Header Ads
Header Ads
Breaking News

ಉದ್ಘಾಟನೆಗೆ ಮುನ್ನವೇ ಸೋರಲಾರಂಭಿಸಿದ ಕಚೇರಿ ಪುತ್ತೂರಿನ ಲೋಕೋಪಯೋಗಿ ಇಲಾಖೆಯ ಕಚೇರಿ ಕಟ್ಟಡ…!

ಪುತ್ತೂರು: ಸರ್ಕಾರದ ವಿವಿಧ ಇಲಾಖೆಗಳ ಹಾಗೂ ಸಾರ್ವಜನಿಕ ನೆಲೆಯ ಯೋಜನೆಗಳ ನಿರ್ಮಾಣ ಕಾಮಗಾರಿಯ ಹೊಣೆ ಹೊತ್ತಿರುವ ಪ್ರಮುಖ ಸರ್ಕಾರಿ ಇಲಾಖೆಗಳಲ್ಲಿ ಒಂದಾದ ಲೋಕೋಪಯೋಗಿ ಇಲಾಖೆ ಇದೀಗ ಪುತ್ತೂರಿನಲ್ಲಿ ತನ್ನ ಉಪವಿಭಾಗೀಯ ಕಚೇರಿಗಾಗಿ ನಿರ್ಮಿಸಿರುವ ಕಟ್ಟಡ ಉದ್ಘಾಟನೆಗೆ ಮುನ್ನವೇ ಸೋರಲಾರಂಭಿಸಿದೆ….!ಪುತ್ತೂರಿನಲ್ಲಿ ಸುಮಾರು ರೂ.1.20 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಉಪವಿಭಾಗೀಯ ಕಚೇರಿ ಕಟ್ಟಡ ಕಾಮಗಾರಿ ಭರದಿಂದ ನಡೆದು ಇದೀಗ ಪೂರ್ಣಗೊಂಡಿದೆ. ಪುತ್ತೂರಿನ ಹಳೆಯ ತಾಲ್ಲೂಕು ಕಚೇರಿ ಬಳಿಯಿರುವ ಲೋಕೋಪಯೋಗಿ ಇಲಾಖೆಯ ಸ್ಥಳದಲ್ಲಿಯೇ ಹೊಸ ಕಟ್ಟಡ ಎದ್ದುನಿಂತಿದೆ. ಹಳೆಯ ಲೋಕೋಪಯೋಗಿ ಇಲಾಖೆಯ ಕಚೇರಿಯ ಪಾರ್ಶ್ವದಲ್ಲೇ ಎದ್ದುನಿಂತಿರುವ ನೂತನ ಕಟ್ಟಡದ ಉದ್ಘಾಟನೆ ಜು.14ರಂದು ನಡೆಯುವುದು ಎಂದು ಸುದ್ದಿ ಹರಡಿದೆ. ಆದರೆ ಉದ್ಘಾಟನೆಗೆ ಮುನ್ನವೇ ಕಟ್ಟಡ ಸೋರಲಾರಂಭಿಸಿರುವುದು ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿಯನ್ನು ಅಣಕಿಸುವಂತಿದೆ. ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ ಈ ಕಟ್ಟಡ ಕಾಮಗಾರಿಗೆ ರೂ. 1.20ಕೋಟಿ ಅನುದಾನ ಮಂಜೂರು ಆಗಿತ್ತು. ಕಟ್ಟಡ ಕಾಮಗಾರಿ ೨೦೧೭ರ ಆಗಸ್ಟ್ ತಿಂಗಳಲ್ಲಿ ಆರಂಭಗೊಂಡಿತ್ತು. ಒಂದು ವರ್ಷದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡಿದ್ದರೂ, ಕಟ್ಟಡ ನೋಡಲು ಭವ್ಯವಾಗಿ ಕಾಣುತ್ತಿದ್ದರೂ, ಕಟ್ಟಡ ನೆಲ ಮಹಡಿಯ ಒಂದು ಭಾಗದಲ್ಲಿ ಮೇಲ್ಛಾವಣಿ ಸೋರುತ್ತಿದ್ದು, ಮಳೆ ನೀರು ಸೀಲಿಂಗ್‌ನಿಂದ ಇಳಿದು ಪಕ್ಕದ ಗೋಡೆಯನ್ನೂ ಸವರಿಕೊಂಡು ನೆಲಕ್ಕೆ ಹರಿಯುತ್ತಿದೆ. ಈ ಭಾಗದಲ್ಲಿ ಹೊಸ ಕಟ್ಟಡವು ಹಳೆ ಕಟ್ಟಡಕ್ಕೆ ತಾಗಿಕೊಂಡಿದ್ದು, ಹೊಸ ಕಟ್ಟಡದಿಂದ ಹಳೆ ಕಟ್ಟಡಕ್ಕೆ ನೇರ ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಜಾಗದಲ್ಲಿ ಮೇಲ್ಛಾವಣಿ ಸೋರುತ್ತಿದೆ. ಲೋಕೋಪಯೋಗಿ ಇಲಾಖೆಯ ಈ ಕಟ್ಟಡವು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡೂ ಸಂದರ್ಭದಲ್ಲಿ ಕಚೇರಿಯೊಳಗೆ ಸಹಜ ಬೆಳಕು ಬೀಳುವಂತೆ ತಂತ್ರಜ್ಞತೆಗೆ ಒತ್ತು ನೀಡಿ ಕಾಮಗಾರಿ ನಿರ್ವಹಿಸಲಾಗಿದೆ. ಹಗಲು ವಿದ್ಯುತ್ ವ್ಯವಸ್ಥೆಯಿಲ್ಲದೆ ಸಹಜ ಬೆಳಕಿನಲ್ಲಿ ಕಚೇರಿ ಕಾರ್ಯನಿರ್ವಹಿಸುವಂತೆ ಕಟ್ಟಡದ ಒಳಾಂಗಣ ವಿನ್ಯಾಸ ಮಾಡಲಾಗಿದೆ. 2ಅಂತಸ್ತು ಸೇರಿ ೪೫೫ ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಕಟ್ಟಡದಲ್ಲಿ ಸೋಲಾರ್ ವಿದ್ಯುತ್, ಮಳೆ ಕೊಯ್ಲು ಮುಂತಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.ಆದರೆ ಉದ್ಘಾಟನೆಗೆ ಸಜ್ಜಾಗಿರುವ ಕಟ್ಟಡ ಸೋರಲಾರಂಭಿಸಿರುವುದು ಎಲ್ಲಾ ಬಣ್ಣವನ್ನು ಮಸಿ ನುಂಗಿದಂತೆ ಮಾಡಿದೆ. ಕೋಟಿಗಟ್ಟಲೆ ವ್ಯಯಿಸಿ ನಿರ್ಮಿಸಿರುವ ಈ ಕಟ್ಟಡ ಸೋರುತ್ತಿರಬೇಕಾದರೆ ಕಟ್ಟಡದ ಗುಣಮಟ್ಟ ಹೇಗಿರಬಹುದು ಎಂದು ಜನರಾಡಿಕೊಳ್ಳುತ್ತಿದ್ದಾರೆ.

Related posts

Leave a Reply