Header Ads
Breaking News

ಉಪ್ಪು ನೀರಿಗೆ ಹರೆಗೋಡು ಕೃಷಿಕರು ತತ್ತರ || ಸಮಸ್ಯೆ ಬಗೆಹರಿಸದಿದ್ದರೆ ಚುನಾವಣಾ ಬಹಿಷ್ಕಾರ

ಊರಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ವಿಶಾಲ ಕೃಷಿ ಭೂಮಿ ಭತ್ತದ ಪೈರಿನ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಅಲ್ಲಲ್ಲಿ ದ್ವಿದಳ ಧಾನ್ಯಗಳ ಕೃಷಿ ಆಗುತ್ತಿತ್ತು. ಐದು ಎಕ್ರೆ ಪ್ರದೇಶದಲ್ಲಿ ಸಮೃದ್ಧ ಕಬ್ಬಿನ ಬೆಳೆ ಬರ್ತಾ ಇತ್ತು. ಆದರೆ ಜೀವನ ಕಟ್ಟಿಕೊಡುವ ವಿಶಾಲ ಕೃಷಿ ಪ್ರದೇಶದಲ್ಲಿ ಇದೀಗ ಉಪ್ಪು ನೀರಿನದ್ದೆ ಕಾರುಬಾರು..! ಆ ಊರಿನ ಕೃಷಿಕರ ಗೋಳಿನ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.
.ಕುಂದಾಪುರ ತಾಲೂಕು, ಕಟ್‌ಬೇಲ್ತೂರು ಗ್ರಾಮ ಹರೆಗೋಡು ಪರಿಸರದ ಕೃಷಿ ಬದುಕು ಹರೋಹರ. ಯಾವತ್ತು ಸಿಗಡಿ ಕೆರೆ ನಿರ್ಮಾಣವಾಯಿತೋ ಅಂದಿನಿಂದ ಇಂದಿನವರಗೆ ಕೃಷಿಕರು ಅನುಭವಿಸಿದ ವೇದನೆ ಅಕ್ಷರರೂಪಕ್ಕೆ ಇಳಿಸೋದು ಕಷ್ಟ! ಒಂದು ಕಡೆ ಕೆರೆ, ಕೊತ್ತಲಗಳ ಕಾಯಕಲ್ಪದ ಯೋಜನೆ ಕಳಪೆ ಕಾಮಗಾರಿ ಕೆರೆಗಳನ್ನೇ ಮುಚ್ಚಿ ಹಾಕಿದರೆ, ಉಪ್ಪುನೀರು ತಡೆ ಕಿಂಡಿ ಆಣೆಕಟ್ಟು ಕಳಪೆ ಕಾಮಗಾರಿಗೆ ನಿರ್ಮಿಸಿದ ಮೂರೇ ತಿಂಗಳಲ್ಲಿ ಕುಸಿದಿದೆ. ಸಿಗಡಿ ಕೆರೆ ಉಪ್ಪು ನೀರಿಗಾಗಿ ಕಿಂಡಿಆಣೆಕಟ್ಟು ಬುಡ ಕೊರೆದು ಹಾಕಲಾಗಿದೆ.
ಹರೆಗೋಡಿನಲ್ಲಿ ಐನೂರು ಮಿಕ್ಕಿ ಪ್ರದೇಶದಲ್ಲಿ ಹಿಂದೆ ಎರಡು ಭತ್ತದ ಬೆಳೆ, ನಂತರ ದವಸ ಧಾನ್ಯ ಬೆಳೆಯುತ್ತಿದ್ದರು. ವಿಶಾಲ ಬಯಲು ಪ್ರದೇಶದಲ್ಲಿದ್ದ ಕಾಡಿನಕೆರೆ ನೀರು ಬಳಸಿಕೊಂಡು ಕಬ್ಬು ಬೆಳೆ ತೆಗೆಯಲಾಗುತ್ತಿತ್ತು. ಕೆರೆ ಕಾಯಕಲ್ಪ ಯೋಜನೆ ದುರಸ್ತ್ತಿಗೆ ಇಡೀ ಕೆರೆಯೇ ಹಳ್ಳಹತ್ತಿ ಹೋಗಿದ್ದು, ಕಬ್ಬು ಕೃಷಿ ಕೈ ಬಿಡಲಾಗಿದೆ. ಕೃಷಿ ಪ್ರದೇಶದ ತುತ್ತತುದಿಯಲ್ಲಿ ಉಪ್ಪುನೀರು ತಡೆಗಾಗಿ ಕೃಷಿಕರೇ ಕಟ್ಟೆ ಕಟ್ಟಿ ಅದಕ್ಕೊಂದು ರಂಧ್ರ ಕೊರೆದು, ನೀರಿನ ಉಬ್ಬರ ಇಳಿತಕ್ಕೆ ಹೊಂದಿಕೊಳ್ಳುವಂತೆ ಬಾಗಿಲು ನಿರ್ಮಿಸಿಕೊಂಡು ಉಪ್ಪುನೀರು ಒಳಗೆ ಬಾರದಂತೆ ತಡೆ ಒಡ್ಡಿಕೊಂಡಿದ್ದರು. ರೈತರ ತಡೆಗೋಡೆ ಸಮೀಪದಲ್ಲೇ ಉಪ್ಪುನೀರು ತಡೆಗೆ ನಿರ್ಮಿಸಿದ ಕಿಂಡಿ ಅಣೆಕಟ್ಟು ಮೂರೇ ತಿಂಗಳಲ್ಲಿ ಕುಸಿದು ಬಿದ್ದಿದೆ. ರೈತರು ನಿರ್ಮಿಸಿದ ಸ್ವಯಂ ಚಾಲಿತ ಬಾಗಿಲು ಸಿಗಡಿ ಕೆರೆಗೆ ನೀರು ಹಾಯಿಸಲು ತೆರೆದಿಡುವುದರಿಂದ ಉಪ್ಪುನೀರು ಸರಾಗ ಬಂದು ಕೃಷಿ ಭೂಮಿ ಆವರಿಸಿಕೊಳ್ಳುತ್ತಿದೆ.

