನ ಬಳ್ಳಿಯನ್ನು ಮರಕ್ಕೆ ಇಲ್ಲವೇ ಆಧಾರ ಕಂಬಗಳಿಗೆ ಬೆಳೆಯಲು ಬಿಡಲಾಗುತ್ತಿದೆ. ಆದರೆ ಪೊದೆ ಮೆಣಸನ್ನು ಆಧಾರ ಕಂಬಗಳಿಗೆ ಇಲ್ಲವೇ ಮರಕ್ಕೆ ಬಿಡುವ ಅವಶ್ಯಕತೆ ಇಲ್ಲ. ಇದು ನೆಲದ ಮೇಲೆ ಪೊದೆಯಂತೆ ಹಬ್ಬಿಕೊಂಡು ಬೆಳೆಯುತ್ತಿದೆ.

ಪೊದೆ ಮೆಣಸು : ಕಾಳು ಮೆಣಸಿನ ಬಳ್ಳಿಯನ್ನು ಕತ್ತರಿಸಿ ನೆಟ್ಟರೆ ಅದು ಆಶ್ರಯ ಗಿಡಗಳ ಮೇಲೆ ಬಳ್ಳಿಯಾಗಿ ಹಬ್ಬಿಕೊಂಡು ಪುನ: 3-4 ವರ್ಷದ ನಂತರ ಕಾಳು ಮೆಣಸು ಕೊಡುತ್ತದೆ. ಈ ಬಳ್ಳಿಗೆ ಆಧಾರವಾಗಿ ನಾನಾ ಬಗೆಯ ಆಧಾರ ಕಂಬಗಳು ಅಥವಾ ಮರ ಗಿಡವನ್ನು ನೆಡಬೇಕಿದೆ. ಆದರೆ ಫಸಲು ಬಂದಿರುವ ಕಾಳು ಮೆಣಸಿನ ಗಿಡದ ರೆಂಬೆಯನ್ನು ಕಾಳು ಮೆಣಸು ಕೊಯ್ಲು ಮಾಡಿದ ನಂತರ ಕತ್ತರಿ ಗಿಡಗಳಾಗಿ ಮಾಡಿ, ನಾಟಿ ಮಾಡಿದ ಒಂದೇ ವರ್ಷದಲ್ಲಿ ಕಾಳು ಮೆಣಸನ್ನು ಪಡೆಯಬಹುದು. ಈ ವಿಧಾನದಿಂದ ತಯಾರಿಸಿದ ಗಿಡಗಳು ಬಳ್ಳಿಯಾಗಿ ಬೆಳೆಯದೆ ಪೊದೆಯಂತೆ ಅಗಲವಾಗಿ ಬೆಳೆಯುತ್ತದೆ. ಇದೇ ಪೊದೆ ಮೆಣಸಿನ ಗಿಡವಾಗಿರುತ್ತದೆ. ಶೇ.50 ನೆರಳಿನಡಿ ಬೆಳೆಯಬಹುದು, ಗೇರು ತೋಟದಲ್ಲಿ 8 ಮೀ ಅಂತರದಲ್ಲಿ ಅಂತ ಬೆಳೆಯಾಗಿ ಬೆಳೆಯಬಹುದು.

 

ಇಳುವರಿ ಹೇಗೆ ?: ಸುಮಾರು 1.50 ಮೀಟರ್ ಸುತ್ತಳೆ ಇರುವ ಪೊದೆಯಾಗಿ ಬೆಳೆದ ಪ್ರತಿ ಗಿಡದಲ್ಲಿ 600-700ಗ್ರಾಂ ಹಸಿ ಕಾಳು ಮೆಣಸು ದೊರೆಯುತ್ತದೆ. ಪೊದೆ ಮೆಣಸು ಗೇರು ತೋಟದಲ್ಲಿ ಅಂತರ ಬೆಳೆಯಾಗಿರುವುದರಿಂದ ಗೇರು ಮರದ ಇಳುವರಿಯು ಕಡಿಮೆಯಾಗುವುದಿಲ್ಲ. ಗೇರು ತಳಿಯ ಗುಣಕ್ಕನುಸಾರವಾಗಿ 15-18 ಕೆ.ಜಿ ಬೀಜ ಬಂದಿದ್ದು, ಉತ್ತಮ ದರ್ಜೆಯ ಇಳುವರಿ ಬಂದಿದೆ.

