Header Ads
Breaking News

ಉಪ್ಪಿನಂಗಡಿ : ಅಪಾಯದ ಸ್ಥಿತಿಯಲ್ಲಿ ಓವರ್‍ಹೆಡ್ ಟ್ಯಾಂಕ್

ಪುತ್ತೂರು : 40 ವರ್ಷಗಳಿಗಿಂತಲೂ ಹಿಂದೆ ನಿರ್ಮಾಣವಾದ ಬೃಹತ್ ಓವರ್‍ಹೆಡ್ ನೀರಿನ ಟ್ಯಾಂಕೊಂದು ಇದೀಗ ಬಿರುಕು ಕಾಣಿಸಿಕೊಂಡು ಅಪಾಯದ ಸ್ಥಿತಿಯಲ್ಲಿದೆ. ಪರಿಣಾಮ ಸ್ಥಳೀಯ ಜನತೆ ಆತಂಕದ ಸ್ಥಿತಿಯಲ್ಲಿದ್ದಾರೆ.

ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೃಷ್ಣನಗರ ಎಂಬಲ್ಲಿ ಮುಖ್ಯರಸ್ತೆಯಿಂದ 25 ಮೀ. ಒಳರಸ್ತೆಯಲ್ಲಿ ಈ ಟ್ಯಾಂಕ್ ನಿರ್ಮಾಣಗೊಂಡಿದ್ದು, ಈ ಟ್ಯಾಂಕ್‍ನ ಸನಿಹದಲ್ಲಿ ಅಂಗನವಾಡಿ, ಪ್ರಾಥಮಿಕ ಶಾಲೆ ಸಹಿತ ಮನೆಗಳಿದ್ದು, ಅಂಗನವಾಡಿ ಪುಟಾಣಿಗಳು, ಸ್ಥಳೀಯ ಮನೆಯವರು, ಸಾರ್ವಜನಿಕರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಈ ಹಿಂದೆ ರಾಮಕೃಷ್ಣ ಹೆಗ್ಡೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಬೃಹತ್ ನೀರಿನ ಟ್ಯಾಂಕನ್ನು ನಿರ್ಮಿಸಲಾಗಿತ್ತು. ಪಿಲ್ಲರ್ ಬಳೆಸಿಕೊಂಡು ನೆಲಮಟ್ಟದಿಂದ ಸುಮಾರು 50 ಅಡಿ ಎತ್ತರದಲ್ಲಿ ಟ್ಯಾಂಕ್ ನಿರ್ಮಿಸಲಾಗಿದೆ. ಒಂದು ಲಕ್ಷ ಲೀಟರ್ ನೀರಿನ ಸಾಮಥ್ರ್ಯ ಹೊಂದಿರುವ ಟ್ಯಾಂಕ್ ಇದಾಗಿದೆ.
ಇದೀಗ ಕಳೆದ ಕೆಲವು ವರ್ಷಗಳಿಂದ ಟ್ಯಾಂಕ್ ರಚನೆಗೆ ಬಳಸಲಾದ ಬೃಹತ್ ಗಾತ್ರದ ಪಿಲ್ಲರ್‍ಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಪಿಲ್ಲರ್‍ಗೆ ಬಳಸಿದ ಕಾಂಕ್ರಿಟ್ ಪೀಸ್‍ಗಳು ನೆಲಕ್ಕೆ ಬೀಳುತ್ತಿವೆ. ಕಬ್ಬಿಣದ ಸಲಾಕೆಗಳು ತುಕ್ಕು ಹಿಡಿಯಲಾರಂಭಿಸಿದೆ. ಟ್ಯಾಂಕಿನ ಭಾಗದಲ್ಲಿ ಮೂರು ಅಡಿಯಷ್ಟು ವಾಲಿದೆ. ಪರಿಣಾಮ ಮುಂದಿನ ಮಳೆಗಾಲದಲ್ಲಂತೂ ಇದರ ಪಿಲ್ಲರ್‍ಗಳಿಗೆ ಬಳಸಿದ ಸಿಮೆಂಟ್‍ಗಳು ಸಂಪೂರ್ಣ ಉದುರಿ, ಬೀಳುವ ಸ್ಥಿತಿ ತಲುಪಬಹುದು ಎಂದು ಸ್ಥಳೀಯ ಜನರು ತಿಳಿಸುತ್ತಾರೆ.
ಆದರೂ ಪ್ರಸ್ತುತ ಈ ಟ್ಯಾಂಕ್ ತುಂಬಾ ನೀರು ತುಂಬಿಸಿ ಸ್ಥಳೀಯ ಜನತೆಗೆ ಉಪಯೋಗಕ್ಕೆ ಬಳಸಲಾಗುತ್ತಿದೆ. ಸ್ಥಳೀಯ ಶಾಲೆ, ಅಂಗನವಾಡಿ ಸಹಿತ ಮನೆಗಳಿಗೆ ಎಷ್ಟು ಅನುಕೂಲವೋ ಅಷ್ಟೇ ಅಪಾಯಕಾರಿಯೂ ಆಗಿದೆ. ಒಂದೊಮ್ಮೆ ಈ ಟ್ಯಾಂಕ್‍ನ ಬಳಕೆಯನ್ನು ಸ್ಥಗಿತಗೊಳಿಸಿ ಅಲ್ಲಿಂದ ತೆರವು ಮಾಡಿದರೆ ನೀರಿಗೆ ತೊಂದರೆಪಡುವ ಸ್ಥಿತಿ ಉಂಟಾಗಲಿದೆ ಎಂಬ ಆತಂಕ ಮತ್ತೊಂದೆಡೆ ಸ್ಥಳೀಯ ಉಂಟಾಗಿದೆ.ಈ ಟ್ಯಾಂಕ್ ಸಮೀಪದಲ್ಲೇ ಅಂಗನವಾಡಿ ಸಹಿತ ಪ್ರಾಥಮಿಕ ಶಾಲೆಯೊಂದು ಕಾರ್ಯಚರಿಸುತ್ತಿದೆ. ಆಟದ ಸಂದರ್ಭ, ಸಂಜೆ ಹೊತ್ತು ಶಾಲೆ ಬಿಡುವ ಸಂದರ್ಭ ಮಕ್ಕಳು ಈ ಪರಿಸರದಲ್ಲಿ ಆಟವಾಡುತ್ತಿರುತ್ತಾರೆ.