ಸಿಗಡಿ ಕೃಷಿಗಾಗಿ ಉಪ್ಪುನೀರು ಒಳಗೆ ಬರಲು ಎಲ್ಲಾ ಅನುಕೂಲ ಮಾಡಿಕೊಂಡಿದ್ದರಿಂದ ಸುಮಾರು ೫೦ ಎಕ್ರೆ ಕೃಷಿ ಗದ್ದೆಯಲ್ಲಿ ಬೆಳೆಯುತ್ತಿರುವ ಭತ್ತದ ಕೃಷಿ ಭೂಮಿಯಲ್ಲಿ ಮುಂಗಾಲಿನ ತನಕ ಉಪ್ಪುನೀರು ನಿಂತಿದೆ. ಈ ಬಾರಿ ಮಳೆಗಾಲದ ಭತ್ತದ ಬೆಳೆ ಕೂಡಾ ಕಷ್ಟಕರ. ಒಟ್ಟಾರೆ ಸಿಗಡಿ ಕೆರೆ ದಾಹಕ್ಕೆ ಕೃಷಿಕರ ಬದುಕು ಬಲಿ ಪಡೆಯಲಾಗಿದ್ದು, ರೈತರ ನೆರವಿಗೆ ಯಾರೂ ಬಾರದಿರುವುದು ಕೃಷಿಗೆ ಎಷ್ಟು ಪ್ರೋತ್ಸಾಹ ಸಿಗುತ್ತದೆ ಎನ್ನೋದಕ್ಕೆ ಸಾಕ್ಷಿ. ಉಪ್ಪುನೀರು ದಾಂಗುಡಿಗೆ ಬೇಸತ್ತ ಹರೆಗೋಡು ಕೃಷಿಕರು ಪರಿಹಾರ ನೀಡಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆಗೂ ಹಿಂದೆ ಮುಂದೆ ನೋಡೋದಿಲ್ಲ ಎಂದು ಎಚ್ಚರಿಸಿದ್ದಾರೆ.