ನಾಟಿ ವಿಧಾನ : ಫಲ ಕೊಡುವ ರೆಂಬೆಯಿಂದ ತಯಾರಿಸಿದ ಪೊದೆ ಮೆಣಸಿನ ಗಿಡಗಳನ್ನು 1.5 ಅಡಿ ಆಳದ ಗುಂಡಿಯಲ್ಲಿ ಒಂದು ಬುಟ್ಟಿಗೆ ಕೊಟ್ಟಿಗೆ, ಗೊಬ್ಬರ, 100 ಗ್ರಾಂ , ಕಹಿ ಬೇವಿನ ಹಿಂಡಿ ಹಾಕಬೇಕಾಗಿದೆ. ಸಾರಜನಕ 50 ಗ್ರಾಂ, ರಂಜಕ 20 ಗ್ರಾಂ ಮತ್ತು ಪೊಟ್ಯಾಷ್ 70 ಗ್ರಾಂ, ಪ್ರಮಾಣದಲ್ಲಿ ಹಾಕಬೇಕಾಗಿದೆ. ನಾಟಿ ಮಾಡಿದ 3 ತಿಂಗಳ ನಂತರ ಇದೇ ಪ್ರಮಾಣವನ್ನು ಮತ್ತೊಮ್ಮೆ ಕೊಡಬೇಕು. ಪೊದೆ ಮೆಣಸಿನ ಗಿಡ ಬೆಳೆದಂತೆ 3,6 ಮತ್ತು ೯ ತಿಂಗಳುಗಳಲ್ಲಿ ಬುಡಕ್ಕೆ ಮಣ್ಣು ಏರಿ ಹಾಕಬೇಕು. ಇದರಿಂದ ಟೊಂಗೆ ನೇರವಾಗಿ ಮಣ್ಣಿನ ಸಂಪರ್ಕವಾಗದೆ ಫಸಲು ಬೇಗನೆ ಬರುತ್ತದೆ. ವಾರಕ್ಕೆ ಮೂರು ಬಾರಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಬೇಕಾಗಿದೆ.

ಪೊದೆ ಮೆಣಸು ಅಂತರಬೆಳೆಯಾಗಿರುವುದರಿಂದ ಅದರ ಮೇಲೆ ಬೀಳುವ ಗೇರು ಮರದ ನೆರಳನ್ನು ನಿಯಂತ್ರಿಸಿ ಶೇ.50 ರಷಟು ಮಾತ್ರ ನೆರಳು ಬೀಳುವಂತಿರಬೇಕು,. ಗೇರು ಮರದ ಫಸಲು ಮುಗಿದ ನಂತರ ಬೆಳಿಗ್ಗೆ 11 ರಿಂದ ಮಧ್ಯಾಹ್ನ ೪ ಗಂಟೆಯವರೆಗೆ ಬೀಳುವ ಬಿಸಿಲು ಮತ್ತು ನೆರಳನ್ನು ಗಮನಿಸಿ ಗೇರು ಕೊಂಬೆಗಳನ್ನು ಸವರುವುದರ ಮೂಲಕ ಪೊದೆ ಮೆಣಸಿಗೆ ನೆರಳನ್ನು ನಿಯಂತ್ರಿಸಬಹುದು. ಸವರಿದ ಕೊಂಬೆಗಳಿಗೆ ಬೋರ್ಡೊಪೇಸ್ಟ್ ಲೇಪಿಸಬೇಕಿದೆ.

ಕೀಟಗಳ ನಿರ್ವಹಣೆ
ಪೊದೆ ಮೆಣಸು ಕೀಟಗಳ ನಿಯಂತ್ರಣಕ್ಕೆ ಕರಿ ಮೆಣಸಿನಲ್ಲಿ ಉಪಯೋಗಿಸುವ ಕ್ರಮಗಳನ್ನೇ ಅನುಸರಿಸಬೇಕಿದೆ. ಚಿಕ್ಕಟ ದುಂಬಿ , ಹಿಟ್ಟು ತಿಗಣೆ, ಕಾಂಡ ಕೊರೆಯುವ ಹುಳು ಮತ್ತು ಥಿಪ್ಸ್ ಕೀಟಗಳ ಬಾಧೆ ತಡೆಗಟ್ಟಲು ಡೈಮಿಥೋಯೇಟ್, ಕ್ವಿನಾಲ್ಫಾಸ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬಳ್ಳಿಗಳಿಗೆ ಸಿಂಪಡಿಸಬೇಕಿದೆ. ಜೇಡ ನುಸಿಗೆ ಡೈಕೊಫಾಲ್, ನೀರಿನಲ್ಲಿ ಕರಗುವ ಗಂಧಕ ಸಿಂಪಡಿಸಬೇಕಿದೆ .

ರೋಗಗಳು : ಕಪ್ಪು ಕೊಳೆ ರೋಗ ಮತ್ತು ನಿಧಾನ ಸೊರಗು ರೋಗಗಳು ಮಳೆ ಬರುವ ದಿನಗಳಲ್ಲಿ ಕಾಣಿಸುತ್ತವೆ,. ಇದನ್ನು ನಿಯಂತ್ರಿಸಲು ಮಳೆ ನೀರು ಚೆನ್ನಾಗಿ ಬಸಿದು ಹೋಗುವಂತೆ ಮಾಡಬೇಕಿದೆ. ಮುಂಗಾರು ಮಳೆಯ ಸಂದರ್ಭ 2-3 ಬಾರಿ ಶೇ.1ರ ಬೋರ್ಡೊ ದ್ರಾವಣವನ್ನು ಬಳ್ಳಿಗೆ ಸಿಂಪಡಣೆ ಮಾಡಬೇಕಿದೆ. ಪ್ರತಿ ಗಿಡದ ಬುಡಕ್ಕೆ 100 ಗ್ರಾಂ ಕಹಿ ಬೇವಿನ ಹಿಂಡಿ ಮತ್ತು ೫೦ ಗ್ರಾ. ಟ್ರೈಕೋಡರ್ಮಾವನ್ನು ನೀರಿನಲ್ಲಿ ಕರಗಿಸಿ ಹಾಕಬೇಕಿದೆ.

ವರದಿ: ಆರೀಫ್ ಉಳ್ಳಾಲ

Related posts

Leave a Reply