Breaking News

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ, ಜಾಮೀನು ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ ರಾಜೇಶ್ವರಿ ಶೆಟ್ಟಿ

ಉಡುಪಿ ಮೂಲದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧನದಲ್ಲಿರುವ ಪತ್ನಿ ರಾಜೇಶ್ವರಿ ಶೆಟ್ಟಿ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಭಾಸ್ಕರ್ ಶೆಟ್ಟಿಯ ಕೊಲೆಯಾಗಿದ್ದು, ಇದರಲ್ಲಿ ಪತ್ನಿ ರಾಜೇಶ್ವರಿ ಪ್ರಮುಖ ಆರೋಪಿಯಾಗಿ ಬಂಧಿತರಾಗಿದ್ದರು.
ಇವರ ಪುತ್ರ ನವನೀತ್ ಶೆಟ್ಟಿ ಮತ್ತು ಜ್ಯೋತಿಷಿ ನಿರಂಜನ್ ಸಹ ಆರೋಪಿಯಾಗಿದ್ದರು. ಇವರೆಲ್ಲರೂ ಈಗ ಪೊಲೀಸ್ ವಶದಲ್ಲಿದ್ದಾರೆ. ಕಳೆದ ಒಂಭತ್ತು ತಿಂಗಳುಗಳಿಂದ ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯಗಳಲ್ಲಿ ಹೋರಾಟ ನಡೆಸುತ್ತಲೇ ಇದ್ದಾರೆ. ಇತ್ತೀಚೆಗೆ ಹೈಕೋರ್ಟ್ ಪೀಠ ಕೂಡಾ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ರಾಜೇಶ್ವರಿ ಶೆಟ್ಟಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಜಾಮೀನು ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಒಪ್ಪಿಕೊಂಡಿದ್ದಾರೆ. ಈ ಕುರಿತು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಈಗಾಗಲೇ ೧,೩೦೦ ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಹತ್ಯೆಯಾದ ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಅವರು, ಸ್ಥಳೀಯ ಜನಪ್ರತಿನಿಧಿಯೊಬ್ಬರ ಪತಿ, ನಿಟ್ಟೂರು ಮೂಲದ ವ್ಯಕ್ತಿಯೊಬ್ಬರಿಗೆ ೨ ಕೋಟಿಗೂ ಅಧಿಕ ಹಣ ನೀಡಿದ್ದರು. ತನ್ನ ನಿಕಟವರ್ತಿಯಾಗಿದ್ದ ಈತನನ್ನು ಸ್ವತಃ ಠಾಣೆಗೆ ಕರೆಸಿದ್ದ ರಾಜೇಶ್ವರಿ ಅವರು ಚೆಕ್ ನೀಡಿದ್ದರು. ಭಾಸ್ಕರ್ ಶೆಟ್ಟಿಯ ಕೊಲೆ ರಹಸ್ಯ ಬಯಲಾಗುವ ಮೊದಲು ಪೊಲೀಸರು ರಾಜೇಶ್ವರಿ ಹಾಗೂ ಆಕೆಯ ಪುತ್ರ ನವನೀತ್ ವಿಚಾರಣೆ ನಡೆಸಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸುತ್ತಾರೆ ಎಂಬ ಸುಳಿವು ಸಿಕ್ಕ ತಕ್ಷಣ, ರಾಜೇಶ್ವರಿ ಅವರು ಪೊಲೀಸರಿಗೆ ನೀಡಲು ಮತ್ತು ಪ್ರಕರಣದ ದಿಕ್ಕು ತಪ್ಪಿಸಲು ಮುಂದಾಗಿದ್ದರು. ಹಣ ಪಡೆದ ವ್ಯಕ್ತಿ ವಕೀಲರ ಫೀಸ್ ನೀಡುವುದು ಸಹಿತ ಪ್ರಕರಣದ ಹಲವು ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದ. ಈ ಪೈಕಿ ದೊಡ್ಡ ಮೊತ್ತವನ್ನು ಎಸ್. ವಿ. ಗಿರೀಶ್ ಸಹಿತ ಹಲವು ಪೊಲೀಸರಿಗೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಳಿಕ ಎಸ್. ವಿ. ಗಿರೀಶ್ ವಿರುದ್ಧ ಇಲಾಖಾ ಮಟ್ಟದ ತನಿಖೆಗೆ ಉಡುಪಿ ಎಸ್‌ಪಿ ಆದೇಶ ನೀಡಿದ್ದರು.

Related posts

Leave a Reply