ಇನ್ನು ಹರೆಗೋಡು ರೈತರ ಸಮಸ್ಯೆ ದೊಡ್ಡದೇ ಅಲ್ಲ. ಕೃಷಿ, ಅರಣ್ಯ ಹಾಗೂ ಜನಪ್ರತಿನಿಧಿಗಳ ಬದ್ದತೆಯೇ ದೊಡ್ಡ ಕೊರತೆ. ರಾಜಾಡಿ ಸೇತುವೆ ಬಳಿಯಿಂದ ನುಗ್ಗಿಬರುವ ಉಪ್ಪುನೀರು ತಡೆಗೆ ಚಿಕ್ಕದೊಂದು ಕಟ್ಟೆ ಕಟ್ಟಿದರೆ ಸಮಸ್ಯೆ ಪರಿಹಾರ ಆಗುತ್ತದೆ. ಅದಕ್ಕೆ ಕೋಟಿ ಲೆಕ್ಕದಲ್ಲಿ ಅನುದಾನ ಕೂಡಾ ಬೇಡ. ಸಿಗಡಿ ಕೆರೆಗೆ ಉಪ್ಪುನೀರು ಬೇಕಿದ್ದರೆ ಹೊಳೆಯಿಂದ ನೇರವಾಗಿ ಪಡೆಯಲು ಸಾಧ್ಯವಿದ್ದರೂ ರೈತರು ನಿರ್ಮಿಸಿಕೊಂಡ ಕಟ್ಟೆಯ ಬಾಗಿಲು ತೆರೆಯುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಗದ್ದೆಯಲ್ಲಿ ಉಪ್ಪು ನೀರು ನಿಲ್ಲುವುದರಿಂದ ಪರಿಸರದ ಬಾವಿಗಳಲ್ಲೂ ಕೂಡ ಉಪ್ಪು ನೀರಿನ ಅಂಶ ಬರತೊಡಗಿದೆ. ಲಕ್ಷಾಂತರ ರೂ. ವ್ಯಯಿಸಿ ಬಾವಿ ನಿರ್ಮಿಸಿದ್ದರೂ ಬಾವಿ ನೀರು ಉಪ್ಪಾಗಿ ಬೇರೆ ಕಡೆಯಿಂದ ನೀರು ತರುವ ಸ್ಥಿತಿ ಇದೆ.

ಇಲ್ಲಿನ ಕೃಷಿಕರ ಸಮಸ್ಯೆಗಳಿಗೆ ಸಂಬಂಧಪಟ್ಟ ಯಾವ ಜನಪ್ರತಿನಿಧಿಗಳು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪರಿಹಾರ ಕಂಡುಕೊಂಡಿಲ್ಲ. ಈ ಹಿಂದೆ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಒಬ್ಬರೇ ಇಲ್ಲಿನ ಕೃಷಿಕರ ಸಮಸ್ಯೆ ಕೇಳಿ ಸ್ಥಳಕ್ಕೆ ಬಂದು ಸಮಸ್ಯೆ ಕಣ್ಣಾರೆ ಕಂಡಿದ್ದಾರೆ. ಸ್ಥಳದಿಂದಲೇ ದೂರವಾಣಿ ಮೂಲಕ ಅಧಿಕಾರಿಗಳ ಸಂಪರ್ಕಿಸಿ ಸಮಸ್ಯೆ ಪರಿಹಾರ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ತಾಕೀತು ಮಾಡಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಯೂ ಇದುವರೆಗೂ ಕೃಷಿಕರ ಕಷ್ಟ ಏನೂ ಎಂದು ಕೇಳುವ ಗೋಜಿಗೂ ಹೋಗಿಲ್ಲ. ಜನಪ್ರತಿನಿಧಿಗಳ, ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ರೈತರು ಪ್ರತಿಭಟನೆಯ ಜತೆ ಚುನಾವಣಾ ಬಹಿಷ್ಕಾರಕ್ಕೂ ಮುಂದಾಗಿದ್ದಾರೆ.

Related posts

Leave a Reply

Your email address will not be published. Required fields are marked *