ಮಳೆಗಾಲದಲ್ಲಿ ಜೋರಾಗಿ ಮಳೆ ಗಾಳಿ ಬೀಸಿದರೆ ತೊಂದರೆ ಆಗುವ ಸಾಧ್ಯತೆ ಇದ್ದು, ಏನಾದರೂ ದುರಂತ ಸಂಭವಿಸಿದಲ್ಲಿ ನಾವು ಜವಾಬ್ದಾರರಾಗುತ್ತೇವೋ ಎಂಬ ಭಯ ಅಂಗನವಾಡಿಯವರಿಗೆ ಉಂಟಾಗಿದೆ. ಇನ್ನೊಂದೆಡೆ ಹೆತ್ತವರು ಅಂಗನವಾಡಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂಗನವಾಡಿ ಪುಟಾಣಿಗಳ ಹಾಗೂ ಶಾಲಾ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಂಬಂಧಪಟ್ಟವರು ಅಪಾಯ ಸಂಭವಿಸುವ ಮುನ್ನವೇ ಸೂಕ್ತಕ್ರಮಕೈಗೊಳ್ಳಬೇಕಾಗಿದೆ.

ಕಳೆದ 40 ವರ್ಷಗಳ ಹಿಂದೆ ನನ್ನ ಅಕ್ಕ-ಭಾವಂದಿರಿಗೆ ಈ ಜಾಗ ಸಿಕ್ಕಿದೆ. ಬಳಿಕ ಕೆಲಸದ ನಿಮಿತ್ತ ಬೇರೆಡೆಗೆ ವರ್ಗಾವಣೆಗೊಂಡು ಇಲ್ಲಿಂದ ಅವರು ತೆರಳಿರುತ್ತಾರೆ. ಈ ನಡುವೆ ಟ್ಯಾಂಕ್ ನಿರ್ಮಿಸಿದವರು ಖಾಲಿ ಜಾಗ ಎಂದು ಸರಿಯಾಗಿ ಪರಿಶೀಲಿಸದೆ, ಹಲವು ಬಾರಿ ಟ್ಯಾಂಕ್ ತೆರವುಗೊಳಿಸಬೇಕೆಂದು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಇದೀಗ ಮತ್ತೊಮ್ಮೆ ತೆರವಿಗೆ ಮನವಿ ನೀಡಲಿದ್ದೇವೆ ಎಂದು ಹೇಳುತ್ತಾರೆ ಸ್ಥಳೀಯ ಮನೆ ನಿವಾಸಿ ತಿರುಮಲೇಶ್ವರಿ ಅವರು.

ಒಟ್ಟಿನಲ್ಲಿ ಸುಮಾರು 40 ವರ್ಷ ಹಳೆಯದಾದ ನೀರಿನ ಟ್ಯಾಂಕ್ ರಚನೆಗೆ ಬಳಸಲಾದ ಬೃಹತ್ ಗಾತ್ರದ ಪಿಲ್ಲರ್‍ಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಪಿಲ್ಲರ್‍ಗೆ ಬಳಸಿದ ಕಾಂಕ್ರಿಟ್ ಪೀಸ್‍ಗಳು ನೆಲಕ್ಕೆ ಬೀಳುತ್ತಿವೆ. ಇನ್ನಾದರೂ ಸಂಬಂಧಪಟ್ಟವರು ಈ ಟ್ಯಾಂಕ್ ಬೀಳುವ ಮುಂಚಿತವಾಗಿ ಟ್ಯಾಂಕ್ ತೆರವುಗೊಳಿಸಿ ಸ್ಥಳೀಯರ ಆತಂಕವನ್ನು ದೂರ ಮಾಡಬೇಕಿದೆ.

Related posts

Leave a Reply

Your email address will not be published. Required fields are marked *